ಸಾರಾಂಶ
ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಅವರ ಸಹಿ ಇರುವ ಆದೇಶ ಪ್ರತಿಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ, ತಾಪಂ ಇಒ, ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ರವಾನಿಸಿರುವುದಲ್ಲದೆ, ಜ.೨೫ರಂದು ಸಂಜೆ ೭.೩೦ಕ್ಕೆ ಪಿಡಿಒ ಅವರು ಪ್ರತಿಯನ್ನು ಸ್ವೀಕರಿಸಿರುವ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಗ್ರಾಮದಲ್ಲಿ ವಿವಾದಿತ ಧ್ವಜಸ್ತಂಭವನ್ನು ತೆರವುಗೊಳಿಸಲು ತಾಲೂಕು ಆಡಳಿತ ಸೆ.೨೫ ರಂದೇ ಆದೇಶ ಹೊರಡಿಸಿದ್ದ ಸಂಗತಿ ಇದೀಗ ಬಹಿರಂಗಗೊಂಡಿದೆ. ಸ್ಥಳದಲ್ಲಿರುವ ಧ್ವಜಸ್ತಂಭವನ್ನು ತೆರವುಗೊಳಿಸಿ ಪಂಚಾಯಿತಿ ಆಸ್ತಿಯನ್ನು ಸುಪರ್ದಿಗೆ ಪಡೆಯುವಂತೆ ಗ್ರಾಪಂಗೆ ಸೂಚಿಸಿ ಆದೇಶಿಸಿರುವುದು ಕಂಡುಬಂದಿದೆ.ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಅವರ ಸಹಿ ಇರುವ ಆದೇಶ ಪ್ರತಿಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ, ತಾಪಂ ಇಒ, ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ರವಾನಿಸಿರುವುದಲ್ಲದೆ, ಜ.೨೫ರಂದು ಸಂಜೆ ೭.೩೦ಕ್ಕೆ ಪಿಡಿಒ ಅವರು ಪ್ರತಿಯನ್ನು ಸ್ವೀಕರಿಸಿರುವ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗ್ರಾಪಂಯು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನವರಿಗೆ ನಿಯಮಬಾಹಿರವಾಗಿ ಗ್ರಾಪಂ ಆಸ್ತಿಯಾದ ಕೆರಗೋಡು ಗ್ರಾಮದ ರಂಗಮಂದಿರದ ಮುಂಭಾಗದಲ್ಲಿ ಸರ್ಕಾರದ ಅನುಮತಿಯಿಲ್ಲದೆ ಧ್ವಜಸ್ತಂಭ ನಿರ್ಮಿಸಲು ನೀಡಿರುವ ಅನುಮತಿಯಿಂದ ಶಾಂತಿಭಂಗಕ್ಕೆ ಕಾರಣವಾಗುವುದರಿಂದ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಡಿ.೨೯, ೨೦೨೩ ರಂದು ನಡೆದ ಕೆರಗೋಡು ಗ್ರಾಪಂ ಸಾಮಾನ್ಯಸಭೆಯ ನಡವಳಿ ವಿಷಯ ಸಂಖ್ಯೆ: ೭(೧)ರಲ್ಲಿನ ನಿರ್ಣಯವನ್ನು ಹಾಗೂ ಸಭೆಯ ನಡವಳಿ ತೀರ್ಮಾನದಂತೆ ಜ.೧೯ರಂದು ನೀಡಿರುವ ಅನುಮತಿ ಪತ್ರವನ್ನು ಅಮಾನತುಗೊಳಿಸಿ ನಿಷೇಧಿಸಿ ಆದೇಶಿಸಿರುವುದಾಗಿ ತಿಳಿಸಿದೆ. ಅಲ್ಲದೆ ಸ್ಥಳದಲ್ಲಿರುವ ಧ್ವಜಸ್ತಂಭವನ್ನು ತೆರವುಗೊಳಿಸಿ ಗ್ರಾಪಂ ಆಸ್ತಿಯನ್ನು ಸುಪರ್ದಿಗೆ ಪಡೆದು ಯಥಾಸ್ಥಿತಿ ಕಾಪಾಡುವಂತೆ ಗ್ರಾಪಂ ಪಿಡಿಒ ಅವರಿಗೆ ಸೂಚಿಸಲಾಗಿದೆ.ಧ್ವಜಸ್ತಂಭದ ವಿಚಾರವಾಗಿ ಗ್ರಾಪಂ ಪಿಡಿಒ ಸಲ್ಲಿಸಿರುವ ವರದಿಯಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನವರು ರಂಗಮಂದಿರದ ಆವರಣದಲ್ಲಿ ಧ್ವಜಸ್ತಂಭ ನಿರ್ಮಿಸಲು ಅವಕಾಶ ಕೋರಿದ್ದು, ಆ ಧ್ವಜಸ್ತಂಭದಲ್ಲಿ ತ್ರಿವರ್ಣಧ್ವಜ ಮತ್ತು ಕರ್ನಾಟಕ ಬಾವುಟ ಹಾರಿಸಲು ಒಪ್ಪಿ ಗ್ರಾಪಂ ಷರತ್ತುಗಳಿಗೆ ಬದ್ಧರಾಗಿರುವುದಾಗಿ ಅರ್ಜಿ ಸಲ್ಲಿಸಿದ್ದರು. ಅದರ ಮೇರೆಗೆ ಮುಚ್ಚಳಿಕೆ ಪತ್ರ ಪಡೆದು ಅನುಮತಿ ನೀಡಲಾಗಿತ್ತು.
ಆದರೆ, ಗೌರಿಶಂಕರ ಸೇವಾ ಟ್ರಸ್ಟ್‌ನವರು ಷರತ್ತುಗಳನ್ನು ಉಲ್ಲಂಘಿಸಿ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಆರೋಹಣ ಮಾಡಿರುವುದು ನಿಯಮಬಾಹಿರವಾಗಿದ್ದು, ಈ ಸಂಬಂಧ ಜ.೨೧ರಂದು ಗ್ರಾಪಂ ಕಚೇರಿಗೆ ಟ್ರಸ್ಟ್‌ನವರನ್ನು ಕರೆಸಿ ಧ್ವಜ ತೆರವುಗೊಳಿಸುವಂತೆ ತಿಳಿಸಲಾಗಿತ್ತು. ಆದರೂ ಅದಕ್ಕೆ ಮನ್ನಣೆ ನೀಡದೆ ಯಥಾಸ್ಥಿತಿಯಲ್ಲಿ ಧ್ವಜವನ್ನು ಬಿಟ್ಟಿದ್ದರು. ಇದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಅಧಿನಿಯಮ ೫೭ರ ಪ್ರಕರಣದ ಪರಂತುಕದನ್ವಯ ಅಧಿನಿಯಮ ೨೩೭ನೇ ಪ್ರಕರಣದಡಿ ಕ್ರಮಕ್ಕೆ ಕೋರಿ ತಾಪಂ ಆಡಳಿತಾಧಿಕಾರಿಗೆ ಶಿಫಾರಸು ಮಾಡಿದ್ದ ಮೇರೆಗೆ ಧ್ವಜಸ್ತಂಭ ತೆರವಿಗೆ ಆದೇಶ ಹೊರಡಿಸಲಾಗಿತ್ತು.