ಸಾರಾಂಶ
ಐಆರ್‌ಬಿ ಕಂಪನಿಯ ಅಧ್ವಾನದಿಂದಾಗಿ ನಿರ್ಗತಿಕರಾಗುವ ಪರಿಸ್ಥಿಗೆ ಬಂದಿದ್ದೇವೆ. ಪ್ರತಿವರ್ಷವೂ ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಅವಘಡ ಸಂಭವಿಸುತ್ತಲೆ ಇದೆ. ಹೀಗಾಗಿ ಸರ್ಕಾರ ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಶಾಶ್ವತ ಪರಿಹಾರಕ್ಕೆ ಕಾರ್ಯೋನ್ಮುಖರಾಗಬೇಕು.
ಅಂಕೋಲಾ: ಗುಡ್ಡ ಕುಸಿದು ಮನೆ, ಸೂರು ಎಲ್ಲ ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ಆದರೆ ತಾಲೂಕಾಡಳಿತ ಮಾತ್ರ ಇಲ್ಲದೆ ಬರದೇ ನಿರ್ಲಕ್ಷ್ಯ ಧೋರಣೆ ತಳಿದಿರುವ ತೀವ್ರ ಬೇಸರ ತಂದಿದೆ. ಕೂಡಲೆ ತಾಲೂಕಾಡಳಿತ ಧಾವಿಸಿ ಹಾನಿಯ ಸಮೀಕ್ಷೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಉಳುವರೆಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ನಾಗೇಶ ರಾಮಾ ಅಂಬಿಗ ಮಾತನಾಡಿ, ಐಆರ್‌ಬಿ ಕಂಪನಿಯ ಅಧ್ವಾನದಿಂದಾಗಿ ನಿರ್ಗತಿಕರಾಗುವ ಪರಿಸ್ಥಿಗೆ ಬಂದಿದ್ದೇವೆ. ಪ್ರತಿವರ್ಷವೂ ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ಅವಘಡ ಸಂಭವಿಸುತ್ತಲೆ ಇದೆ. ಹೀಗಾಗಿ ಸರ್ಕಾರ ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಶಾಶ್ವತ ಪರಿಹಾರಕ್ಕೆ ಕಾರ್ಯೋನ್ಮುಖರಾಗಬೇಕು ಎಂದು ಆಗ್ರಹಿಸಿದರು.ಸಗಡಗೇರಿ ಗ್ರಾಪಂ ಸದಸ್ಯ ಕೃಷ್ಣ ಗೌಡ ಮಾತನಾಡಿ, ಉಳುವರೆ ಗ್ರಾಮದಲ್ಲಿ ಕೋಟ್ಯಂತರ ರುಪಾಯಿ ಆಸ್ತಿ ಹಾನಿಯಾಗಿದೆ. ಹಾಗೆ ನಾಪತ್ತೆ ಆದ ಸಣ್ಣು ಗೌಡ ಅವರ ಪತ್ತೆಗೆ ವಿಶೇಷ ಗಮನವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಇಲ್ಲಿಯ ಜುನರು ಕಡುಬಡವರಾಗಿದ್ದು, ಈ ದುರಂತದಿಂದಾಗಿ ಜನತೆಯ ಬದುಕು ಬೀದಿಗೆ ಬೀಳುವಂತಾಗಿದೆ ಎಂದರು.
ಸಂತೋಷ ಅಂಬಿಗ ಮಾತನಾಡಿ, ಇಲ್ಲಿ 8 ಮನೆಗಳು ಸಂಪೂರ್ಣ ಹಾನಿಯಾಗಿದೆ. 30 ಮನೆಗಳಿಗೆ ಭಾಗಶಃ ಹಾನಿಯಾಗಿ ನೂರಾರು ಜನರು ಅತಂತ್ರ ಸ್ಥಿತಿಗೆ ತಲೂಪಿದರೂ ತಾಲೂಕಾಡಳಿತ ಮಾತ್ರ ಇಲ್ಲಿಗೆ ಬರದೆ ನಮ್ಮನ್ನು ತಾತ್ಸಾರ ಭಾವನೆಯಿಂದ ನೋಡುತ್ತಿರುವುದು ಖಂಡನೀಯ ಎಂದರು.ಗೌಡ ಸಮಾಜದ ಯಜಮಾನ ರಾಮದಾಸ ಹುಲಿಯಪ್ಪ ಗೌಡ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷೆ ಆರತಿ ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.