ತರಳಬಾಳು ಹುಣ್ಣಿಮೆಯ ಮಹಾಮಂಟಪ ಮುಂಭಾಗದಲ್ಲಿ ಸಿದ್ಧಗೊಳಿಸಿದ್ದ ಪಾರಂಪರಿಕ ಮಾದರಿಯ ಕುಸ್ತಿ ಅಖಾಡದಲ್ಲಿ ಶನಿವಾರ ಜರುಗಿದ ರಾಜ್ಯ ಮಟ್ಟದ ಮುಕ್ತ ಹಾಗೂ ಆಹ್ವಾನಿತ ಕುಸ್ತಿ ಸ್ಪರ್ಧೆಗಳಿಗೆ ಭದ್ರಾವತಿಯ ರಾಷ್ಟ್ರೀಯ ಕುಸ್ತಿ ಪಟು ಮಹೇಶ್ವರಪ್ಪ ಚಾಲನೆ ನೀಡಿದರು.

ಭದ್ರಾವತಿ: ತರಳಬಾಳು ಹುಣ್ಣಿಮೆಯ ಮಹಾಮಂಟಪ ಮುಂಭಾಗದಲ್ಲಿ ಸಿದ್ಧಗೊಳಿಸಿದ್ದ ಪಾರಂಪರಿಕ ಮಾದರಿಯ ಕುಸ್ತಿ ಅಖಾಡದಲ್ಲಿ ಶನಿವಾರ ಜರುಗಿದ ರಾಜ್ಯ ಮಟ್ಟದ ಮುಕ್ತ ಹಾಗೂ ಆಹ್ವಾನಿತ ಕುಸ್ತಿ ಸ್ಪರ್ಧೆಗಳಿಗೆ ಭದ್ರಾವತಿಯ ರಾಷ್ಟ್ರೀಯ ಕುಸ್ತಿ ಪಟು ಮಹೇಶ್ವರಪ್ಪ ಚಾಲನೆ ನೀಡಿದರು. ಕಣದಲ್ಲಿ ಜಗಜಟ್ಟಿಗಳು ತಮ್ಮದೇ ಆದ ಪಟ್ಟು ಹಾಕಿ ಕುಸ್ತಿ ಹಿಡಿದರೆ, ಇತ್ತ ಮೈದಾನದ ಸುತ್ತ ಕಿಕ್ಕಿರಿದು ನಿಂತಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು. ಪೈಲ್ವಾನ್‌ಗಳ ಕುಸ್ತಿ ಹೋರಾಟ ರೋಚಕ ತಿರುವುಗಳಿಗೆ ಸಾಕ್ಷಿ ಆಯಿತು. ಪೈಲ್ವಾನರು ತೊಡೆ ತಟ್ಟುತ್ತಾ ಮೈಯೆಲ್ಲಾ ಮಣ್ಣಾಗಿಸಿಕೊಂಡು ಅಂಗಳದ ತುಂಬೆಲ್ಲಾ ಪಟ್ಟುಗಳನ್ನು ಪ್ರದರ್ಶಿಸಿ ಗೆಲ್ಲಲು ಶಕ್ತಿ ಪ್ರದರ್ಶಿಸಿದರು. ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಹರಿಹರ, ಮೈಸೂರು, ಕನಕಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ೧೫೦ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದರು. ಇಬ್ಬರೂ ಪೈಲ್ವಾನರ ಪಟ್ಟು ಮತ್ತು ಚಾಕಚಕ್ಯತೆ ಪ್ರದರ್ಶನ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಹೀಗೆ ಹಲವು ಜಗಜಟ್ಟಿಗಳು ಅಖಾಡಕ್ಕೆ ಇಳಿದು ಕಾದಾಡಿದರು. ಗೆಲುವಿಗಾಗಿ ಮಣ್ಣಲ್ಲಿ ಮಿಂದೆದ್ದರು. ಇನ್ನೂ ಕೆಲವರು ಸೋತು ಮಣ್ಣು ಮುಕ್ಕಿದರು. ಪ್ರೇಕ್ಷಕರ ಪ್ರೋತ್ಸಾಹಕ್ಕೆ ಪೈಲ್ವಾನರು ಖುಷಿಗೊಂಡರು.

ರಾಷ್ಟ್ರೀಯ ಕುಸ್ತಿ ಪಟು ಓಂಕಾರಪ್ಪ, ತರಳಬಾಳು ಹುಣ್ಣಿಮೆ ಸ್ವಾಗತ ಸಮಿತಿಯ ಸಂಚಾಲಕರಾದ ತೀರ್ಥಯ್ಯ, ರವಿಕುಮಾರ್, ಮೂರ್ತಿ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.