ಅನಧಿಕೃತ ಮರಳುಗಾರಿಕೆ/ ಸಾಗಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಚಾಲಿತ ದಳ ರಚಿಸಿ ಜಿಲ್ಲಾಧಿಕಾರಿ, ಜಿಲ್ಲಾ ಮರಳು ಸಮಿತಿ ಅಧ್ಯಕ್ಷರೂ ಆಗಿರುವ ಮುಲ್ಲೈ ಮುಗಿಲನ್‌ ಎಂ.ಪಿ. ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ/ ಸಾಗಾಟದ ಆರೋಪ ಕೇಳಿಬಂದ ಬೆನ್ನಲ್ಲೇ ಇಂತಹ ಅನಧಿಕೃತ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ಅನಧಿಕೃತ ಮರಳುಗಾರಿಕೆ/ ಸಾಗಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಚಾಲಿತ ದಳ ರಚಿಸಿ ಜಿಲ್ಲಾಧಿಕಾರಿ, ಜಿಲ್ಲಾ ಮರಳು ಸಮಿತಿ ಅಧ್ಯಕ್ಷರೂ ಆಗಿರುವ ಮುಲ್ಲೈ ಮುಗಿಲನ್‌ ಎಂ.ಪಿ. ಆದೇಶ ಹೊರಡಿಸಿದ್ದಾರೆ.

5 ಚಾಲಿತ ದಳ ರಚನೆ:

ಒಟ್ಟು ಐದು ಚಾಲಿತ ದಳಗಳನ್ನು ರಚಿಸಲು ಸೂಚಿಸಲಾಗಿದೆ. ಪ್ರತಿ ತಂಡಕ್ಕೆ ನೋಡಲ್‌ ಅಧಿಕಾರಿಯನ್ನಾಗಿ ಒಬ್ಬರು ಹಿರಿಯ ಅಧಿಕಾರಿ, ಐವರು ಸದಸ್ಯರನ್ನು ನಿಯೋಜಿಸಲಾಗಿದೆ. ನಿಯೋಜಿಸಿದ ಇಲಾಖೆ ಸದಸ್ಯರು ತಮ್ಮ ಜತೆ ಅಧೀನ ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯಾಚರಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಮೊಕದ್ದಮೆ ದಾಖಲಿಸಿ:

ಗಸ್ತು ನಡೆಸುವ ಸಂದರ್ಭ ಯಾವುದೇ ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ಅಕ್ರಮವಾಗಿ ಮರಳು ಗಣಿಗಾರಿಕೆ, ದಾಸ್ತಾನು ಹಾಗೂ ಸಾಗಾಟ ಮಾಡುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಬೇಕು. ಅನಧಿಕೃತ ಮರಳು ದಾಸ್ತಾನು ಕಂಡುಬಂದರೆ ವಶಪಡಿಸಲು ಸೂಚಿಸಲಾಗಿದೆ.

ಅನಧಿಕೃತ ಮರಳು ಗಣಿಕಾರಿಕೆಯಲ್ಲಿ ಯಾವುದಾದರೂ ಖಾಸಗಿ ಜಮೀನಿನ ಭೂಮಾಲೀಕರು ತಮ್ಮ ಜಮೀನುಗಳಲ್ಲಿ ದಕ್ಕೆ ನಿರ್ಮಿಸಿದ್ದರೆ ಅಥವಾ ನದಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆ ನಿರ್ಮಿಸಿ, ಅನಧಿಕೃತ ಮರಳು ಸಾಗಾಟಕ್ಕೆ ಸಹಕರಿಸಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ಕಂದಾಯ ಇಲಾಖೆಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಬೇಕು. ಮಾತ್ರವಲ್ಲದೆ, ಸರ್ಕಾರದ ಅಧಿಸೂಚನೆ ಹಾಗೂ ಕರ್ನಾಟಕ ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಯಡಿ ಮೊಕದ್ದಮೆ ದಾಖಲಿಸಲು ವರದಿ ನೀಡಬೇಕು.

ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಖಾಸಗಿ ಕಾರ್ಯಗಳಿಗೆ ಮರಳು ದಾಸ್ತಾನು ಮಾಡಿರುವ ಪ್ರದೇಶಗಳಿಗೆ ಭೇಟಿ ನೀಡಿ, ಬಿಲ್‌ ಅಥವಾ ರಶೀದಿ ಪರಿಶೀಲಿಸಬೇಕು. ಅಧಿಕೃತ ಬಿಲ್‌ ಇಲ್ಲದಿದ್ದರೆ ಅಂಥವರ ವಿರುದ್ಧ ಕ್ರಮ ವಹಿಸಲು ಗಣಿ ಇಲಾಖೆಗೆ ವರದಿ ಸಲ್ಲಿಸಬೇಕು. ತಾವು ನಡೆಸಿದ ಕಾರ್ಯಾಚರಣೆ ಬಗ್ಗೆ ಪ್ರತಿ ವಾರದ ಕೊನೆಯ ದಿನ ಅನುಪಾಲನಾ ವರದಿ ಸಲ್ಲಿಸಬೇಕು.

ಅಕ್ರಮ ಮರಳುಗಾರಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾದರೆ ಅಥವಾ ಚಾಲಿತ ದಳಗಳ ಲೋಪದೋಷ ಕಂಡುಬಂದರೆ ನೇರ ಹೊಣೆಗಾರರನ್ನಾಗಿ ಮಾಡಿ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಎಚ್ಚರಿಸಲಾಗಿದೆ.

..................

ಅಕ್ರಮ ಮರಳು ಗಣಿಗಾರಿಕೆ/ ಸಾಗಾಟದ ಸ್ಥಳಗಳು

1. ಅಡ್ಡರು ಮೂಳೂರಿನಿಂದ ಗುರುಪುರ ಸೇತುವೆವರೆಗೆ (ದೋಣಿಂಜೆ, ಕೆಳಗಿನ ಕೆರೆ, ಫಲ್ಗುಣಿ ನದಿ ತೀರ, ಮಲ್ಲೂರು, ಮಳವೂರು).

2. ಗುರುಪುರ ಸೇತುವೆಯಿಂದ ಅದ್ಯಪಾಡಿವರೆಗೆ.

3. ತುಂಬೆ- ಅರ್ಕುಳ- ಫರಂಗಿಪೇಟೆ- ವಳಚ್ಚಿಲ್‌- ಅಡ್ಯಾರು- ಕಣ್ಣೂರು- ಪಡೀಲ್‌.

4. ಕೊಟ್ಟಾರ- ಸುರತ್ಕಲ್‌- ಮುಕ್ಕ- ಪಾವಂಜೆ.

5. ಬೋಳೂರು- ಜೆಪ್ಪಿನಮೊಗರು- ಕಣ್ಣೂರು- ಕೂಳೂರು- ಸುಲ್ತಾನ್‌ ಬತ್ತೇರಿ.