ಕನ್ನಡಪ್ರಭ ವಾರ್ತೆ ಸಿರಿಗೆರೆ
ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನಕ್ಕೆ ವಿದ್ಯಾರ್ಥಿ ಏರಿದಾಗ ಗುರುವಿಗೆ ಆಗುವ ಆನಂದಕ್ಕೆ ಬೆಲೆಯೇ ಇರುವುದಿಲ್ಲ. ಅಂತಹ ಸಂತೋಷವನ್ನು ಗುರುಗಳು ಮನದಾಳದಲ್ಲಿ ಅನುಭವಿಸುತ್ತಾರೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.ಸಮೀಪದ ಬಹದ್ದೂರುಗಟ್ಟದ ಕಲ್ಲಮ್ಮ ಪ್ರೌಢಶಾಲೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಗುರು-ಶಿಷ್ಯರ ಬಾಂಧವ್ಯ ಅಮೂಲ್ಯವಾದುದು. ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಅದೊಂದು ಸಾರ್ಥಕ ಅನುಭೂತಿಯನ್ನು ಅನುಭವಿಸುವ ಕ್ಷಣ ಎಂದರು.ವಿದ್ಯೆ ಕಲಿಸಿದ ಗುರುವಿನ ಸೇವೆಯಲ್ಲಿ ಸ್ಮರಿಸುವುದು ಮತ್ತು ಅವರನ್ನು ಗೌರವಿಸುದರಿಂದ ಅವರಿಂದ ಕಲಿತ ಶಿಷ್ಯರ ಮನದಲ್ಲಿ ಧನ್ಯತಾಭಾವ ಮೂಡುತ್ತದೆ. ಇಂತಹ ಕೆಲಸ ಈ ಶಾಲೆಯಲ್ಲಿ 14 ವರ್ಷಗಳ ನಂತರ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಆದರೆ ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಾರೆ. ಇದು ಬೇಸರದ ಸಂಗತಿ ಎಂದರು.
ವಿದ್ಯಾರ್ಥಿಗಳ ಕಲಿಕೆ ಶ್ರೇಷ್ಠ ಮಟ್ಟದಲ್ಲಿರಬೇಕು ಎಂಬ ಕಾರಣಕ್ಕಾಗಿ ಗುರುಗಳು ದಂಡಿಸುತ್ತಾರೆ. ಬಾಲ್ಯದಲ್ಲಿ ತಿದ್ದದೇ, ತಪ್ಪಿಗೆ ಶಿಕ್ಷೆ ನೀಡದೆ ಕಲಿಸುವ ಶಿಕ್ಷಣವು ನಿಜವಾದ ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳ ಬದುಕು ಹಸನಾಗಲಿ ಎಂದು ಮಾತ್ರ ಶಿಕ್ಷಕರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಕ-ಪಾಲಕರ ಸಂಬಂಧ ಉನ್ನತೀಕರಣಗೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕ ರಂಗಪ್ಪ ಜಿ. ಟಿ ಮಾತನಾಡಿ, ಶಿಕ್ಷಕ ವೃತ್ತಿ ಕೇವಲ ಅಕ್ಷರ ಕಲಿಸುವ ಕೆಲಸವಾಗಿರದೆ, ಸಮಾಜಕ್ಕೆ ಭವಿಷ್ಯದ ಪೀಳಿಗೆಯನ್ನು ತಯಾರಿ ಮಾಡುವ ಆತ್ಮಸಂತೃಪ್ತಿಯ ಗುರುತರ ಜವಾಬ್ದಾರಿಯಾಗಿದೆ ಅಮೂರ್ತವಾದ ಶಿಷ್ಯರ ಜೀವನವನ್ನು ತಿದ್ದಿ ಮೂರ್ತಿ ರೂಪಕ್ಕೆ ತಂದಾಗ, ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಹೇಳಿದರು. ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ರಂಗಪ್ಪ ಜಿ.ಟಿ, ಶಂಕರ್, ಗಿರೀಶ್, ಶೈಲಾ, ಶಿವಾಚಾರ್ಯ, ಲಕ್ಷ್ಮಣ್ ಆರ್, ಅವರಿಗೆ ಗುರುನಮನ ಸಲ್ಲಿಸಲಾಯಿತು.ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷ ಎನ್.ಟಿ.ಬಸವರಾಜ್, ಶೈಲೇಶ್ ಕುಮಾರ್, ಮಂಜುನಾಥಪ್ಪ ಎಚ್.ಎಂ, ಆನಂದಪ್ಪ, ನಿವೃತ್ತ ಮುಖ್ಯೋಪಾಧ್ಯಾಯ ಜಿ.ಟಿ.ರಂಗಪ್ಪ, ಶಾಲೆಯ ಅಧ್ಯಕ್ಷರು ವಿರೂಪಾಕ್ಷಪ್ಪ, ಮತ್ತಿತರರು ಉಪಸ್ಥಿತರಿದ್ದರು.