ಸಾರಾಂಶ
ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಸರ್ಕಾರಿ ಶಾಲೆಗಳೆಂದರೆ ಮೂಗು ಮುಗಿವವರೇ ಹೆಚ್ಚು. ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಿಂದೇಟು ಹಾಕುತ್ತಾರೆ. ಆದರೆ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜುನ್ನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಕರು ಹಾಗೂ ಮಕ್ಕಳಿಗೆ ಈ ಶಾಲೆಯಲ್ಲಿ ಕಲಿಯೋದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.ಜಮಖಂಡಿ ತಾಲೂಕಿನ ಗ್ರಾಮೀಣ ಪ್ರದೇಶದ ಜುನ್ನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಪರಿಸರ ಹಾಗೂ ಕಲಿಕಾ ಪ್ರಕ್ರಿಯೆಗಳ ಮೂಲಕ ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಿದೆ. 9 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಬೋರ್ಡ್ ಒಳಗೊಂಡ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗಿದೆ.ಪ್ರತಿ ವಿದ್ಯಾರ್ಥಿಯ ಬಗ್ಗೆ ಶಿಕ್ಷಕರು ವಹಿಸುವ ಕಾಳಜಿಯಿಂದ ಜಿಲ್ಲೆಯಲ್ಲಿಯೇ ಶಾಲೆ ಗಮನ ಸೆಳೆಯುತ್ತಿದೆ. ಇದಕ್ಕೆಲ್ಲ ಆ ಶಾಲೆಯ ಶಿಕ್ಷಕರೊಬ್ಬರ ನಿಶ್ವಾರ್ಥ ಸೇವೆಯೇ ಕಾರಣವಾಗಿದೆ.
ಶಾಲೆಯ ಪರಿಸರ:ಶಾಲಾ ಆವರಣ ಒಂದು ರೀತಿಯ ಉದ್ಯಾನದಂತೆ ಕಂಗೊಳಿಸುತ್ತದೆ. ಇದನ್ನ ನೋಡುವುದೇ ಒಂದು ರೀತಿಯ ಕಣ್ಣಿಗೆ ಹಬ್ಬ ನೀಡುತ್ತದೆ. ಶಾಲಾ ಆವರಣದಲ್ಲಿ ಔಷಧೀಯ ಗಿಡಗಳು ಬೆಳೆಸಲಾಗಿದೆ. ಮಕ್ಕಳಿಂದಲೇ ನುಗ್ಗಿ ಗಿಡ, ಟೊಮ್ಯಾಟೋ ಸೇರಿ ವಿವಿಧ ತರಕಾರಿ ಬೆಳೆಯಲಾಗುತ್ತಿದ್ದು, ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದೆ. ಶಾಲಾ ಆವರಣದಲ್ಲಿ 10ಕ್ಕೂ ಅಧಿಕ ತೆಂಗಿನ ಮರ ಬೆಳೆಸಲಾಗಿದ್ದು, ಇವುಗಳಿಂದ ಬರುವ ತೆಂಗಿನ ಕಾಯಿ ಬಿಸಿಯೂಟಕ್ಕೆ ಬಳಸಿಕೊಂಡು ಉಳಿದ ಕಾಯಿಗಳನ್ನು ಎರಡ್ಂಉರು ತಿಂಗಳಿಗೊಮ್ಮೆ ಮಾರಾಟ ಮಾಡಲಾಗುತ್ತದೆ.
ಮಕ್ಕಳ ಕಲಿಕಗೆ ಉತ್ತೇಜನ:ಶಾಲೆಯಲ್ಲಿ ಮಕ್ಕಳ ನಲಿಕಲಿ ಕಲಿಕೆಗೆ ಉತ್ತೇಜನ ನೀಡಲಾಗುತ್ತದೆ. ಪ್ರತಿಯೊಂದು ಕೊಠಡಿಯಲ್ಲಿ ಮಕ್ಕಳೇ ತಯಾರಿಸಿದ ವಿವಿಧ ಚಿತ್ರ, ಪಟಗಳು ಮಕ್ಕಳಿಗೆ ಅಪಾರ ಜ್ಞಾನ ನೀಡುತ್ತವೆ. ಕನ್ನಡ, ಇಂಗ್ಲಿಷ್ ಗ್ರಾಮರ್. ರಾಷ್ಟ್ರೀಯ ನಾಯಕರ ಚಿತ್ರಗಳು, ನೋಬೆಲ್ ಪ್ರಶಸ್ತಿ ಪುರಸ್ಕೃತರ ಚಿತ್ರಗಳು, ಪರಿಸರ ಕಾಳಜಿ ವಹಿಸುವ ಕುರಿತಾದ ಚಿತ್ರಗಳು ಮಕ್ಕಳಿಗೆ ಅಪಾರ ಜ್ಞಾನ ಒದಗಿಸುತ್ತವೆ.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಎಲ್ಲ ಮಕ್ಕಳಿಗೂ ಫಿಲ್ಟರ್ ನೀರು ಕುಡಿಯುತ್ತಾರೆ. ಶಾಲೆಯ ಆವರಣದಲ್ಲಿ ಒಂದು ಲಕ್ಷ ವೆಚ್ಚದಲ್ಲಿ ಕಲ್ಲಿನಲ್ಲಿಯೇ ಕೆತ್ತಿದ ರಾಷ್ಟ್ರೀಯ ಲಾಂಛನ ಸ್ಥಾಪಿಸಲಾಗಿದೆ.ಪ್ರತಿ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು, ಆಹಾರ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಶನಿವಾರ ಮಕ್ಕಳಿಗೆ ಯೋಗಾಸನ ಹೇಳಿಕೊಡುತ್ತಾರೆ.ಸ್ವತಃ ಕ್ರೀಡಾಪಟು ಆಗಿರುವ ಶಿಕ್ಷಕ ಮಲ್ಲಪ್ಪ ಮಕ್ಕಳಲ್ಲಿ ಕ್ರೀಡಾಚಟುವಟಿಕೆ ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಇದರ ಫಲವಾಗಿ ಓರ್ವ ವಿದ್ಯಾರ್ಥಿನಿ 100 ಮೀ ಓಟ ಹಾಗೂ ಉದ್ದ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ಶಾಲೆ ಪ್ರತಿನಿಧಿಸಿದ್ದಳು.
ಬಡ, ಪ್ರತಿಭಾವಂತ ಮಕ್ಕಳ ಆಶಾಕಿರಣ:ಬಡ ಹಾಗೂ ಪ್ರತಿಭಾವಂತ ಮಕ್ಕಳ ಪಾಲಿನ ಆಶಾಕಿರಣವಾಗಿರುವ ಲೋಕಾಪುರ ಗ್ರಾಮದ ಶಿಕ್ಷಕ ಮಲ್ಲಪ್ಪ ಕೋಲ್ಹಾರ ಅವರು ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸುವುದಲ್ಲದೆ, ಪರಿಸರ ಕಾಳಜಿ, ಮಕ್ಕಳಿಗೆ ಪ್ರೋತ್ಸಾಹ, ಉಚಿತ ತರಬೇತಿ ಮತ್ತು ವಿನೂತನ ಕಲಿಕಾ ಚಟುವಟಿಕೆ ಕೈಗೊಳ್ಳುವ ಮೂಲಕ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿದ್ದಾರೆ.ಇವರು ಇಲ್ಲಿಗೆ ಬಂದಾಗ ಸಾಮಾನ್ಯ ಸರ್ಕಾರಿ ಶಾಲೆಯಾಗಿದ್ದ ಇದು, ಈಗ ಶಿಕ್ಷಕ ಮಲ್ಲಪ್ಪ ಅವರ ವಿಶೇಷ ಪ್ರಯತ್ನ ಹಾಗೂ ಶಾಲೆಯ ಶಿಕ್ಷಕರ ಸಹಕಾರದಿಂದ ಪ್ರತಿಷ್ಠಿತ ಶಾಲೆಯಾಗಿ ಮಾರ್ಪಾಡಾಗಿದೆ.
ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯೂ ಮುಖ್ಯ ಎಂಬುದು ಮಲ್ಲಪ್ಪ ಕೋಲಾರ ಅವರ ನಂಬಿಕೆ. ಶಿಕ್ಷಕನೊಬ್ಬ ಎಲ್ಲರನ್ನೂ ಒಳಗೊಳ್ಳುವ ಭಾವನೆ ಹೊಂದಿದಾಗಲೇ ಎಲ್ಲರಿಗಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದು ಕೇವಲ ಮಕ್ಕಳ ಶೈಕ್ಷಣಿಕ ಅಗತ್ಯ ಪೂರೈಸುವುದು ಮಾತ್ರವಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಅಗತ್ಯಗಳಿಗೆ ಸ್ಪಂದಿಸುವುದೂ ಆಗಿದೆ ಎನ್ನುತ್ತಾರೆ.ಶಿಕ್ಷಕ ಮಲ್ಲಪ್ಪ ಸೇವೆ ಸಲ್ಲಿಸಿದ ಶಾಲೆಗಳು:
ಶಿಕ್ಷಕ ಮಲ್ಲಪ್ಪ ಕೋಲ್ಹಾರ ಅವರು ಬಾಗಲಕೋಟೆ ತಾಲೂಕಿನ ಚೌಡಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಧೋಳ ತಾಲೂಕಿನ ಬದನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ಜುನ್ನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಲಭಿಸಿದ ಸಂದ ಪ್ರಶಸ್ತಿಗಳು( ಬಾಕ್ಸ್):
ಶಿಕ್ಷಕ ಮಲ್ಲಪ್ಪ ಕೋಲ್ಹಾರ ಅವರಿಗೆ ೨೦೦೩-೦೪ ಹಾಗೂ ೨೦೧೦-೧೧ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿವೆ. ಶಾಲೆಗೆ ಜಿಲ್ಲಾ ಮಟ್ಟದ ಉತ್ತಮ ಪರಿಸರ ಮಿತ್ರ ಪ್ರಶಸ್ತಿ, ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಸಹ ಲಭಿಸಿವೆ.ಶಾಲೆಯಲ್ಲಿ 1 ರಿಂದ 7 ತರಗತಿಗಳು ಇದ್ದು, 82 ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ನಾಲ್ವರು ಕಾಯಂ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕರು ಇದ್ದಾರೆ.
---ಕೋಟ್ಒಂದು ಮಾದರಿ ಶಾಲೆಗೆ ಮಕ್ಕಳು ಪ್ರೀತಿಯಿಂದ ಬರುವಂತಿರಬೇಕು. ಅದು ಮಕ್ಕಳ ಕಲಿಕೆಯ ಅಪರೂಪದ ಕೇಂದ್ರವಾಗಬೇಕು. ಒಂದು ಸಮುದಾಯವಿರುವ ಪ್ರದೇಶದಲ್ಲೇ ಆ ಶಾಲೆಯಿರಬೇಕು. ಆ ಶಾಲೆಯೂ ಅವರದ್ದೇ ಆಗಿರಬೇಕು. ಆ ಶಾಲೆಗೆ ಅದರದ್ದೇ ಆದ ಸುಂದರ ಕೈತೋಟವಿರಬೇಕು. ಅನ್ನೋದೇ ನನ್ನ ಆಶಯವಾಗಿದೆ. ನಮ್ಮ ಶಾಲೆ ಬೆಳವಣಿಗೆಗೆ ನಾನಷ್ಟೇ ಅಲ್ಲದೇ ಮುಖ್ಯ ಗುರು ಆರ್. ಎಸ್. ಪಾಟೀಲ, ಶಿಕ್ಷಕವೃಂದ, ಮಕ್ಕಳ ಶ್ರಮ ಮತ್ತು ಗ್ರಾಮಸ್ಥರು ಸಹಕಾರ ನೀಡಿದ್ದಾರೆ.
-ಮಲ್ಲಪ್ಪ ನಿಂಗಪ್ಪ ಕೋಲ್ಹಾರ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜುನ್ನೂರಕೋಟ್ 2
ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಇದಕ್ಕೆ ಶಾಲಾ ಸುಧಾರಣಾ ಸಮಿತಿ, ಗ್ರಾಮಸ್ಥರ ಸಹಕಾರವೂ ದೊರೆಯುತ್ತಿದೆ. ಮಲ್ಲಪ್ಪ ನಿಂಗಪ್ಪ ಕೋಲ್ಹಾರ ಅವರು ಯಾವಾಗಲೂ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಾರೆ. ಆದ್ದರಿಂದ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ.ಆರ್.ಎಸ್. ಪಾಟೀಲ ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜುನ್ನೂರ
ಹೇಳಿಕೆ ೦೩:ವಿದ್ಯಾರ್ಥಿಗಳ ಬಗ್ಗೆ ಮಲ್ಲಪ್ಪ ನಿಂಗಪ್ಪ ಕೋಲ್ಹಾರ ಅವರಿಗೆ ಇರುವ ಪ್ರೀತಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಾಲೆ ಮತ್ತು ವಿದ್ಯಾರ್ಥಿಗಳಿಗಾಗಿ ದುಡಿಯಬೇಕು ಎಂದು ಹೊರಟು ಬಿಟ್ಟರೆ ಹಗಲು, ರಾತ್ರಿ, ಹಬ್ಬ-ಹುಣ್ಣಿಮೆ ಅವರಿಗೆ ಲೆಕ್ಕಕ್ಕಿಲ್ಲ. ಶಾಲೆ ಮತ್ತು ಮಕ್ಕಳ ಬಗ್ಗೆ ಅವರಿಗಿರುವ ನಿಸ್ವಾರ್ಥ ಭಾವನೆಯನ್ನು ವಿದ್ಯಾರ್ಥಿಗಳು ಯಾವತ್ತೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
- ಜುನ್ನೂರ ಗ್ರಾಮಸ್ಥರು.