ಸಾರಾಂಶ
ಹಾನಗಲ್ಲ: ಹೊಸ ಶೈಕ್ಷಣಿಕ ವರ್ಷದಾರಂಭ ಅತ್ಯಂತ ಸಂಭ್ರಮದಿಂದ ಕೂಡಿದ್ದು ಎಲ್ಲ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಹಬ್ಬದ ವಾತಾವರಣದಲ್ಲಿ ಬರ ಮಾಡಿಕೊಂಡರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ತಾಲೂಕಿನ ಹರಳಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದ್ದಲ್ಲದೆ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಶಾಲಾರಂಭಕ್ಕೆ ಮಕ್ಕಳು ಪಾಲಕರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾಕ್ಷಿಯಾದರು. ವಿದ್ಯೆ ಇದ್ದವನ ಮುಖವು ಮುದ್ದು ಬರುವಂತಿಕ್ಕು, ಇತರರನ್ನು ಗೌರವಿಸಲು ಶಿಕ್ಷಣ ಬೇಕು. ನಾವು ಶಿಕ್ಷಣ ಕೊಡಿಸಲು ಸಿದ್ಧರಿದ್ದೇವೆ. ದೈಹಿಕ ಮಾನಸಿಕ ಸಮೃದ್ಧಿಗೆ ಅತ್ಯುತ್ತಮ ಶಿಕ್ಷಣ ಬೇಕು ಎನ್ನುವಂತಹ ಜಾಗೃತಿ ಫಲಕಗಳನ್ನು ಹಿಡಿದು ಮಕ್ಕಳು ಊರಿನಲ್ಲಿ ಪ್ರಭಾತಭೇರಿ ಮೂಲಕ ಶಾಲೆ ಬಂದರು. ಮೆರವಣಿಗೆಯಲ್ಲಿ ಪಾಲಕರೂ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮೊದಲ ದಿನ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದರೆ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಅತ್ಯಂತ ಸಂಭ್ರಮದಿಂದ ಮಕ್ಕಳನ್ನು ಬರ ಮಾಡಿಕೊಂಡಿದ್ದಾರೆ. ಎಲ್ಲ ಶಾಲೆಗಳಲ್ಲಿ ಸಿಹಿ ಊಟ ನೀಡಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಈ ಬಾರಿ ಶಾಲೆಗಳನ್ನು ಅಚ್ಚುಕಟ್ಟಾಗಿ ಹಾಗೂ ಉತ್ತಮ ಶಿಕ್ಷಣದೊಂದಿಗೆ ಅರ್ಥಪೂರ್ಣಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಉತ್ತಮ ಫಲಿತಾಂಶ ನೀಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯ ನಿಂಗಪ್ಪ ಸಾಳುಂಕೆ ಈ ಸಂದರ್ಭದಲ್ಲಿದ್ದರು.