ಸಾರಾಂಶ
ಹುಬ್ಬಳ್ಳಿ: ನಗರದ ದಾಜಿಬಾನ್ ಪೇಟೆಯ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಕಳೆದ ಏಳು ದಿನಗಳಿಂದ ಎಸ್‌ಎಸ್‌ಕೆ ಪಂಚ ಟ್ರಸ್ಟ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಹಸ್ರ ಚಂಡಿಕಾಯಾಗ ಶುಕ್ರವಾರ ಸಂಪನ್ನಗೊಂಡಿತು.
ಇದರ ಅಂಗವಾಗಿ ಶ್ರೀ ದುರ್ಗಾದೇವಿ ಸಹಸ್ರ ಚಂಡಿಕಾಯಾಗದಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗಳ ಭವ್ಯ ಮೆರವಣಿಗೆ ನಡೆಸಲಾಯಿತು. ನಂತರ ಅವಭೃತಸ್ನಾದ ಅಂಗವಾಗಿ ಶ್ರೀದೇವಿಯ ಪೂಜಾ ಮೂರ್ತಿಗಳನ್ನು ಇಂದಿರಾ ಗ್ಲಾಸ್‌ಹೌಸ್‌ನ ಬಾವಿಯಲ್ಲಿ ವಿಸರ್ಜಿಸಲಾಯಿತು.ಪೂರ್ಣಾಹುತಿ: ಸಹಸ್ರ ಚಂಡಿಕಾಯಾಗದ ಕೊನೆಯ ದಿನ ಶುಕ್ರವಾರ ಬೆಳಗ್ಗೆಯಿಂದಲೇ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 5.30ರಿಂದ ಮಧ್ಯಾಹ್ನ 12ರ ವರೆಗೆ ಹೋಮಕುಂಡದಲ್ಲಿ 10 ಜನ ಋತ್ವಿಜರಂತೆ 10 ಹೋಮಕುಂಡಗಳಲ್ಲಿ ಒಟ್ಟು 100 ವಿದ್ವಜ್ಜನ ಪುರೋಹಿತರಿಂದ 50 ಜನ ಸಹಾಯಕ ಪುರೋಹಿತ ವೃಂದದಿಂದ ಸಹಸ್ರಚಂಡಿಕಾಹೋಮ ನಡೆಯಿತು. ನಂತರ ತರ್ಪಣೆ, ನಮಸ್ಕಾರ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.
ಮಧ್ಯಾಹ್ನ 12ರ ನಂತರ ಗಣ್ಯದಾನಿಗಳಿಂದ ಶ್ರೀ ಸಹಸ್ರಚಂಡಿಕಾಯಾಗದ ಪೂಜಾಲ ಅರ್ಪಣೆ ಭಾಗವಾಗಿ ವಿದ್ವಜ್ಜನ ಬ್ರಾಹ್ಮಣರಿಗೆ ಲಸಹಿತ ತಾಂಬೂಲ-ಗೌರವಾರ್ಪಣೆ ನೆರವೇರಿತು. ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ಶ್ರೀದೇವಿಯ ಪೂಜಾ ಮೂರ್ತಿಗಳನ್ನು ಮೆರವಣಿಗೆಯೊಂದಿಗೆ ತೆಗೆದುಕೊಂಡು ಹೋಗಿ ನಗರದ ಇಂದಿರಾ ಗ್ಲಾಸ್‌ಹೌಸ್ ಬಾವಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಸರ್ಜನೆ ಮಾಡಲಾಯಿತು.ಇದಕ್ಕೂ ಪೂರ್ವದಲ್ಲಿ ಸಹಸ್ರ ಚಂಡಿಕಾಯಾಗ ಹಿನ್ನೆಲೆಯಲ್ಲಿ ಭಕ್ತರು ಕುಟುಂಬ ಸಮೇತವಾಗಿ ಬಂದು ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ನೀಲಕಂಠ ಜಡಿ, ತಾರಾಸಾ ಧೋಂಗಡಿ, ಅಶೋಕ ಕಲಬುರ್ಗಿ, ನಾಗೇಂದ್ರ ಹಬೀಬ, ಅಶೋಕ ಪವಾರ ಸೇರಿದಂತೆ ಇತರರು ಇದ್ದರು.