ಸಾರಾಂಶ
ಇದೇ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ವೈಜ್ಞಾನಿಕವಾಗಿ ‘ಶ್ವಾನ ಸಮೀಕ್ಷೆ’ ನಡೆಯುತ್ತಿದೆ. ಮಂಗಳವಾರವೇ ಈ ಕಾರ್ಯ ಆರಂಭಗೊಂಡಿದೆ.ಇದು ಮೂರು ದಿನಗಳ ಸಮೀಕ್ಷೆ. ಮಹಾನಗರ ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಒಟ್ಟು 120 ಮಂದಿ ಸ್ವಯಂ ಸೇವಕರು ಸಮೀಕ್ಷೆ ಆರಂಭಿಸಿದ್ದು, ಮೊದಲ ದಿನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುನಗರದಲ್ಲಿ ನಾಯಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬ ಕೂಗು ಸದಾ ಇದ್ದದ್ದೇ. ಆದರೆ ನಿಜಕ್ಕೂ ಇಲ್ಲಿರುವ ನಾಯಿಗಳ ಸಂಖ್ಯೆ ಎಷ್ಟು ಎನ್ನುವುದು ಯಾರಿಗೂ ಗೊತ್ತಿಲ್ಲ! ಇಂತಿಪ್ಪ ಶ್ವಾನಗಳ ಕುರಿತಾಗಿ ಅಂಕಿ ಅಂಶ ಇಟ್ಟುಕೊಂಡು ಮಾತನಾಡುವ ಸಮಯ ಬಂದಿದೆ. ಇದೇ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ವೈಜ್ಞಾನಿಕವಾಗಿ ‘ಶ್ವಾನ ಸಮೀಕ್ಷೆ’ ನಡೆಯುತ್ತಿದೆ. ಮಂಗಳವಾರವೇ ಈ ಕಾರ್ಯ ಆರಂಭಗೊಂಡಿದೆ.
ಇದು ಮೂರು ದಿನಗಳ ಸಮೀಕ್ಷೆ. ಮಹಾನಗರ ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಒಟ್ಟು 120 ಮಂದಿ ಸ್ವಯಂ ಸೇವಕರು ಸಮೀಕ್ಷೆ ಆರಂಭಿಸಿದ್ದು, ಮೊದಲ ದಿನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಫೆ.13ರಂದು ಸಮೀಕ್ಷೆ ಮುಕ್ತಾಯವಾಗಲಿದೆ. ಮಂಗಳೂರು ಮಹಾನಗರ ಪಾಲಿಕೆಯು ಆನಿಮಲ್ ಕೇರ್ ಟ್ರಸ್ಟ್ ಮಂಗಳೂರು, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ನೆರವಿನಲ್ಲಿ ಸಮೀಕ್ಷೆ ನಡೆಸುತ್ತಿದೆ.ನಾಯಿಗಳು ಸಾರ್ ನಾಯಿಗಳು!:
ನಾಯಿ ಗಣತಿ ಎಂದರೆ ಕೇವಲ ನಾಯಿಗಳ ಸಂಖ್ಯೆ ಮಾತ್ರವಲ್ಲ, ಅವುಗಳ ಲಿಂಗ, ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿದೆಯೇ? ಮರಿಗಳಿಗೆ ಹಾಲೂಣಿಸುತ್ತಿರುವ ತಾಯಿಶ್ವಾನಗಳೆಷ್ಟು? ಅತಿ ಸಣ್ಣ ಮರಿಗಳೆಷ್ಟು? ಯೌವನಾವಸ್ಥೆಯವು ಎಷ್ಟು? ಯಾವ ಪ್ರದೇಶದ ಎಷ್ಟು ನಾಯಿಗಳು ಗಾಯಗೊಂಡಿವೆ, ಎಷ್ಟು ನಾಯಿಗಳು ಕ್ಯಾನ್ಸರ್ ರೀತಿಯ ಗೆಡ್ಡೆಗಳಿಂದ ನರಳುತ್ತಿವೆ, ಗುಂಪುಗಳಲ್ಲಿ ವಾಸವಾಗಿರುವ ನಾಯಿಗಳೆಷ್ಟು ಇತ್ಯಾದಿ ಸಮಗ್ರ ಮಾಹಿತಿ ಈ ಸಮೀಕ್ಷೆಯಿಂದ ಲಭ್ಯವಾಗಲಿದೆ.ಉಪಯೋಗವೇನು?:
“ಶ್ವಾನಗಳ ಕುರಿತ ಈ ಎಲ್ಲ ಮಾಹಿತಿಗಳು ಲಭ್ಯವಾದರೆ ಬೀದಿ ನಾಯಿಗಳ ಆರೋಗ್ಯ ವರ್ಧನೆಗೆ ಪೂರಕ ಕ್ರಮಗಳು, ಬಾಕಿ ಉಳಿದ ಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಇತ್ಯಾದಿಗಳನ್ನು ಪ್ರದೇಶವಾರು ಕೈಗೊಳ್ಳಲು ಅನುಕೂಲವಾಗಲಿದೆ. ಈ ಮೂಲಕ ನಾಯಿಗಳಿಂದ ಮಾನವ ಸಂಕುಲಕ್ಕೆ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಬಹುದು. ನಗರವನ್ನು ರೇಬಿಸ್ ಮುಕ್ತ ಮಾಡಬಹುದು. ನಗರ ಅಭಿವೃದ್ಧಿಯಾದಂತೆ ಮಾನವನ ಆರೋಗ್ಯಕ್ಕಾಗಿ ಅಲ್ಲಿರುವ ಪ್ರಾಣಿಗಳು ಕೂಡ ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಸಮೀಕ್ಷೆಯು ಈ ನಿಟ್ಟಿನಲ್ಲಿ ಅತ್ಯಂತ ಸಹಕಾರಿಯಾಗಲಿದೆ” ಎಂದು ಆನಿಮಲ್ ಕೇರ್ ಟ್ರಸ್ಟ್‌ನ ಸುಮಾ ನಾಯಕ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.2 ವರ್ಷಕ್ಕೊಮ್ಮೆ ಆಗಬೇಕು ಸಮೀಕ್ಷೆ:
‘ಡಾಗ್ ರೂಲ್ಸ್-2023’ ಕೇಂದ್ರ ಕಾಯ್ದೆ ಪ್ರಕಾರ ಎರಡು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಶ್ವಾನ ಸಮೀಕ್ಷೆ ಮಾಡಲೇಬೇಕು. ಈ ಬಾರಿಯ ಸಮೀಕ್ಷೆಗೆ 120 ಮಂದಿ ಬೇಕಾದಲ್ಲಿ 130 ಮಂದಿ ಸ್ವಯಂ ಸೇವಕರು ಬಂದಿದ್ದಾರೆ. ಅವರಿಗೆ ಫೆ.9ರಂದು ಸಂಪೂರ್ಣ ತರಬೇತಿ ನೀಡಲಾಗಿದ್ದು, ಫೆ.10ರಂದು ಟ್ರಯಲ್ ಸರ್ವೇ ಕಾರ್ಯ ಕೈಗೊಳ್ಳಲಾಗಿತ್ತು. ಸರ್ವೇ ಅವಧಿಯಲ್ಲಿ ಕಂಡುಬರುವ ಸಮಸ್ಯೆಗಳನ್ನು ಅವಲೋಕಿಸಿ, ಫೆ.11ರಿಂದ ಪೂರ್ಣ ಪ್ರಮಾಣದಲ್ಲಿ ಸರ್ವೇ ಆರಂಭಿಸಲಾಗಿದೆ ಎಂದು ಸುಮಾ ನಾಯಕ್ ಹೇಳಿದರು...........ಮೊಬೈಲ್ ಆಪ್ ಆಧಾರಿತ ಸಮೀಕ್ಷೆ
ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಸಂಸ್ಥೆಯು ಪ್ರಾಣಿ ಸಮೀಕ್ಷೆಗೆಂದೇ ವಿಶೇಷ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದೆ. ಇದರ ಜತೆಗೆ ಮತ್ತೊಂದು ಆಪ್‌ನ್ನು ಶ್ವಾನ ಸಮೀಕ್ಷೆಗೆ ಬಳಕೆ ಮಾಡಲಾಗುತ್ತಿದೆ. ಸಮೀಕ್ಷೆಗೆ ಮೊದಲು ನಗರದ ಎಲ್ಲ 60 ವಾರ್ಡ್‌ಗಳ ಗಲ್ಲಿ-ಗಲ್ಲಿಗಳ ಜಿಪಿಎಸ್ ಮ್ಯಾಪಿಂಗ್ ನಡೆಸಲಾಗಿದ್ದು, ಇದೇ ಮಾರ್ಗದಲ್ಲಿ ಬೈಕ್‌ಗಳಲ್ಲಿ ಸ್ವಯಂ ಸೇವಕರು ತೆರಳಿ ಸಮೀಕ್ಷೆ ನಡೆಸಬೇಕು. ಒಬ್ಬರು ಬೈಕ್ ಚಲಾಯಿಸಿದರೆ, ಹಿಂದೆ ಕುಳಿತವರು ಆಪ್‌ನಲ್ಲಿ ಶ್ವಾನಗಳ ಮಾಹಿತಿ ಅಪ್‌ಲೋಡ್ ಮಾಡುತ್ತಾರೆ. ತೊಂದರೆಯಲ್ಲಿರುವ- ಗಾಯಗೊಂಡ ಶ್ವಾನಗಳು ಕಂಡುಬಂದರೆ ಫೋಟೊ ಸಹಿತ ಅಪ್‌ಲೋಡ್ ಮಾಡಲಾಗುತ್ತದೆ. ಪ್ರತಿ ವಾರ್ಡ್‌ನಲ್ಲಿ ಮೂರು ತಂಡಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುತ್ತವೆ. ವಾಹನ ಹೋಗಲಾರದ ಪ್ರದೇಶಗಳಾದ ಡಂಪಿಂಗ್ ಯಾರ್ಡ್, ರೈಲ್ವೆ ಸ್ಟೇಶನ್, ಬೀಚ್ ಇತ್ಯಾದಿ ಪ್ರದೇಶಗಳಲ್ಲಿ ನಡೆದುಕೊಂಡು ಹೋಗಿ ಸಮೀಕ್ಷೆ ಮಾಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಈ ಸಮೀಕ್ಷೆ ಅತ್ಯಂತ ವೈಜ್ಞಾನಿಕವಾಗಿದ್ದು, ಶೇ.98ರಷ್ಟು ನಿಖರ ಮಾಹಿತಿ ಸಿಗಲಿದೆ.............ಮಾನವ- ಪ್ರಾಣಿ ಸಂಘರ್ಷಗಳ ಸುದ್ದಿ ಹೆಚ್ಚೆಚ್ಚು ಕೇಳಿಬರುತ್ತಿದೆ. ಬೀದಿ ನಾಯಿಗಳ ಸಂಖ್ಯೆಯ ವೈಜ್ಞಾನಿಕ ವಿಶ್ಲೇಷಣೆ ನಡೆಸುವುದರಿಂದ ಈ ಸಂಘರ್ಷವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ವ್ಯವಸ್ಥಿತವಾಗಿ ಹಾಗೂ ಸಹಾನುಭೂತಿಯಿಂದ ಸಮಸ್ಯೆಗಳನ್ನು ಪರಿಹರಿಸಲು, ಮಾನವರು ಮತ್ತು ಪ್ರಾಣಿಗಳು ಶಾಂತಿಯುತವಾಗಿ ಸಹಬಾಳ್ವೆ ಮಾಡಲು ಈ ಸಮೀಕ್ಷೆ ದಾರಿ ತೋರಿಸುತ್ತದೆ.
- ಸುಮಾ ನಾಯಕ್, ಆನಿಮಲ್ ಕೇರ್ ಟ್ರಸ್ಟ್.