ಸಾರಾಂಶ
ಮುಂಡರಗಿ: ಕಳೆದ ಹತ್ತು-ಹದಿನೈದು ವರ್ಷಗಳಿಂದ ನಾಗರಹಳ್ಳಿ ಹಾಗೂ ಬೆಣ್ಣಿಹಳ್ಳಿ ಗ್ರಾಮಗಳ ಮಧ್ಯದಲ್ಲಿ ಸಂಪರ್ಕ ಕಲ್ಪಿಸುವ ಹಳ್ಳದಲ್ಲಿ ಸುಮಾರು ನಾಲ್ಕೈದು ಸಾವುಗಳು ಸಂಭವಿಸುತ್ತಾ ಬಂದಿದ್ದು, ಇದೀಗ ಎರಡು ಗ್ರಾಮಗಳ ನಡುವೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಕಾಲ ಕೂಡಿ ಬಂದಂತಾಗಿದೆ ಎಂದು ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಅವರು ಸೋಮವಾರ ಲೋಕೋಪಯೋಗಿ ಇಲಾಖೆಯ 50-54ರ ಲೆಕ್ಕ ಶೀರ್ಷಿಕೆಯಡಿಯಲ್ಲಿ ತಾಲೂಕಿನ ನಾಗರಹಳ್ಳಿ-ಬೆಣ್ಣಿಹಳ್ಳಿ ಮಧ್ಯದ ಹಳ್ಳಕ್ಕೆ ಸುಮಾರು 2.50 ಕೋಟಿ ರು.ಗಳ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲೊಂದು ಸೇತು ನಿರ್ಮಾಣವಾಗಬೇಕೆನ್ನುವುದು ಇಲ್ಲಿನ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಯಾಗಿತ್ತು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರು ಇದಕ್ಕಾಗಿ ಅನುದಾನ ನೀಡುವ ಮೂಲಕ ಸೇತು ನಿರ್ಮಾಣಕ್ಕೆ ಅವಕಾಶ ನೀಡಿದ್ದು, ಅವರಿಗೆ ಎಲ್ಲರ ಪರವಾಗಿ ಅಭಿನಂದಿಸುವೆ ಎಂದರು.
ಮುಂದಿನ 2-3 ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು, ಕಾಮಗಾರಿ ಸಂದರ್ಭದಲ್ಲಿ ನಾಗರಹಳ್ಳಿ-ಬೆಣ್ಣಿಹಳ್ಳಿ ಗ್ರಾಮಗಳ ಗ್ರಾಮಸ್ಥರು ಸಹಕರಿಸಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಈ ಸಂಪರ್ಕದಿಂದ ನಾಗರಹಳ್ಳಿ, ಹೆಸರೂರು, ಕೊರ್ಲಹಳ‍್ಳಿ, , ಬೆಣ್ಣಿಹಳ್ಳಿ, ಬೀಡನಾಳ ಮುಂತಾದ ಗ್ರಾಮಗಳ ಸುಲಭ ಸಂಪರ್ಕಕ್ಕೆ ಹಾಗೂ ಮಕ್ತುಂಪುರ, ಬೆಣ್ಣಿಹಳ್ಳಿ ಗ್ರಾಮಗಳಿಂದ ನಿತ್ಯವೂ ನಾಗರಹಳ್ಳಿ ಪ್ರೌಢಶಾಲೆಗೆ ಬರುವ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.ನಾಗರಹಳ್ಳಿ ಗ್ರಾಮದಲ್ಲಿ ಚರಂಡಿ ಕಾಮಗಾರಿ ಪ್ರಾರಂಭಿಸಬೇಕೆಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದರು. ಆದರೆ ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಕೇಳಿದಾಗ ಈಗಾಗಲೇ ಅದಕ್ಕಾಗಿ ಹಣವನ್ನು ಕಾಯ್ದಿರಿಸಿದ್ದು, ಜನತೆಯ ಸಹಕಾರ ಇಲ್ಲದಿರುವುದರಿಂದ ಕಾಮಗಾರಿ ಪ್ರಾರಂಭಿಸಲು ಆಗುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಗ್ರಾಮದ ಹಿರಿಯರೊಂದಿಗೆ ಪಂಚಾತಿಯವರೊಂದಿಗೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಮುಂಬರುವ ದಿನಗಳಲ್ಲಿ ಆಗಬೇಕಾದ ಎಲ್ಲ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಮುಖಂಡರಾದ ಕರಬಸಪ್ಪ ಹಂಚಿನಾಳ, ಮೈಲಾರಪ್ಪ ಕಲಕೇರಿ, ರಜನೀಕಾಂತ ದೇಸಾಯಿ, ಬನ್ನೆಪ್ಪ ಚೂರಿ, ಗುಡದಪ್ಪ ದೇಸಾಯಿ, ಪರಸರಡ್ಡಿ ಗೊಡಚಿಹಳ್ಳಿ, ಶ್ರೀನಿವಾಸ ಅಬ್ಬಿಗೇರಿ, ಶಿವಕುಮಾರ ಕುರಿ, ಶಂಕರ ಉಳ್ಳಾಗಡ್ಡಿ, ಕೊಪ್ಪಣ್ಣ ಕೊಪ್ಪಣ್ಣವರ, ಬುಟ್ಟು ಹೊಸಮನಿ, ಬಸವರಾಜ ಚಿಗಣ್ಣವರ, ರಂಗಪ್ಪ ಕೊಳಿ, ವೀರೇಂದ್ರ ಅಂಗಡಿ, ಪ್ರಶಾಂತಗೌಡ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ಅಂಬವ್ವ ಕಟ್ಟೀಮನಿ, ನಾಗರಾಜ ಗುಡಿಮನಿ, ಮಾರುತಿ ನಾಗರಹಳ್ಳಿ, ಸೋಮರಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.