ಸಾರಾಂಶ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ಮ್ಯಾದನಹೊಳೆ-ಸಮುದ್ರದ ಹಳ್ಳಿ ನಡುವೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮುರಿದು ಬಿದ್ದು ಮೂರು ವರ್ಷವಾಗುತ್ತಾ ಬಂತು. ಸೇತುವೆ ಮರು ನಿರ್ಮಾಣವಾಗದೆ ಆ ಭಾಗದ ಪ್ರಯಾಣಿಕರ ಪರದಾಟ ಇನ್ನೂ ನಿಂತಿಲ್ಲ. 2022 ಸೆಪ್ಟೆಂಬರ್ 20ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಸೇತುವೆಯು ಆ ಭಾಗದ ಹತ್ತಾರು ಹಳ್ಳಿಗಳ ಜನರ ಸುಗಮ ಸಂಚಾರಕ್ಕೆ ತಡೆಯೊಡ್ಡಿತು. 1982 ರಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯು ಮುರಿದು ಬಿದ್ದ ಮರು ದಿನವೇ ಆಗಿನ ಶಾಸಕರಾಗಿದ್ದ ಪೂರ್ಣಿಮಾ ಶ್ರೀನಿವಾಸ್ ರವರು ಅಧಿವೇಶನದಲ್ಲಿ ಸೇತುವೆ ಮುರಿದ ವಿಷಯ ಪ್ರಸ್ತಾಪಿಸಿದ್ದರು. ದುರಂತವೆಂದರೆ ಇದುವರೆಗೂ ಸಮುದ್ರದಹಳ್ಳಿ ಮ್ಯಾದನಹೊಳೆ ನಡುವಿನ ಸೇತುವೆ ನಿರ್ಮಾಣವಾಗಿಲ್ಲ. ಕೋಡಿಹಳ್ಳಿ, ಮ್ಯಾದನಹೊಳೆ, ಸಮುದ್ರದಹಳ್ಳಿ, ವೇಣುಕಲ್ಲುಗುಡ್ಡ ಸೇರಿದಂತೆ ಸುಮಾರು 8ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಶಿರಾ ತಾಲೂಕಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ. ಇದೀಗ ಸೇತುವೆ ಪಕ್ಕದ ಗ್ರಾಮಗಳ ರೈತರು ಜಮೀನುಗಳಿಗೆ ತೆರಳಲು, ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸುಮಾರು 8-10 ಕಿ.ಮೀ. ಸುತ್ತಿ ಬಳಸಿ ತೆರಳಬೇಕಾಗಿದೆ.
ಸೇತುವೆ ಮುರಿದು ಬಿದ್ದ ನಂತರ ಮರು ನಿರ್ಮಾಣಕ್ಕಾಗಿ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಆನಂತರ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗಲೂ ಸೇತುವೆ ಕಂ ಬ್ಯಾರೇಜ್ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಆದರೆ ಎರಡು ಮಳೆಗಾಲ ಮುಗಿದು ಹೋದರೂ ಸಹ ಇನ್ನೂ ಆ ಭಾಗದಲ್ಲಿ ಸೇತುವೆ ಎದ್ದು ನಿಂತಿಲ್ಲ.ಆರನಕಟ್ಟೆ, ಸಮುದ್ರದ ಹಳ್ಳಿಗಳ ಕಡೆಯ ಶಾಲೆಗಳಿಗೆ ಹೋಗುವ ಮಕ್ಕಳಿಗೂ ಮತ್ತು ಕೂಲಿ ಕಾರ್ಮಿಕರಿಗೆ ಸೇತುವೆ ಮುರಿದು ಬಿದ್ದದ್ದು ತೀವ್ರ ತೊಂದರೆ ಉಂಟು ಮಾಡಿದೆ. 2022ರಲ್ಲಿ ಸೇತುವೆ ಮುರಿದು ಬಿದ್ದ ನಂತರ ಮರು ನಿರ್ಮಾಣದ ಅನುದಾನಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು. ಇದೀಗ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎನ್ನಲಾಗಿದ್ದು, ಈಗಲಾದರೂ ಹಿರಿಯೂರು ಶಿರಾ ಗಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಶೀಘ್ರ ನಿರ್ಮಾಣವಾದರೆ ಆ ಭಾಗದ ಹತ್ತಾರು ಹಳ್ಳಿಗಳ ವಿದ್ಯಾರ್ಥಿಗಳು, ರೈತರು, ಕಾರ್ಮಿಕರಿಗೆ ಅನುಕೂಲವಾಗುತ್ತದೆ.
9.75 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಪರುಶುರಾಮ್ ಪ್ರತಿಕ್ರಿಯಿಸಿ ಸಮುದ್ರದಹಳ್ಳಿ ಮತ್ತು ಮ್ಯಾದನಹೊಳೆ ಸೇತುವೆ ನಿರ್ಮಾಣ ಪ್ರಕ್ರಿಯೆಯ ಟೆಂಡರ್ ಹಂತ ಅಂತಿಮವಾಗಿದ್ದು ಒಂದೆರಡು ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. 9.75 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು 116 ಮೀಟರ್ ಉದ್ದದ ಸೇತುವೆಯಾಗಿದೆ. ಮುಂದಿನ 15 ದಿನದೊಳಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.