ಸಾರಾಂಶ
ಶಿರಸಿ:
ದಲಿತ ಸಿಎಂ ವಿಷಯ ಪ್ರಸ್ತಾಪಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಕಾಲ ಬಂದಾಗ ನಮ್ಮ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಡುತ್ತೇವೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಶನಿವಾರ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯಿತಿಯ ಹೆಗ್ಗಾರು ಗ್ರಾಮದಲ್ಲಿ ರಾಜ್ಯಮಟ್ಟದ ೧೦೦ ಕಾಲುಸಂಕಗಳ ನಿರ್ಮಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಚರ್ಚೆ ಹೊಸದಲ್ಲ. ಇದು ಮೊದಲಿಂದಲೂ ಇದೆ. ಹಾಗಂತ ನಮ್ಮದೇನಿದ್ದರೂ ಪಕ್ಷದ ವರಿಷ್ಠರಿಗೆ ಹೇಳುತ್ತೇವೆ. ಹಾಗಂತ ಸಿಎಂ ಮಾಡುವುದಕ್ಕೆ ಪಕ್ಷದ ಕಾರ್ಯಕರ್ತರಾಗಬೇಕೆ ಹೊರತು ಜಾತಿ ಆಧಾರದಲ್ಲಿ ಮಾಡಲು ಆಗುವುದಿಲ್ಲ ಎಂದೂ ಹೇಳಿದರು.ಈಗ ಮೊದಲ ಹಂತದಲ್ಲಿ ನಿಗಮ ಮಂಡಳಿಗೆ ೨೫ ಮಂದಿ ನೇಮಕ ಮಾಡಲಾಗುತ್ತಿದೆ. ಮುಂದೆ ಇನ್ನಷ್ಟು ಶಾಸಕರಿಗೆ ಅವಕಾಶ ನೀಡಲಿದ್ದಾರೆ. ಎಲ್ಲರಿಗೂ ಅವಕಾಶ ನೀಡುತ್ತಾರೆ. ಯಾರೂ ಅಸಮಾಧಾನ ಆಗುವ ಸಂದರ್ಭ ಉದ್ಭವವಾಗುವುದಿಲ್ಲ ಎಂದರು.ಮುಂಬರುವ ಲೋಕಸಭಾ ಚುನಾವಣೆಗೆ ಯಾವ ಮಂತ್ರಿಗಳೂ ಸ್ಪರ್ಧಾ ಆಕಾಂಕ್ಷಿಗಳಿಲ್ಲ. ನಮಗೆ ಹೈಕಮಾಂಡ್ ಈ ಬಗ್ಗೆ ಒತ್ತಡವನ್ನೂ ಹಾಕಿಲ್ಲ. ಆಸಕ್ತಿ ಇದ್ದವರು ಸ್ಪರ್ಧೆ ಮಾಡಬಹುದು. ನಾನಂತೂ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ಕೆ. ಹರಿಪ್ರಸಾದ ಪಕ್ಷದ ಹಿರಿಯರಿದ್ದಾರೆ. ಅವರು ರಾಷ್ಟ್ರ ರಾಜಕಾರಣದಲ್ಲಿ ೩ ದಶಕ ಕಾಲ ಕೆಲಸ ಮಾಡಿದ್ದಾರೆ. ಅಂತಹ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ಜತೆ ನಾವೆಲ್ಲ ಮಾತಾಡಿದ್ದೇವೆ. ಪಕ್ಷದಲ್ಲಿ ಸಾಕಷ್ಟು ಹಿರಿಯರಿಗೆ ಅವಕಾಶ ದೊರೆತಿಲ್ಲ. ಅವಕಾಶ ಬಂದಾಗ ಕೊಡುತ್ತಾರೆ ಎಂದರು.ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು. ಆ ನಿಟ್ಟಿನಲ್ಲಿ ಚರ್ಚೆ ನಡೆಯಬೇಕು ಎಂಬುದು ನಮ್ಮ ಅಪೇಕ್ಷೆಯೂ ಇದೆ. ಈ ಬಗ್ಗೆ ಸರಕಾರವು ಉತ್ತರ ನೀಡಲಿದೆ ಎಂದರು.ಜಗದೀಶ ಶೆಟ್ಟರ್ ಅವರು ಬಿಜೆಪಿಗೆ ಬರುತ್ತಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿರುವುದು ಅವರ ಆತ್ಮೀಯತೆ ಆಧಾರದಲ್ಲಿ ಹೇಳಿರಬಹುದು. ಶೆಟ್ಟರ್ ಅವರು ಕಾಂಗ್ರೆಸ್ ತೊರೆಯಲ್ಲ ಎಂದು ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.ಹಿಂದಿನ ಸರ್ಕಾರ ಅನುದಾನಕ್ಕಿಂತ ಹೆಚ್ಚಿಗೆ ಕಾಮಗಾರಿ ಮಂಜೂರಿ ಮಾಡಿದ್ದರಿಂದ ಗುತ್ತಿಗೆದಾರರ ಬಿಲ್ ಬಾಕಿ ಉಳಿಯುವಂತಾಗಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.