ಜಯಘೋಷಗಳ ನಡುವೆ ಅಗ್ನಿಕೊಂಡ ಪ್ರವೇಶಿಸಿದ ಕರಗಧಾರಕ

| Published : Jul 17 2025, 12:30 AM IST

ಸಾರಾಂಶ

ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿರವರು ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗ ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಕರಗ ಮಹೋತ್ಸವದ ಪ್ರಯುಕ್ತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ಶ್ರೀಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ ನಡೆದ ಅಗ್ನಿಕೊಂಡೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರ ಜಯಘೋಷಗಳ ನಡುವೆ ಕರಗಧಾರಕ ದೇವಿ ಪ್ರಸಾದ್ ಸಿಂಗ್ ರವರು ಅಗ್ನಿಕೊಂಡ ಪ್ರವೇಶ ಮಾಡಿದರು.

ಶ್ರೀ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವವು ಬುಧವಾರ ಬೆಳಗ್ಗೆ ಸಾವಿರಾರು ಭಕ್ತಾಧಿಗಳ ಜಯಘೋಷದ ನಡುವೆ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನಗರದ ಸಿಂಗ್ರಾಭೋವಿದೊಡ್ಡಿಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕರಗಧಾರಣೆ ಮಾಡಿ, ನಂತರ ದ್ಯಾವರಸೇಗೌಡನದೊಡ್ಡಿ, ಚಾಮುಂಡಿಪುರ, ವಿನಾಯಕನ ನಗರ, ಅಂಚೇಕೆಂಪೇಗೌಡನ ದೊಡ್ಡಿ, ಪೊಲೀಸ್ ಕ್ವಾಟ್ರಸ್, ಶೆಟ್ಟಿಹಳ್ಳಿ, ಮಾರ್ಗವಾಗಿ ಕುಂಬಾರ ಬೀದಿ, ಮೇಗಲ ಪೇಟೆ, ಹೂವಾಡಿಗರ ಬೀದಿ, ತಿಗಳರ ಬೀದಿ, ಐಜೂರು, ಮಶ್ವರ ರಸ್ತೆ, ಹನುಮಂತ ನಗರ ಅಗ್ರಹಾರ, ಚಾಮುಂಡೇಶ್ವರಿ ಬಡಾವಣೆ, ಶೆಟ್ಟಿ ಬಲಜಿಗರ ಬೀದಿ, ಗಾಂಧಿ ನಗರ, ಕಾಯಿಸೊಪ್ಪಿನ ಬೀದಿ, ಎಂ.ಜಿ ರಸ್ತೆ ನಂತರ ರಾಜಬೀದಿ ಮಾರ್ಗವಾಗಿ ಬಂದ ಕರಗ ಬುಧವಾರ ಬೆಳಗ್ಗೆ ಅಗ್ನಿಕೊಂಡ ಪ್ರವೇಶ ಮಾಡಿತು.

ಕರಗ ಸಂಚರಿಸುವ ದಾರಿಗಳಲ್ಲಿ ಭಕ್ತರು ಹೂವಿನ ನೆಲ ಹಾಸನ್ನು ನಿರ್ಮಿಸಿ ಕರಗವನ್ನು ಬರಮಾಡಿಕೊಂಡರು. ಅಗ್ನಿಕೊಂಡದ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಅಗ್ನಿಕೊಂಡ ಪ್ರವೇಶದ ನಂತರ ಭಕ್ತರು ಕೊಂಡಕ್ಕೆ ಎಳ್ಳು ಮತ್ತು ಉಪ್ಪನ್ನು ಹಾಕುವ ಮೂಲಕ ಹರಕೆಯನ್ನು ತೀರಿಸಿಕೊಂಡರು.

ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದ ಆವರಣದಲ್ಲಿ ಸಿಡಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಬುಧವಾರ ಎಂಟು ದೇವತೆಗಳ ಕರಗ ಮಹೋತ್ಸವವೂ ನಗರದಲ್ಲಿ ಜರುಗಿತು. ಶ್ರೀಚಾಮುಂಡೇಶ್ವರಿ ಕರಗದ ಜೊತೆಗೆ ಶೆಟ್ಟಿಹಳ್ಳಿಯ ಆದಿಶಕ್ತಿ, ತೋಪಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದಕೇರಿಯ ಮಾರಮ್ಮ, ಭಂಡಾರಮ್ಮ, ಐಜೂರಿನ ಆದಿಶಕ್ತಿ, ಕೊಂಕಾಣಿದೊಡ್ಡಿಯ ಆದಿಶಕ್ತಿ ಹಾಗೂ ಹುಲಿಯೂರಮ್ಮನವರ ಕರಗ ಮಹೋತ್ಸವಗಳು ವಿಜೃಂಭಣೆಯಿಂದ ನಡೆದವು. ತಮ್ಮ ವಾರ್ಡ್ ಗಳಿಗೆ ಬಂದ ಕರಗಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ದೇವಾಲಯಗಳು ರಾತ್ರಿಯಿಡೀ ತೆರೆದಿದ್ದವು.

ಕರಗ ಮಹೋತ್ಸವದಿಂದ ಇಡೀ ನಗರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಭಕ್ತರು ದೇವಿಯನ್ನು ಕಣ್ತುಂಬಿ ಕೊಂಡು ಪುನೀತರಾದರು.

ಎಚ್ ಡಿಕೆ ಕುಟುಂಬದವರ ಗೈರು:

ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರ ಕುಟುಂಬ ಗೈರಾಗಿತ್ತು.

ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿರವರು ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗ ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಕರಗ ಮಹೋತ್ಸವದ ಪ್ರಯುಕ್ತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.

ಕಳೆದ ವರ್ಷ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳಿದ್ದರು. ಈ ವರ್ಷ ಕುಮಾರಸ್ವಾಮಿಯಾಗಲಿ ಅಥವಾ ನಿಖಿಲ್ ಕುಮಾರಸ್ವಾಮಿಯಾಗಲಿ ರಾಮನಗರಕ್ಕೆ ಭೇಟಿ ನೀಡಲೇ ಇಲ್ಲ.

---------------------------------

ನಿಮ್ಮಗಳ ಆಶೀರ್ವಾದವೇ ನಮಗೆ ಶ್ರೀರಕ್ಷೆ: ಡಿ.ಕೆ‌.ಶಿವಕುಮಾರ್

ಕನ್ನಡಪ್ರಭ ವಾರ್ತೆ ರಾಮನಗರ

ಭಕ್ತಿಯಿರುವ ಕಡೆ ಭಗವಂತ ಇರುತ್ತಾನೆ, ಶ್ರಮವಿರುವ ಕಡೆ ಫಲವಿದೆ. ಅಂತಹ ವಾತಾವರಣವನ್ನು ರಾಮನಗರದಲ್ಲಿ ಕಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ‌‌.ಶಿವಕುಮಾರ್ ಹೇಳಿದರು.

ನಗರದ ಅರಳೀಮರ ವೃತ್ತದಲ್ಲಿ ಕರಗದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಯುವ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 35ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದುಖಃವನ್ನು ದೂರ ಮಾಡುವ ದೇವಿ ದುರ್ಗಾದೇವಿ ಈ ನಾಡಿನ‌ ಜನತೆಗೆ ನೆಮ್ಮದಿ, ಸುಖ, ಶಾಂತಿ ತಂದು ಮಳೆ, ಬೆಳೆಯಾಗಲಿ ಎಂದು ದೇವಾಲಯದಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಪ್ರತಿ ವರ್ಷ ಶಕ್ತಿ ದೇವತೆ ಶ್ರೀಚಾಮುಂಡೇಶ್ವರಿ ದೇವಿ ಮತ್ತು ನಿಮ್ಮ ಆಶೀರ್ವಾದದಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ವಿರೋಧ ಪಕ್ಷದವರ ಬಗ್ಗೆ ಮಾತನಾಡುವುದಿಲ್ಲ. ನಮಗೆ ಜಿಲ್ಲೆಯ ಜನರು ಆಶೀರ್ವಾದ ಮಾಡಿದ್ದೀರಿ, ನಾನು ನಿಮ್ಮ ನಂಬಿಕೆಯನ್ನು ಉಳಿಸಿಕೊಂಡು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದಾಗಿ ಹೇಳಿದರು.

ರಸಮಂಜರಿ ಕಾರ್ಯಕ್ರಮದಲ್ಲಿ ರಾಕ್ ಸ್ಟಾರ್ ಯುವರಾಜ್ ತಂಡದವರಿಂದ ಹಲವು ಗೀತೆಗಳನ್ನು ಹಾಡಿ ರಂಜಿಸಿ, ನೃತ್ಯ ಮಾಡಿದರು. ಮಿಮಿಕ್ರಿ ಗೋಪಿ ಅವರ ಹಾಸ್ಯ ಚಟಾಕಿಗೆ ಸಭಿಕರು ಮನಸೊರೆಗೊಂಡಿತು‌‌.

ಕಾರ್ಯಕ್ರಮದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಕೊಡಗು ಶಾಸಕ ಮಂತರ್ ಗೌಡ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಶ್ರೀ ಚಾಮುಂಡೇಶ್ವರಿ ಯುವ ಸಮಿತಿ ಕಾರ್ಯಾಧ್ಯಕ್ಷ ಸಿ.ಎನ್. ಆರ್. ವೆಂಕಟೇಶ್, ಅಧ್ಯಕ್ಷ ಎಚ್. ನರಸಿಂಹಯ್ಯ, ಕಾರ್ಯದರ್ಶಿ ಜಿ.ಕೆ.ಕುಮಾರ್, ಮುಖಂಡರಾದ ಕೆ.ರಮೇಶ್, ಕರಡಿಗೌಡನದೊಡ್ಡಿ ಉಮಾಶಂಕರ್, ನವೀನ್ ಗೌಡ, ರಾಜು, ರಘು, ಚಿಕ್ಕೇಗೌಡ, ಷಡಕ್ಷರಿ, ನಾಗೇಶ್, ಪುಟ್ಟಣ್ಣ, ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.