ಮೈಸೂರು ವಿವಿಯಿಂದ 80 ಕೋಟಿ ರು. ಕೊರತೆ ಬಜೆಟ್

| Published : Jun 29 2024, 12:40 AM IST

ಸಾರಾಂಶ

ನಿರೀಕ್ಷಿತ ಆದಾಯಕ್ಕಿಂತ ಸಿಬ್ಬಂದಿ ವೇತನ, ಪಿಂಚಣಿ,ನಿರ್ವಹಣೆ ಸೇರಿ ಶೈಕ್ಷಣಿಕ ಕಾರ್ಯಕ್ರಮಗಳ ವಿಚಾರಗಳಿಗೆ ವೆಚ್ಚವೇ ಆಗುತ್ತಿರುವುದರಿಂದ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿರುವುದರಿಂದ ಕೊರತೆಯಾಗಲು ಕಾರಣ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿವಿಯ 2024-25ನೇ ಸಾಲಿನ ಆಯವ್ಯಯದ ಅಂದಾಜುಗಳಲ್ಲಿ ಒಟ್ಟಾರೆ ನಿರೀಕ್ಷಿತ ಆದಾಯ 277.39 ಕೋಟಿ ಮತ್ತು ಒಟ್ಟಾರೆ ನಿರೀಕ್ಷಿತ ವೆಚ್ಚ 354.74 ಕೋಟಿ ರೂ.ಗಳಾಗಿದ್ದು, 80.35 ಕೋಟಿ ರು. ಕೊರತೆ ಆಯವ್ಯಯ ಅಂದಾಜು ಮಂಡಿಸಿತು.

ವಿವಿಯ ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿ ಮೊದಲನೇ ಸಭೆಯಲ್ಲಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಆಯವ್ಯಯ ಮಂಡಿಸಿದರು.

ನಿರೀಕ್ಷಿತ ಆದಾಯಕ್ಕಿಂತ ಸಿಬ್ಬಂದಿ ವೇತನ, ಪಿಂಚಣಿ,ನಿರ್ವಹಣೆ ಸೇರಿ ಶೈಕ್ಷಣಿಕ ಕಾರ್ಯಕ್ರಮಗಳ ವಿಚಾರಗಳಿಗೆ ವೆಚ್ಚವೇ ಆಗುತ್ತಿರುವುದರಿಂದ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿರುವುದರಿಂದ ಕೊರತೆಯಾಗಲು ಕಾರಣವಾಗಿದೆ. 2024-25ನೇ ಸಾಲಿನ ಮೈಸೂರು ವಿವಿ ಆಯವ್ಯಯ ಅಂದಾಜಿನಲ್ಲಿ ಖಾಯಂ ಸಿಬ್ಬಂದಿ ವೇತನ ಮತ್ತು ಪಿಂಚಣಿಗಳ ಅನುದಾನದ ಕುರಿತು ರಾಜ್ಯ ಸರ್ಕಾರದಿಂದ ಒಟ್ಟಾರೆ 171.78 ಕೋಟಿ ರು. ಮಂಜೂರಾಗಿದೆ. ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ 3 ಕೋಟಿ ಅನುದಾನವನ್ನು ಬಿಡುಗಡೆಯನ್ನು ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟಾರೆ 174. 78 ಕೋಟಿ ರು. ಅದಾಯವಾಗಿ ಪರಿಗಣಿಸಲಾಗಿದೆ.

ಆಂತರಿಕ ಸಂಪನ್ಮೂಲಗಳಾದ ಪ್ರವೇಶ, ನೋಂದಣಿ, ಸಂಯೋಜನೆ ಹಾಗೂ ಇನ್ನಿತರ ಶುಲ್ಕಗಳಿಂದ 42 ಕೋಟಿ ರು., ಸ್ಕೀಂ ಬಿ ಕೋರ್ಸ್ ಗಳಿಂದ 3.50 ಕೋಟಿ ರು., ಪರೀಕ್ಷಾ ಚಟುವಟಿಕೆಯಿಂದ 45 ಕೋಟಿ ರು., ವಿವಿಯ ವಿವಿಧ ಆಸ್ತಿಗಳಿಂದ 3 ಕೋಟಿ ರು., ಹಾಗೂ ಇತರೆ ಮೂಲಗಳಿಂದ 6 ಕೋಟಿ ರು. ನಿರೀಕ್ಷಿಸಲಾಗಿದೆ. ಒಟ್ಟಾರೆ 99.50 ಕೋಟಿ ರು. ನಿರೀಕ್ಷಿಸಿ ಆಂತರಿಕ ಆದಾಯವಾಗಿದೆ.

2023-24ನೇ ಸಾಲಿನ ಆಯವ್ಯಯ ಅಂದಾಜುಗಳ ಅನ್ವಯ 3.10 ಕೋಟಿ ಉಳಿದಿದ್ದು, ಈ ಮೊಬಲಗನ್ನು ಆರಂಭಿಕ ಶಿಲ್ಕು ಎಂದು ಪರಿಗಣಿಸಲಾಗಿದೆ ಎಂದರು.

ವಿವಿಯ ಒಟ್ಟು 18 ಖಾತೆಗಳ ಸ್ವೀಕೃತಿ ಹಾಗೂ ಬಡ್ಡಿ ಮೊತ್ತ ಸೇರಿ ಒಟ್ಟು ಆದಾಯ 61.94 ಕೋಟಿ ಮತ್ತು ವೆಚ್ಚಗಳ ಒಟ್ಟು ಮೊಬಲಗು 47.66 ಕೋಟಿ ನಿಗದಿಪಡಿಸಲಾಗಿದೆ ಎಂದರು.-- ಬಾಕ್ಸ್‌--

-- ಸುಮಾರು 1,852 ಪಿಂಚಣಿದಾರರು

ವಿವಿಯು 108 ವಸಂತಗಳನ್ನು ಪೂರೈಸಿ, 109ನೇ ವರ್ಷಕ್ಕೆ ಕಾಲಿಟ್ಟಿದ್ದು, ಸುಮಾರು 1,852 ಪಿಂಚಣಿದಾರರಿದ್ದು, ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. 2023-24ರಲ್ಲಿ 1,802 ಪಿಂಚಣಿದಾರರಿದ್ದು, 2024-25ರಲ್ಲಿ ಪಿಂಚಣಿದಾರರ ಸಂಖ್ಯೆ 1,852 ಆಗಲಿದ್ದು, ಪ್ರಸ್ತುತ ಸಾಲಿನಲ್ಲಿ 50 ಉದ್ಯೋಗಿಗಳು ನಿವೃತ್ತರಾಗುವರು. ಆದ್ದರಿಂದ 2024-25ನೇ ಸಾಲಿಗೆ ಪಿಂಚಣಿ ಬಾಬ್ತಿಗಾಗಿ 120 ಕೋಟಿ ನಿಗದಿಪಡಿಸಲಾಗಿದೆ.

ವಿವಿಯ ವೇತನ ಭತ್ಯೆಗಳು, ಪಿಂಚಣಿ, ಸಾಮಾನ್ಯ ಆಡಳಿತ ವೆಚ್ಚಗಳು ಹಾಗೂ ಇನ್ನುಳಿದ ನಿರೀಕ್ಷಿತ ವೆಚ್ಚಗಳನ್ನು ಯೋಜನೇತರ ವೆಚ್ಚಗಳಡಿ ಪರಿಗಣಿಸಿ ಒಟ್ಟು 357.74 ಕೋಟಿ ರು. ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.--- ಬಾಕ್ಸ್‌---

-- 80.35 ಕೋಟಿ ರು. ಕೊರತೆ ಆಯವ್ಯಯ--

2022-23, 2023-24 ಮತ್ತು 2024-25ನೇ ಸಾಲಿನಲ್ಲಿ ಸರ್ಕಾರದಿಂದ ಪಿಂಚಣಿ ಅನುದಾನವಾಗಿ ಕ್ರಮವಾಗಿ 56 ಕೋಟಿ, 63 ಕೋಟಿ ಮತ್ತು 70 ಕೋಟಿ ಕಡಿಮೆ ನೀಡಿದ್ದರಿಂದಾಗಿ 2024-25ನೇ ಸಾಲಿಗೆ ಅಂದಾಜು 80.35 ಕೋಟಿ ರೂ. ಕೊರತೆ ಆಯವ್ಯಯವನ್ನು ವಿವಿ ಎದುರಿಸುತ್ತಿದೆ.

ಆದರೂ 2024-25ನೇ ಸಾಲಿನ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಕ್ರಮವಹಿಸಲಾಗುವುದು ಮತ್ತು ಅಗತ್ಯ ವೆಚ್ಚಗಳನ್ನು ಹೊರತುಪಡಿಸಿ ಉಳಿದ ವೆಚ್ಚಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.