ಚಾಲಕರ ದಿನ ಆಚರಿಸಲು ಸಾರಿಗೆ ಇಲಾಖೆ ಸಿದ್ಧತೆ!

| Published : May 05 2024, 02:12 AM IST / Updated: May 05 2024, 06:56 AM IST

ಸಾರಾಂಶ

ವರ್ಷವಿಡೀ ಕೆಲಸ ಮಾಡುವ, ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಯಲ್ಲಿನ ವಾಹನ ಚಾಲಕರ ಶ್ರಮಕ್ಕೆ ಗೌರವ ಸಲ್ಲಿಸಲು ಅಪಘಾತ ರಹಿತ ಚಾಲನೆ ಮಾಡಿದ ಚಾಲಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಜತೆಗೆ ‘ಚಾಲಕರ ದಿನ’ವನ್ನು ಆಚರಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ.

 ಬೆಂಗಳೂರು :  ವರ್ಷವಿಡೀ ಕೆಲಸ ಮಾಡುವ, ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಯಲ್ಲಿನ ವಾಹನ ಚಾಲಕರ ಶ್ರಮಕ್ಕೆ ಗೌರವ ಸಲ್ಲಿಸಲು ಅಪಘಾತ ರಹಿತ ಚಾಲನೆ ಮಾಡಿದ ಚಾಲಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಜತೆಗೆ ‘ಚಾಲಕರ ದಿನ’ವನ್ನು ಆಚರಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ.

ಕಳೆದ ವರ್ಷ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಒಕ್ಕೂಟದ ವಿವಿಧ ಸಂಘಟನೆಗಳು ಪ್ರತಿಭಟಿಸಿದ ಸಂದರ್ಭದಲ್ಲಿ ಚಾಲಕರ ಶ್ರಮವನ್ನು ಗುರುತಿಸಿ, ಗೌರವಿಸುವ ಸಲುವಾಗಿ ಚಾಲಕರ ದಿನವನ್ನು ಆಚರಿಸಬೇಕು ಎಂಬ ಬೇಡಿಕೆಯನ್ನೂ ಇಡಲಾಗಿತ್ತು. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಸರ್ಕಾರ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಚಾಲಕರ ದಿನವನ್ನು ಯಾವಾಗ? ಯಾವ ರೀತಿಯಲ್ಲಿ ಆಚರಿಸಬೇಕು ಎಂಬ ಬಗ್ಗೆ ಇಲಾಖೆ ನಿರ್ಧರಿಸಲಿದೆ.

ಚಾಲಕರ ದಿನದಂದು ಪ್ರಶಸ್ತಿ:

ಕಾಟಾಚಾರಕ್ಕೆ ಚಾಲಕರ ದಿನವನ್ನು ಚಾರಿಸುವ ಬದಲು ಅದನ್ನು ಅರ್ಥಪೂರ್ಣವಾಗಿಸಲು ಚಾಲಕರಿಗೆ ಪ್ರೇರಣೆ ಸಿಗುವಂತೆ ಮಾಡುವುದು ಸಾರಿಗೆ ಇಲಾಖೆ ಉದ್ದೇಶವಾಗಿದೆ. ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಚಾಲನಾ ವೃತ್ತಿಯಲ್ಲಿ ತೊಡಗಿಕೊಂಡಿರುವ, ಸಾರಿಗೆ ಇಲಾಖೆಯಿಂದ ಪಡೆಯುವ ಎಲ್ಲ ದಾಖಲೆಗಳನ್ನು ಪಡೆದಿರುವ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಅಪಘಾತ ರಹಿತ ಚಾಲನೆ ಮಾಡಿರುವ ಚಾಲಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಅಲ್ಲದೆ, ಈ ಪ್ರಶಸ್ತಿಯು ರಾಜ್ಯ ಮಟ್ಟದಲ್ಲಿ ಮಾತ್ರ ನೀಡಬೇಕೆ ಅಥವಾ ಜಿಲ್ಲಾ ಮಟ್ಟದಲ್ಲೂ ನೀಡಬೇಕೆ ಎಂಬ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವವರ ಮಾನದಂಡ ಹೀಗೆ ಎಲ್ಲವನ್ನೂ ಶೀಘ್ರದಲ್ಲಿ ನಿಗದಿ ಮಾಡಿ ಘೋಷಿಸುವ ಬಗ್ಗೆಯೂ ಅಧಿಕಾರಿಗಳು ಹೇಳಿದ್ದಾರೆ.

ಶಂಕರ್‌ನಾಗ್‌ ಜನ್ಮದಿನದಂದು ಚಾಲಕರ ದಿನ?ಖಾಸಗಿ ಸಾರಿಗೆ ಸಂಘಟನೆಗಳು ‘ಆಟೋ ರಾಜ’ ಚಲನಚಿತ್ರದಲ್ಲಿ ಆಟೋ ಚಾಲಕನ ಪಾತ್ರ ಮಾಡಿದ್ದ ಶಂಕರ್‌ ನಾಗ್‌ ಜನ್ಮದಿನವನ್ನು ಚಾಲಕರ ದಿನವನ್ನಾಗಿ ಆಚರಿಸಬೇಕು ಎಂಬ ಸಲಹೆಯನ್ನೂ ನೀಡಿದ್ದವು. ಇದೀಗ ಸಾರಿಗೆ ಇಲಾಖೆ ಅಧಿಕಾರಿಗಳೇ ಹೇಳುವಂತೆ, ಶಂಕರ್‌ ನಾಗ್‌ ಅವರ ಜನ್ಮದಿನವಾದ ನ. 9ರಂದು ಚಾಲಕರ ದಿನ ಆಚರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.