ಹಸಿರೇ ಉಸಿರಾಗಿ ಜೀವಿಸಿದ ವೃಕ್ಷಮಾತೆ ಇನ್ನಿಲ್ಲ

| Published : Nov 15 2025, 01:00 AM IST

ಸಾರಾಂಶ

ರಾಮನಗರ: ‘ವೃಕ್ಷಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರು ವಯೋಸಹಜ ಕಾಯಿಲೆಯಿಂದಾಗಿ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರಾಮನಗರ: ‘ವೃಕ್ಷಮಾತೆ’ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರು ವಯೋಸಹಜ ಕಾಯಿಲೆಯಿಂದಾಗಿ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರಾಗಿರುವ ತಿಮ್ಮಕ್ಕ ಅವರಿಗೆ ಪುತ್ರ ಪರಿಸರವಾದಿ ಉಮೇಶ್ ಬಳ್ಳೂರು (ಸಾಕಮಗ) ಇದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಆಗಾಗ ಏರುಪೇರಾಗುತ್ತಿತ್ತು. ಅದರಂತೆ, ನವೆಂಬರ್ 2ರಂದು ಉಸಿರಾಟದ ತೀವ್ರ ಸಮಸ್ಯೆಯಿಂದಾಗಿ ತಿಮ್ಮಕ್ಕ ಅವರನ್ನು ಜಯನಗರದ ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಿಮ್ಮಕ್ಕನಿಗೆ ಗಿಡ ಮರಗಳೇ ಮಕ್ಕಳು:

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕು ಕುದೂರು ಗ್ರಾಮದಿಂದ ಹುಲಿಕಲ್ಲು ಗ್ರಾಮದವರೆವಿಗೆ 4 ಕಿ.ಮೀ ದೂರದವರೆವಿಗೆ 294 ಆಲದ ಗಿಡಗಳನ್ನು ನೆಟ್ಟು ಅವುಗಳನ್ನು ಮರವಾಗುವ ತನಕ ಜತನದಿಂದ ಕಾಪಾಡಿ ಸಾಲುಮರದ ತಿಮ್ಮಕ್ಕ ಪರಿಸರಕ್ಕೆ ಅತಿದೊಡ್ಡ ಕೊಡುಗೆ ನೀಡಿದ್ದಾರೆ.

ತಿಮ್ಮಕ್ಕ ಅವರು ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. 1911 ಜೂನ್ 30ರಂದು ಚಿಕ್ಕರಂಗಯ್ಯ- ವಿಜಯಮ್ಮ ದಂಪತಿಯ ಪುತ್ರಿಯಾಗಿ ಜನಿಸಿದರು. ಬಡತನ, ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಶಾಲೆಗೆ ಹೋಗಲು ತಿಮ್ಮಕ್ಕ ಅವರಿಗೆ ಸಾಧ್ಯವಾಗಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಕುರಿ ಮತ್ತು ದನಗಳನ್ನು ಮೇಯಿಸುವ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದರು.

ಬಳಿಕ ಮಾಗಡಿ ತಾಲೂಕಿನ ಚಿಕ್ಕಯ್ಯ ಅವರನ್ನು ವಿವಾಹವಾದರು. ಆದರೆ, ದುರದೃಷ್ಟವಶಾತ್ ಈ ದಂಪತಿಗೆ ಮಕ್ಕಳಾಗಲಿಲ್ಲ. ಆ ಕೊರಗು ಮರೆಯಲು ತಿಮ್ಮಕ್ಕ ಅವರು ತಮ್ಮೂರಿನ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟರು.

ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿ ಮೊದಲ ವರ್ಷದಲ್ಲಿ 4 ಕಿ.ಮೀ. ಉದ್ದದ ರಸ್ತೆಯ ಎರಡೂ ಬದಿಗಳಲ್ಲಿ 10 ಆಲದ ಸಸಿಗಳನ್ನು ನೆಡುವುದರೊಂದಿಗೆ ಪ್ರಾರಂಭಿಸಿದರು. ಅವರು ತಮ್ಮ ಮಕ್ಕಳಂತೆ ಗಿಡಗಳನ್ನು ನೋಡಿಕೊಂಡರು. ಪ್ರತಿ ವರ್ಷ, ಈ ಗಿಡಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ತಿಮ್ಮಕ್ಕ ಮತ್ತು ಅವರ ಪತಿ ಚಿಕ್ಕಯ್ಯ ಸಸಿಗಳಿಗೆ ನೀರುಣಿಸಲು 4 ಕಿ.ಮೀ ದೂರ ನಾಲ್ಕು ಬಕೆಟ್ ನೀರನ್ನು ಹೊತ್ತುಕೊಂಡು ಹೋಗುತ್ತಿದ್ದರು. ಮರಗಳನ್ನು ನೆಡಲು ತಮ್ಮಲ್ಲಿದ್ದ ಸಣ್ಣಪುಟ್ಟ ಸಂಪನ್ಮೂಲಗಳನ್ನು ಬಳಸಿದರು. ಮರಗಳಿಗೆ ಸಾಕಷ್ಟು ನೀರು ಪಡೆಯಲು, ಅವರು ಮಳೆಗಾಲದಲ್ಲಿ ಮರಗಳನ್ನು ನೆಡಲು ಪ್ರಾರಂಭಿಸಿದರು. ಇದು ಹಲವು ವರ್ಷಗಳ ಕಾಲ ತಿಮ್ಮಕ್ಕ ಮತ್ತು ಚಿಕ್ಕಯ್ಯ ಅವರ ದಿನಚರಿಯಾಯಿತು,

ಆ ಗಿಡಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿದ ದಂಪತಿ, ನಿತ್ಯ ನೀರು ಹಾಕಿ, ದನಕರುಗಳು ತಿನ್ನದಂತೆ ಕಾವಲು ಕಾದು ಪೋಷಿಸಿದರು. ಚಿಕ್ಕಯ್ಯ ನಿಧನರಾದ ಐದು ವರ್ಷಗಳ ನಂತರ, 1995ರಿಂದ ತಿಮ್ಮಕ್ಕ ಅವರಿಗೆ ಮನ್ನಣೆ ದೊರೆಯಲು ಪ್ರಾರಂಭಿಸಿತು. ಚಿಕ್ಕಯ್ಯ ಕೂಡ ಪ್ರಕೃತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

ಸಾಲು ಮರದ ತಿಮ್ಮಕ್ಕ ಪತಿ ಚಿಕ್ಕಯ್ಯ ಅವರೊಂದಿಗೆ ರಾಜ್ಯ ಹೆದ್ದಾರಿ 99ರ ಕುದೂರಿನಿಂದ ಹುಲಿಕಲ್ ಮಾರ್ಗದ ನಡುವೆ 4.5 ಕಿ.ಮೀ. ಉದ್ದಕ್ಕೂ ನೆಟ್ಟಿದ್ದ 294 ಆಲದ ಗಿಡಗಳೀಗ ದೊಡ್ಡ ಮರಗಳಾಗಿ ಬೆಳೆದು ನಿಂತಿವೆ.

ನಾಡಿನಾದ್ಯಂತ ಸುಮಾರು 8 ಸಾವಿರಕ್ಕೂ ಹೆಚ್ಚು ಮರ ಗಿಡಗಳನ್ನು ಬೆಳೆಸಿದ್ದಾರೆ. ಅವರ ಈ ಅಪೂರ್ವ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಸಂದಿವೆ.

ಇದು ಅವರ ಪರಿಸರ ಪ್ರೀತಿಯ ಪ್ರತೀಕವಾಗಿ ಇಂದಿಗೂ ನಿಂತಿವೆ. ಅವರ ಈ ಕಾರ್ಯ ಇಡೀ ದೇಶಕ್ಕೆ ಪ್ರೇರಣೆಯಾಗಿದೆ.

ಅಕ್ಷರಸ್ಥರಲ್ಲದಿದ್ದರೂ, ಪರಿಸರ ಸಂರಕ್ಷಣೆಯಲ್ಲಿ ಅವರು ಮಾಡಿದ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಮರಗಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು, ಅವುಗಳ ಬೆಳವಣಿಗೆಗೆ ಶ್ರಮಿಸಿದ ಅವರ ನಿಷ್ಠೆ ಪ್ರಶಂಸನೀಯ.

ಬಾಕ್ಸ್ ..............

ಓದು ಬರಹ ಕಲಿಯದ ತಿಮ್ಮಕ್ಕ:

ಶಾಲೆಯ ಮೆಟ್ಟಿಲನ್ನು ಹತ್ತದ ತಿಮ್ಮಕ್ಕನಿಗೆ ವಿದ್ಯೆ ಒಲಿಯಲಿಲ್ಲ. ಆದರೆ ಯಾವುದೇ ಶಾಲೆ ಕಾಲೇಜು ಕಲಿತವರಿಗಿಂತಲೂ ಅತಿದೊಡ್ಡ ಸಾಧನೆ ಮಾಡಿದ ತಿಮ್ಮಕ್ಕನ ಸಾಧನೆ ಎಂತಹವರನ್ನು ಬೆರಗಾಗಿಸುತ್ತದೆ. ತಿಮ್ಮಕ್ಕನಿಗೆ ಜೀವನದ ಬಡತನ, ಅಪಮಾನ, ನಿಂದನೆ ಆರೋಪ ಇವುಗಳಿಂದ ಬೇಸತ್ತಾಗ ತಿಮ್ಮಕ್ಕ ಆರಿಸಿಕೊಂಡಿದ್ದು ಗಿಡನೆಡುವ ಕಾಯಕವನ್ನು. ತನ್ನಂತೆ ಮಾಂಸ ಮೂಳೆ ಜೀವವನ್ನು ಹೊಂದಿದ ಮನುಷ್ಯ ವರ್ಗದಿಂದ ಸುರಿದ ಕಣ್ಣೀರಿಗೆ ಸಾಂತ್ವನ ನೀಡಿದ್ದು ಅಕ್ಷರಶಃ ಗಿಡ ಮರಗಳು ಎಂಬುದು ಅಚ್ಚರಿ ಎನಿಸಿದರು ಸತ್ಯ.

(ಸಾಲು ಮರದ ತಿಮ್ಮಕ್ಕನ ಫೋಟೋ ಒಂದು ಬಳಸಿ ಸರ್‌)