ಸಾರಾಂಶ
ಲಕ್ಷ್ಮೇಶ್ವರ: ಶಿಕ್ಷಣವು ಬಾಳಿನ ಭಾಗ್ಯೋದಯಕ್ಕೆ ಅವಶ್ಯವಾಗಿದೆ. ಮನುಷ್ಯ ಜೀವನ ಸುಂದರ ಶುದ್ಧಗೊಳಿಸುವುದೇ ಶಿಕ್ಷಣದ ಗುರಿ. ವ್ಯಕ್ತಿತ್ವ ವಿಕಸನಗೊಳ್ಳಲು ಶಿಕ್ಷಣ ಬೇಕೆ ಬೇಕು. ವಿದ್ಯೆ ಸಾಧಕನ ನಿಜವಾದ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದು ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಭಾನುವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಅಮೃತ ಮಹೋತ್ಸವ ಹಾಗೂ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ಅಂತರoಗದ ಕತ್ತಲೆ ಕಳೆದು ಜನಮನ ಜಾಗೃತಗೊಳಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ ಧರ್ಮದಿಂದ ಭಾವನೆ ಬೆಳೆಯುತ್ತವೆ. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ ಶಕ್ತಿ ಭಾವನೆಗಳು ಎರಡೂ ಬೆಳೆದುಕೊಂಡು ಬರುವ ಅವಶ್ಯಕತೆಯಿದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಶುದ್ಧವಾದ ಬುದ್ಧಿ ಸಂಪತ್ತಿನ ಆಗರವೆಂದು ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದನ್ನು ಎಂದಿಗೂ ಮರೆಯಲಾಗದು. ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಯಾವತ್ತೂ ರಾಜಕೀಯ ಪ್ರವೇಶ ಮಾಡಬಾರದು. ವೀರಗಂಗಾಧರ ಜಗದ್ಗುರುಗಳ ಸಂಕಲ್ಪದೊoದಿಗೆ ಪ್ರಾರಂಭಗೊoಡ ತಾಯಿ ಪಾರ್ವತಿ ಮಕ್ಕಳ ಬಳಗ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.
ದಾವಣಗೆರೆಯ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಂದ ಮಹಿಳೆಯರಿಗಾಗಿ ಸ್ಥಾಪಿಸಿದ ತಾಯಿ ಪಾರ್ವತಿ ಮಕ್ಕಳ ಬಳಗ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಕಾರ್ಯ ಮಾಡುತ್ತಾ ಬಂದಿರುವುದು ಸಂತೋಷದ ಸಂಗತಿ. 75 ವರ್ಷಗಳ ಅವಧಿಯಲ್ಲಿ ಲಕ್ಷಾಂತರ ಪ್ರತಿಭೆ ಬೆಳೆಸಿರುವುದು ಹೆಮ್ಮೆಯ ಸಂಗತಿ. ಮಹಿಳೆಯರು ಸೇರಿ ಶಿಕ್ಷಣ ದಾಸೋಹ ಮಾಡುತ್ತಿರುವುದು ಸಂತೋಷ ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದ್ದು. ಮಹಿಳೆಯರು ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ಇಂದು ಮೌಲ್ಯಾಧಾರಿತ ಶಿಕ್ಷಣ ಅವಶ್ಯಕತೆ ಇದೆ. ಮಕ್ಕಳಿಗೆ ಆಸ್ತಿ ಮಾಡಲು ಸಮಯ ವ್ಯರ್ಥ ಮಾಡದೆ ಮಕ್ಕಳಿಗೆ ಮಾನವೀಯ ಮೌಲ್ಯ ಕಲಿಸಿ ಕೊಡಿ ಎಂದು ಹೇಳಿದರು.ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು, ಕರೆವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು, ಬನ್ನಿಕೊಪ್ಪದ ಡಾ ಸುಜ್ಞಾನದೇವ ಸ್ವಾಮಿಗಳು ಇದ್ದರು.
ತಾಯಿ ಪಾ.ಮ. ಬಳಗದ ಅಧ್ಯಕ್ಷೆ ಸುವರ್ಣಬಾಯಿ ಬಹದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಹಾಗೂ ತಾಯಿ ಪಾರ್ವತಿ ಮಕ್ಕಳ ಬಳಗದ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಪಾಲಕರು ಇದ್ದರು.