ಗಡಿನಾಡಿನಲ್ಲಿಂದು ಮೊಳಗಲಿದೆ ಕನ್ನಡದ ಕಹಳೆ

| Published : Nov 01 2024, 12:36 AM IST

ಸಾರಾಂಶ

ಕರ್ನಾಟಕ ರಾಜ್ಯೋತ್ಸವಕ್ಕೆ ಗಡಿನಾಡು ಬೆಳಗಾವಿ ನಗರ ಸಜ್ಜುಗೊಂಡಿದೆ. ನ. 1ರಂದು ರಾಜ್ಯೋತ್ಸವ ಅದ್ಧೂರಿ ಮೆರವಣಿಗೆ ನಡೆಯಲಿದ್ದು, ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಲಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ ರಾಜ್ಯೋತ್ಸವಕ್ಕೆ ಗಡಿನಾಡು ಬೆಳಗಾವಿ ನಗರ ಸಜ್ಜುಗೊಂಡಿದೆ. ನ. 1ರಂದು ರಾಜ್ಯೋತ್ಸವ ಅದ್ಧೂರಿ ಮೆರವಣಿಗೆ ನಡೆಯಲಿದ್ದು, ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಲಿದೆ.

ಜಿಲ್ಲಾಡಳಿತದ ವತಿಯಿಂದ ಬೆಳಗ್ಗೆ 10.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ದೇವಿಯ ಪೂಜೆ ಸಲ್ಲಿಸಿ, ಸಂದೇಶ ನೀಡುವರು. ಜಿಲ್ಲಾಡಳಿತದ ವತಿಯಿಂದ ಕನ್ನಡಪರ ಹೋರಾಟಗಾರರು, ಮಾಧ್ಯಮ ಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಿ ಸನ್ಮಾನಿಸಲಾಗುತ್ತದೆ.

ಮಧ್ಯಾಹ್ನ 12 ಗಂಟೆಗೆ ರಾಜ್ಯೋತ್ಸವದ ಮೆರ‍ವಣಿಗೆ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾಗಲಿದೆ. ಕೃಷ್ಣದೇವರಾಯ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕಾಕತಿವೇಸ್‌, ಶನಿವಾರ ಕೂಟ, ಗಣಪತಿ ಗಲ್ಲಿ, ಕಂಬಳಿಕೂಟ, ಮಾರುತಿ ಗಲ್ಲಿ, ಹುತಾತ್ಮ ಚೌಕ್‌, ಕಿರ್ಲೋಸ್ಕರ್‌ ರಸ್ತೆ, ಬೋಗಾರವೇಸ್‌ ವೃತ್ತ, ಯಂಡೇಕೂಟ, ಕಾಲೇಜು ರಸ್ತೆ ಮಾರ್ಗದಲ್ಲಿ ಸಂಚರಿಸಿ, ಸರ್ದಾರ್‌ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ಲಕ್ಷಾಂತರ ಜನ ಕನ್ನಡಿಗರು ರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೇಳಲಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ಜೊತೆಗೆ ರಾಜ್ಯೋತ್ಸವ ಆಚರಿಸುತ್ತಿರುವುದು ಕನ್ನಡಿಗರಲ್ಲಿ ಉತ್ಸಾಹ ಇಮ್ಮಡಿಸಿದೆ. ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಚನ್ನಮ್ಮನ ಪುತ್ಥಳಿಗೆ ದೀಪಾಲಂಕಾರ:

ನಗರದಲ್ಲಿರುವ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಯನ್ನು ವಿದ್ಯುತ್‌ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಕನ್ನಡ ಹೋರಾಟಗಾರರಿಗೆ ಸ್ಫೂರ್ತಿಯಾಗಿರುವ ಕಿತ್ತೂರು ಚನ್ನಮ್ಮ ವೃತ್ತವೇ ರಾಜ್ಯೋತ್ಸವ ಮೆರವಣಿಗೆಯ ಕೇಂದ್ರ ಬಿಂದುವಗಲಿದೆ. ಹಾಗಾಗಿ, ಜಿಲ್ಲಾಡಳಿತ ಚನ್ನಮ್ಮನ ಪುತ್ಥಳಿಯನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ಪುತ್ಥಳಿಯ ನಾಲ್ಕು ಧಿಕ್ಕನಲ್ಲೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ವರ್ತುಳದಲ್ಲಿ ರಾಜ್ಯೋತ್ಸವ ಶುಭಾಶಯ ಕೋರುವ ಕನ್ನಡಪರ ಸಂಘಟನೆಗಳ, ರಾಜಕೀಯ ಮುಖಂಡರ ಬೃಹತ್‌ ಗಾತ್ರದ ಕಟೌಟ್‌ಗಳು ಗಮನ ಸೆಳೆಯುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬಾವುಟ, ಶುಭಾಶಯ ಕೋರುವ ಕಟೌಟ್‌ ಗಳು ರಾರಾಜಿಸುತ್ತಿವೆ. ವಿವಿಧ ಕನ್ನಡಪರ ಸಂಘಟನೆಗಳು ಮೆರವಣಿಗೆ ಮಾರ್ಗದಲ್ಲಿ ವೇದಿಕೆಗಳನ್ನು ನಿರ್ಮಿಸಿ, ಕನ್ನಡಿಗರ ಮೇಲೆ ಪುಷ್ಪವೃಷ್ಟಿ ಸುರಿಸಲು ತಯಾರಿ ಮಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಪ್ರತಿವರ್ಷ ದೀಪಾವಳಿ ಅಮಾವಾಸ್ಯೆ ಹಿಂದಿನ ಹಾಗೂ ಮುಂದಿನ ದಿನಗಳಲ್ಲಿ ಬಂದರೂ ಶುಕ್ರವಾರ ಶುಭದಿನ ಎಂದು ಬಹುತೇಕ ವರ್ತಕರು ಶುಕ್ರವಾರ ಲಕ್ಷ್ಮೀ ಪೂಜೆ ಮಾಡುತ್ತಿದ್ದರು. ಆದರೆ ಈ ಬಾರಿ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶದ ಮಾರ್ಗದಲ್ಲೇ ರಾಜ್ಯೋತ್ಸವ ಮೆರವಣಿಗೆ ಹೊರಡಲಿರುವುದರಿಂದ ಈ ಮಾರ್ಗದ ಕೆಲವು ಅಂಗಡಿಕಾರರು ಗುರುವಾರದಂದೇ ದೀಪಾವಳಿ ಮಹಾಲಕ್ಷ್ಮೀ ಪೂಜೆ ನೆರವೇರಿಸಿದರೆ, ಕೆಲವರು ನ.2ರಂದು ಇನ್ನು ಕೆಲವರು ಶುಕ್ರವಾರ ಬೆಳಗ್ಗೆ ಲಕ್ಷ್ಮೀ ಪೂಜೆ ನೆರವೇರಿಸಲು ಮುಂದಾಗಿದ್ದಾರೆ.

ಸಂಚಾರ ಮಾರ್ಗ ಬದಲು:

ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನ.1ರ ಬೆಳಗ್ಗೆ 5 ಗಂಟೆಯಿಂದ ನ. 2ರ ಮಧ್ಯಾಹ್ನ 2 ಗಂಟೆವರೆಗೆ ನಗರದಲ್ಲಿ ಎಲ್ಲ ಮಾದರಿಯ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಚಿಕ್ಕೋಡಿ, ಸಂಕೇಶ್ವರ, ಕೊಲ್ಲಾಪುರ ಕಡೆಯಿಂದ ಕೆಎಲ್‌ಇ ರಸ್ತೆ, ಕೃಷ್ಣದೇವರಾಯ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮುಖಾಂತರ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಜಿನಾಬುಕುಲ್‌ ವೃತ್ತದ ಹತ್ತಿರ ಬಲತಿರುವು ಪಡೆದುಕೊಂಡು ಬಾಕ್ಸಾಯಿಟ್‌ ರಸ್ತೆ, ಹಿಂಡಲಗಾ ಫಾರೆಸ್ಟ್‌ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್‌, ಶೌರ್ಯ ಚೌಕ್‌, ಕೇಂದ್ರೀಯ ವಿದ್ಯಾಲಯ ನಂ.2, ಶರ್ಕತ್‌ ಪಾರ್ಕ್‌, ಗ್ಲೋಬ್‌ ಥಿಯೇಟರ್‌ ಮೂಲಕ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗಬೇಕು.

ಗೋವಾ ಮತ್ತು ಖಾನಾಪುರದಿಂದ ಬರುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸಿ, ಬಾಕ್ಸೈಟ್‌ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳು ಹಿಂಡಾಲ್ಕೋ ಸರ್ಕಲ್‌ ಬ್ರೀಡ್ಜ್‌, ರಾಷ್ಟ್ರೀಯ ಹೆದ್ದಾರಿ 4ರ ಕ್ಯಾನ್ಸರ್‌ ಆಸ್ಪತ್ರೆ ಮುಂದೆ ತಿರುವು ಪಡೆದುಕೊಂಡು ಕನಕದಾಸ ವೃತ್ತದ ಮೂಲಕ ಬಸ್‌ ನಿಲ್ದಾಣಕ್ಕೆ ಪ್ರವೇಶಿಸಬೇಕು. ಜೀಜಾಮಾತಾ ಸರ್ಕಲ್‌, ದೇಶಪಾಂಡೆ ಪೆಟ್ರೋಲ್‌ ಪಂಪ್‌ ಕಡೆಗಳಿಂದ ನರಗುಂದಕರ ಭಾವೆಚೌಕ್‌, ಕಂಬಳಿ ಕೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಪಿಂಪಳ ಕಟ್ಟಾ ಹತ್ತಿರ ಎಡತಿರುವು ಪಡೆದು ಪಾಟೀಲ ಗಲ್ಲಿ , ಶನಿಮಂದಿರ ಮೂಲಕ ಸ್ಟೇಶನ್‌ ರಸ್ತೆ ಮಾರ್ಗವಾಗಿ ಖಾನಾಪುರ ರಸ್ತೆಗೆ ಸೇರಿ ಮುಂದೆ ಸಾಗಬೇಕು.

ಹಳೆ ಪಿಬಿ ರಸ್ತೆ ಕಡೆಯಿಂದ ಖಾನಾಪುರ ಕಡೆಗೆ ಸಂಚರಿಸುವ ಎಲ್ಲ ವಾಹನಗಳುಜಿಜಾಮಾತಾ ಸರ್ಕಲ್‌ದಿಂದ ಬಲತಿರುವು ಪಡೆದು ಸರ್ಕಿಟ್‌ ಹೌಸ್‌, ಅಶೋಕ ವೃತ್ತ, ಕನಕದಾಸ್‌ ಸರ್ಕಲ್‌ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾಗೂ ಬಾಕ್ಸೈಟ್‌ ರಸ್ತೆ ಮೂಲಕ ಸಂಚರಿಸಬೇಕು.

ಎಲ್ಲೆಲ್ಲಿ ಪಾರ್ಕಿಂಗ್‌?

ರಾಜ್ಯೋತ್ಸವ ಮೆರವಣಿಗೆ ವೀಕ್ಷಿಸಲು ಬೆಳಗಾವಿಗೆ ಆಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ಸ್ಥಳ ಗುರುತಿಸಲಾಗಿದೆ. ಕೆಇಬಿ ಪಾರ್ಕಿಂಗ್‌ ಸ್ಥಳ, ಹಳೆ ಬಾಜಿ ಮಾರ್ಕೆಟ್‌ ಪಾರ್ಕಿಂಗ್ ಸ್ಥಳ, ನ್ಯಾಯ ಮಾರ್ಗದಿಂದ ಧರ್ಮನಾಥ ಭವನದವರೆಗೆ, ಪಟ್ಟೇದ ಆಸ್ಪತ್ರೆ ಕ್ರಾಸ್‌ದಿಂದ ಗ್ಯಾಂಗವಾಡಿ ಸರ್ಕಲ್‌ವರೆಗೆ, ಸಿಪಿಎಡ್‌ ಮೈದಾನ, ಕ್ಲಬ್‌ ರೋಡ, ಮಹಾವೀರ ಕ್ಯಾಂಟೀನ್‌ದಿಂದ ಮಹಾತ್ಮಗಾಂಧಿ ಸರ್ಕಲ್‌ವರೆಗೆ ದ್ವಿಚಕ್ರ ವಾಹನಗಳ ಪಾರ್ಕಿಂಗ್‌, ಯಂಡೆಕೂಟದಿಂದ ಇಸ್ಲಾಮಿಯಾ ಸ್ಕೂಲ್‌ ರಸ್ತೆ ಪೋಸ್ಟಮನ್‌ ವೃತ್ತದವರೆಗೆ, ಆಸದ್‌ ಖಾನ್‌ ದರ್ಗಾ ಹತ್ತಿರದ ತೆರೆದ ಸ್ಥಳ, ಗ್ಲೋಬ್‌ ಸರ್ಕಲ್‌ ಹತ್ತಿರ,ಕ್ಯಾಂಪ್‌, ಬೆನನ್‌ಸ್ಮಿತ್‌ ಕಾಲೇಜು ಮೈದಾನ, ಕಾಲೇಜು ರಸ್ತೆ, ಮರಾಠ ವಿದ್ಯಾನಿಕೇತನ ಶಾಲೆಯ ಮೈದಾನ, ಮಹಿಳಾ ಪೊಲೀಸ್‌ ಠಾಣೆ ಹಿಂಭಾಗದ ವಸತಿ ಗೃಹ ಮೈದಾನಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.