ಮಾಹೆಯಲ್ಲಿ 17ನೇ ಜಾಗತಿಕ ಆರೋಗ್ಯ ರಕ್ಷಣಾ ಶೃಂಗಸಭೆಗೆ ಚಾಲನೆ

| Published : Jan 06 2024, 02:00 AM IST

ಮಾಹೆಯಲ್ಲಿ 17ನೇ ಜಾಗತಿಕ ಆರೋಗ್ಯ ರಕ್ಷಣಾ ಶೃಂಗಸಭೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

17ನೇ ಜಾಗತಿಕ ಆರೋಗ್ಯ ರಕ್ಷಣಾ ಶೃಂಗಸಭೆಯನ್ನು ಶುಕ್ರವಾರ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಆಯೋಗದ ಉಪಾಧ್ಯಕ್ಷೆ ಡಾ. ಆರತಿಕೃಷ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಅಮೆರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಒರಿಜಿನ್ಸ್ (ಎಎಪಿಐ) ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹಯೋಗದಲ್ಲಿ 17ನೇ ಜಾಗತಿಕ ಆರೋಗ್ಯ ರಕ್ಷಣಾ ಶೃಂಗಸಭೆ (ಜಿಎಚ್ಎಸ್)ಯನ್ನು ಶುಕ್ರವಾರ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಆಯೋಗದ ಉಪಾಧ್ಯಕ್ಷೆ ಡಾ. ಆರತಿಕೃಷ್ಣ ಉದ್ಘಾಟಿಸಿದರು.

ಕರ್ನಾಟಕ ಸರ್ಕಾರವು ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯನ್ನು ಬೆಂಬಲಿಸುವುದಕ್ಕೆ ಬದ್ಧವಾಗಿದೆ ಎಂದವರು ಹೇಳಿದರು.

ಜಿಎಚ್ಎಸ್ ಅಮೆರಿಕ ಅಧ್ಯಕ್ಷ ಡಾ.ಸಂಪತ್ ಶಿವಂಗಿ, ಎಂಇಎಂಜಿ ಅಧ್ಯಕ್ಷ ಡಾ.ರಂಜನ್ ಪೈ, ಎಎಪಿಐ ಅಧ್ಯಕ್ಷೆ ಡಾ.ಅಂಜನಾ ಸಮ್ದರ್, ಮಾಹೆ ಸಹಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಜಿಎಚ್ಎಸ್ ಭಾರತ ಅಧ್ಯಕ್ಷ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಉಪಸ್ಥಿತರಿದ್ದರು.

ಇದೇ ಸಂದರ್ಭ ವೈದ್ಯಕೀಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಗಾಗಿ ಮಾಹೆಯ ಕುಲಪತಿ ಡಾ.ರಾಮದಾಸ್ ಪೈ ಅವರಿಗೆ ಎಎಪಿಐಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಮಾಹೆ ಟ್ರಸ್ಟ್ ಅಧ್ಯಕ್ಷೆ ವಾಸಂತಿ ಆರ್. ಪೈ ಸ್ವೀಕರಿಸಿದರು.

ಇಂದು ಸಭೆ ಮುಕ್ತಾಯ- ಎರಡು ದಿನಗಳ ಈ ಶೃಂಗಸಭೆ ಶನಿವಾರ ಮುಕ್ತಾಯವಾಗಲಿದೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ರಕ್ಷಣಾ ಕ್ಷೇತ್ರದ ವೃತ್ತಿಪರರು ಮತ್ತು ತಜ್ಞರನ್ನು ಒಂದುಗೂಡಿಸುವುದು, ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವವನ್ನು ಗುರುತಿಸುವುದು, ವೈದ್ಯಕೀಯ ಕ್ಷೇತ್ರದ ನವೀನ ತಂತ್ರಜ್ಞಾನಗಳನ್ನು ಪರಿಚಯಿಸುವುದು, ಆರೋಗ್ಯ ಕ್ಷೇತ್ರದ ಸಾಧ್ಯತೆಗಳನ್ನು ಚರ್ಚಿಸುವುದು, ಕೃತಕ ಬುದ್ದಿಮತ್ತೆಯ ಬಗ್ಗೆ ಗಮನ ಕೇಂದ್ರೀಕರಿಸುವುದು ಈ ಶೃಂಗಸಭೆ ಮುಖ್ಯ ಉದ್ದೇಶವಾಗಿದೆ.