ಸಾರಾಂಶ
ಬೆಂಗಳೂರು : ರಸ್ತೆ ದಾಟುವಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ವೃದ್ಧೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಆದಿ ಲಕ್ಷ್ಮಮ್ಮ(69) ಮೃತ ದುರ್ದೈವಿ. ಅಪಘಾತ ಸಂಬಂಧ ಬಿಬಿಎಂಪಿ ಕಸದ ಲಾರಿ ಚಾಲಕ ಮೊಹಮ್ಮದ್ ಎಂಬಾತನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಮೃತ ಆದಿಲಕ್ಷ್ಮಮ್ಮ ಕೆಲ ದಿನಗಳಿಂದೆ ನಗರದ ಜಂಬೂಸವಾರಿ ದಿಣ್ಣೆಯಲ್ಲಿರುವ ಮಗಳ ಮನೆಗೆ ಬಂದಿದ್ದರು. ಚಿತ್ತೂರಿನಲ್ಲಿ ಸಂಬಂಧಿಕರು ಮೃತಪಟ್ಟಿದ್ದ ಹಿನ್ನೆಲೆ ತಾಯಿ ಮತ್ತು ಮಗಳು ಚಿತ್ತೂರಿಗೆ ತೆರಳಲು ಸೋಮವಾರ ಬೆಳಗ್ಗೆ 6 ಗಂಟೆಗೆ ಜಂಬೂಸವಾರಿ ದಿಣ್ಣೆ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಈ ವೇಳೆ ಬಸ್ ಬಂದ ತಕ್ಷಣ ಮಗಳು ಓಡಿ ಹೋಗಿ ಬಸ್ ಹತ್ತಿದ್ದಾರೆ. ಆದಿಲಕ್ಷ್ಮಮ್ಮ ಬಸ್ ಹತ್ತಲು ರಸ್ತೆ ದಾಟುವಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಆದಿಲಕ್ಷ್ಮಮ್ಮ ಅವರ ದೇಹದ ಮೇಲೆಯೇ ಕಸದ ಲಾರಿಯ ಚಕ್ರಗಳು ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.