ಸಾರಿಗೆ ನಿಯಂತ್ರಕರಿಗೂ ಕಾಡಿದ ಮೂತ್ರಾಲಯ ಸಮಸ್ಯೆ

| Published : Aug 24 2024, 01:23 AM IST

ಸಾರಾಂಶ

ರಬಕವಿ-ಬನಹಟ್ಟಿ ಅವಳಿ ನಗರಗಳಿಗೆ ತಲಾ ₹೧.೫ಕೋಟಿ ಮೊತ್ತದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರತ್ಯೇಕ ಬಸ್ ನಿಲ್ದಾಣಗಳಲ್ಲಿ ಮೂತ್ರಾಲಯ ಇಲ್ಲದೇ ಇರುವ ಕಾರಣಕ್ಕೆ ಎಷ್ಟು ತೊಂದರೆ ಆಗುತ್ತಿದೆ ಅಂದರೆ, ರಬಕವಿಯ ಸಾರಿಗೆ ನಿಯಂತ್ರಕರೇ ತಮ್ಮ ಜಲಬಾಧೆ ತೀರಿಸಿಕೊಳ್ಳಲು ಬಸ್ ನಿಲ್ದಾಣದ ಗೋಡೆಯನ್ನೇ ಆಶ್ರಯಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಬನಹಟ್ಟಿ ಅವಳಿ ನಗರಗಳಿಗೆ ತಲಾ ₹೧.೫ಕೋಟಿ ಮೊತ್ತದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರತ್ಯೇಕ ಬಸ್ ನಿಲ್ದಾಣಗಳಲ್ಲಿ ಮೂತ್ರಾಲಯ ಇಲ್ಲದೇ ಇರುವ ಕಾರಣಕ್ಕೆ ಎಷ್ಟು ತೊಂದರೆ ಆಗುತ್ತಿದೆ ಅಂದರೆ, ರಬಕವಿಯ ಸಾರಿಗೆ ನಿಯಂತ್ರಕರೇ ತಮ್ಮ ಜಲಬಾಧೆ ತೀರಿಸಿಕೊಳ್ಳಲು ಬಸ್ ನಿಲ್ದಾಣದ ಗೋಡೆಯನ್ನೇ ಆಶ್ರಯಿಸುವಂತಾಗಿದೆ.

ಶೌಚಾಲಯ ಸಾರ್ವಜನಿಕರ ಬಳಕೆಗೆ ಏಕೆ ಮುಕ್ತಗೊಂಡಿಲ್ಲ ಎಂದು ಪ್ರಶ್ನಿಸಿದಾಗ ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶದಡಿ ಟೆಂಡರ್‌ದಾರನು ಇನ್ನೂ ಚಾಲನೆ ಕೊಟ್ಟಿಲ್ಲವಾದ್ದರಿಂದ ಸಮಸ್ಯೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಸ್ಥಿತರಿದ ಸ್ಥಳೀಯ ಪ್ರಯಾಣಿಕರು ಮಳೆನೀರಿನ ಆಸರೆಗಾಗಿ ಒಳಬದಿ ನಿಂತಿದ್ದ ಪ್ರಯಾಣಿಕರನ್ನು ಹೊರಗೆ ಓಡಿಸಿದ ನಿಯಂತ್ರಕರ ಅಮಾನವೀಯ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು.ಆ.೧೭ರ ಶನಿವಾರ ಜಮಖಂಡಿ ಡಿಪೋ ವ್ಯವಸ್ಥಾಪಕರು ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಅವರ ಆದೇಶ ಪಡೆದು ಸೋಮವಾರ ಖುದ್ದು ಬಂದು ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಅವರಿಗೆ ಇದುವರೆಗೆ ಸೋಮವಾರವೇ ಬಂದಿಲ್ಲವೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಮಾನವೀಯತೆಯುಳ್ಳ ಯಾರಾದರೂ ಅಧಿಕಾರಿಗಳು ಇದ್ದಲ್ಲಿ ಪುರುಷ ಪ್ರಯಾಣಿಕರೆನೋ ಎಲ್ಲೆಂದರಲ್ಲಿ ಜಲಬಾಧೆ ತೀರಿಸಿಕೊಳ್ಳಬಹುದು. ಆದರೆ ಮಹಿಳಾ ಪ್ರಯಾಣಿಕರು ಎಲ್ಲಿಗೆ ಹೋಗಬೇಕು? ವೃದ್ಧರು, ವಿದ್ಯಾರ್ಥಿನಿಯರ ಪಾಡೇನು ಎಂಬ ಬಗ್ಗೆ ಕನಿಷ್ಠ ಪರಾಮರ್ಶಿಸಿ ತಮ್ಮ ಕುಟುಂಬದ ಮಹಿಳೆಯರ ಮತ್ತು ಮಹಿಳಾ ಪ್ರಯಾಣಿಕರ ಮಾನ ಒಂದೇ ಎಂಬುದನ್ನರಿತು ಟೆಂಡರ್ ಹಿಡಿದ ವ್ಯಕ್ತಿಗೆ ತಕ್ಷಣ ಶೌಚಾಲಯ ನಿರ್ವಹಣೆಗೆ ಖಡಕ್ ಆದೇಶ ನೀಡಬೇಕು ಮತ್ತು ಸಾರಿಗೆ ನಿಯಂತ್ರಕರು ತಾವು ಪ್ರಯಾಣಿಕರ ಸೇವಕರೆಂಬ ಕನಿಷ್ಠ ಪ್ರಜ್ಞೆ ಬೆಳೆಸಿಕೊಳ್ಳಬೇಕೆಂಬುದು ಇಲ್ಲಿನ ಜನತೆಯ ಆಗ್ರಹವಾಗಿದೆ.