ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ಒಕ್ಕೂಟದವರೆಲ್ಲರೂ ಏಕಕಾಲಕ್ಕೆ ಹೋರಾಟದ ರಣಕಹಳೆ ಮೊಳಗಿಸಿರುವುದರಿಂದ ಶುಕ್ರವಾರದಿಂದ ಗ್ರಾಮಾಡಳಿತ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ.
ಗ್ರಾಮ ಆಡಳಿತಾಧಿಕಾರಿಗಳಿಗೆ ಯಾವುದೇ ರೀತಿಯ ಸೌಲಭ್ಯಗಳನ್ನೇ ಕೊಡದೆ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕುತ್ತಿರುವುದನ್ನು ವಿರೋಧಿಸಿ ಗ್ರಾಮ ಆಡಳಿತಾಧಿಕಾರಿಗಳು ಸೆ.೨೬ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಶುಕ್ರವಾರ (ಅ.೪) ದಿಂದ ತಮ್ಮದೇ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಎಲ್ಲರೂ ಏಕಕಾಲಕ್ಕೆ ಹೋರಾಟಕ್ಕಿಳಿಯಲಿದ್ದಾರೆ. ಇದರೊಂದಿಗೆ ತಾಲೂಕು ಕಚೇರಿ ಹಾಗೂ ಪಂಚಾಯ್ತಿಗಳಲ್ಲಿ ಕೆಲಸ ಮಾಡುವುದಕ್ಕೆ ಯಾರೂ ಇಲ್ಲದಂತಾಗುವುದರಿಂದ ನಿತ್ಯದ ಕಚೇರಿ ಕೆಲಸ ಕಾರ್ಯಗಳೆಲ್ಲವೂ ಸ್ಥಗಿತಗೊಳ್ಳಲಿವೆ.ತಾಲೂಕು ಕಚೇರಿ, ಗ್ರಾಮ ಪಂಚಾಯ್ತಿಗಳು, ನಾಡಕಚೇರಿಗಳೆಲ್ಲವೂ ಸಾರ್ವಜನಿಕ ಕೆಲಸಗಳಿಗೆ ಸಂಪರ್ಕ ಕೊಂಡಿಯಂತಿದ್ದು, ಜಮೀನುಗಳ ಖಾತೆ, ಖಾತೆ ಬದಲಾವಣೆ, ಸರ್ವೆ ನಂಬರ್ ಒಗ್ಗೂಡಿಸುವಿಕೆ, ಜಮೀನುಗಳ ಸರ್ವೆ, ದುರಸ್ತು, ತತ್ಕಾಲ್ ಪೋಡಿ, ಅಗತ್ಯ ದಾಖಲೆಗಳನ್ನು ಪಡೆಯವುದು ಸೇರಿದಂತೆ ಬಹುತೇಕ ಕೆಲಸಗಳು ಇವುಗಳ ಮೂಲಕವೇ ನಡೆಯಬೇಕಿದೆ. ಜೊತೆಗೆ ಇವೆಲ್ಲಾ ಕೆಲಸಕ್ಕೂ ಆನ್‌ಲೈನ್ ಮೂಲಕವೇ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಿರುವುದರಿಂದ ಆ ಎಲ್ಲಾ ಸೇವೆಗಳು ಸ್ತಬ್ಧವಾಗಲಿವೆ. ಅಲ್ಲದೇ, ಈಗಾಗಲೇ ವಿವಿಧ ಕೆಲಸಗಳಿಗಾಗಿ ಆನ್‌ಲೈನ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವವರು ಕೂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘದವರ ಹೋರಾಟ ಮುಗಿಯುವವರೆಗೆ ಕಾದು ಕೂರುವುದು ಅನಿವಾರ್ಯವಾಗಲಿದೆ. ಏಕೆಂದರೆ, ಪಂಚಾಯ್ತಿ ಮಟ್ಟದಲ್ಲಿ ಯಾರೊಬ್ಬರೂ ಕೈಗೆ ಸಿಗದಿರುವುದರಿಂದ ಮೂಲ ಸೌಕರ್ಯಗಳನ್ನು ಹೊರತುಪಡಿಸಿದಂತೆ ಗ್ರಾಪಂ ಕಚೇರಿ ಮಟ್ಟದ ಕಾರ್ಯಚಟುವಟಿಕೆಗಳೆಲ್ಲವೂ ಸಂಪೂರ್ಣ ಬಂದ್ ಆಗಿರಲಿದೆ.
ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರದ ಹಾದಿ ಹಿಡಿದು ೧೧ ದಿನಗಳಾಗಿವೆ. ಇದುವರೆಗೂ ಸಂಬಂಧಿಸಿದ ಇಲಾಖೆ ಮಂತ್ರಿಗಳು ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿಲ್ಲ. ಶುಕ್ರವಾರದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘ, ಗ್ರಾಪಂ ಸದಸ್ಯರ ಒಕ್ಕೂಟದವರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದರೂ ಸರ್ಕಾರ ಅದನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಹೀಗಾಗಿ ಶುಕ್ರವಾರದಿಂದ ತಾಲೂಕು ಕಚೇರಿ ಸೇರಿದಂತೆ ಪಂಚಾಯ್ತಿ ಮಟ್ಟದ ಕಚೇರಿಗಳಲ್ಲಿ ಕೆಲಸಗಳೆಲ್ಲವೂ ಖಾಲಿ ಹೊಡೆಯುವ ಸಾಧ್ಯತೆಗಳಿವೆ.ಅಪ-ಅಮ್ಮನ ಜಗಳದಲ್ಲಿ ಕೂಸು ಬಡವಾದಂತೆ ರಾಜ್ಯ ಸರ್ಕಾರ, ಗ್ರಾಮ ಮಟ್ಟದ ಅಧಿಕಾರಿಗಳು-ಸಿಬ್ಬಂದಿ, ಪಂಚಾಯ್ತಿ ಪ್ರತಿನಿಧಿಗಳ ನಡುವಿನ ತಿಕ್ಕಾಟಕ್ಕೆ ಸಾರ್ವಜನಿಕರು ಬಲಿಪಶುಗಳಾಗುತ್ತಿದ್ದಾರೆ. ಸರ್ಕಾರ ಕೂಡ ಪ್ರತಿಭಟನಾಕಾರರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವ, ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಎಲ್ಲರನ್ನೂ ಸಮಾಧಾನಪಡಿಸಿ ಗ್ರಾಮ ಮಟ್ಟದಲ್ಲಿ ನಡೆಯಬೇಕಾದ ಸಾರ್ವಜನಿಕ ಕೆಲಸಗಳು ಸುಗಮವಾಗಿ, ಸುಸೂತ್ರವಾಗಿ ನಡೆಯುವುದಕ್ಕೆ ಅವಕಾಶ ಕಲ್ಪಿಸಿಕೊಡುವುದಕ್ಕೆ ಮನಸ್ಸು ಮಾಡದಿರುವುದು ಜನರನ್ನು ಇಕ್ಕಟ್ಟು ಮತ್ತು ಸಂಕಷ್ಟಗಳಿಗೆ ಸಿಲುಕುವಂತೆ ಮಾಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘದವರು ಬೇಡಿಕೆಗಳನ್ನು ಮುಂದಿಟ್ಟು ಏಕ ಕಾಲಕ್ಕೆ ಹೋರಾಟಕ್ಕಿಳಿದಿರುವುದರಿಂದ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ತೀವ್ರ ಅಡಚಣೆಗಳಾಗಲಿವೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕೂ ಸರ್ಕಾರ ಮನಸ್ಸು ಮಾಡಿದಂತೆ ಕಂಡುಬರುತ್ತಿಲ್ಲದ ಕಾರಣ ಜನರು ತಾಲೂಕು ಕಚೇರಿ ಮತ್ತು ಪಂಚಾಯ್ತಿ ಮಟ್ಟದ ಕೆಲಸ-ಕಾರ್ಯಗಳಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.ಯಾರ್ಯಾರದು ಏನೇನು ಬೇಡಿಕೆಗಳು?ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು
ಪಿಡಿಒಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್-ಬಿ ದರ್ಜೆಗೆ ಸೇರಿಸುವುದು. ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವವರ ವರ್ಗಾವಣೆ ಮಾಡುವುದನ್ನು ಕೈಇಡುವುದು. ಎಂಜಿಎನ್‌ಆರ್‌ಇಜಿಎ ಯೋಜನೆ ಅನುಷ್ಠಾನಕ್ಕೆ ಗುರಿ ನಿಗದಿಪಡಿಸಬಾರದು. ಇತರೆ ಬೇಡಿಕೆಗಳು.ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವೃಂದ
ಗ್ರೇಡ್-೨ ಗ್ರಾಪಂಗಳಿಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ಸೃಜಿಸಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರನ್ನು ಗ್ರೇಡ್-೧ ಗ್ರಾಪಂಗಳಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕರನ್ನಾಗಿ ಮುಂಬಡ್ತಿ ನೀಡಿಕೆ. ಜಿಪಂ, ತಾಪಂಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಬಡ್ತಿಗೆ ಪರಿಗಣಿಸುವುದು. ಇತರೆ.ಕ್ಲರ್ಕ್, ಕರವಸೂಲಿಗಾರ, ನೀರಗಂಟಿ, ಜವಾನರು, ಸ್ವಚ್ಛತಾಗಾರರು
ಇವರೆಲ್ಲರಿಗೂ ಪದೋನ್ನತಿ ಸಿಗದೆ ಕೊನೆಯ ಐದು ವರ್ಷಗಳ ನಿವೃತ್ತ ಹಂತದಲ್ಲಿ ಗ್ರೇಡ್-೨ ಕಾರ್ಯದರ್ಶಿ ಸಮ ಆನಾಂತರ ವೇತನ ಶ್ರೇಣಿ ನಿಗದಿ, ಕಾರ್ಯದರ್ಶಿ ಗ್ರೇಡ್-೧ ಕೋಟ ಶೇ.೭೦ರಷ್ಟು ಹೆಚ್ಚಳ ಮಾಡುವುದು. ಇಎಸ್‌ಐ-ಪಿಎಫ್ ಜಾರಿ, ಗ್ರಾಪಂಗಳಿಗೆ ದ್ವಿತೀಯ ದರ್ಜೆ ಲೆಕ್ಕಸಹಾಯಕರ ಹುದ್ದೆಗಳ ಮಂಜೂರು. ಎಲ್ಲಾ ಸಿಬ್ಬಂದಿಗೆ ವೇತನಶ್ರೇಣಿ ಜಾರಿ. ಇತರೆ.ಕಾರ್ಯದರ್ಶಿ ವೃಂದ
ಕಾರ್ಯದರ್ಶಿ ಗ್ರೇಡ್-೧ ವೃಂದದಿಂದ ಪಿಡಿಓ ವೃಂದಕ್ಕೆ ಮುಂಬಡ್ತಿ ನೀಡುವುದು. ಆಯುಕ್ತರಿಗೆ ಸರ್ಕಾದ ನಿರ್ದೇಶನವಿದ್ದರೂ ಮುಂಬಡ್ತಿ ನೀಡದೆ ನಿರಾಸಕ್ತಿ ತೋರಿರುವುದು. ಮುಂಬಡ್ತಿ ಅನುಪಾತವನ್ನು ಶೇ.೩೫ ರಿಂದ ೬೦ಕ್ಕೆ ಹೆಚ್ಚಿಸುವುದು. ೭ ವರ್ಷ ಒಂದೇ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ವರ್ಗಾವಣೆ ಮಾಡುವ ಅಧಿಸೂಚನೆ ಹಿಂಪಡೆಯುವುದು.ಗ್ರೇಡ್-೨ ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್-೧ ಕಾರ್ಯದರ್ಶಿ ಹುದ್ದೆಗೆ ನೇರ ನೇಮಕಾತಿ ಕೋಟಾದಡಿ ಒಂದೇ ಬಾರಿಗೆ ಬಡ್ತಿ ನೀಡುವುದು. ಮು೭ಂಬಡ್ತಿ ಅನುಪಾತವನ್ನು ಶೇ.೩೫ ರಿಂದ ಶೇ.೮೦ಕ್ಕೆ ಏರಿಸುವುದು. ಬಿಲ್ ಕಲೆಕ್ಟರ್ ಹುದ್ದೆಯಿಂದ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಿದವರಿಗೆ ಪಿಂಚಣಿ ಯೋಜನೆ ಜಾರಿ. ಇತರೆ.
ಪತ್ರಾಂಕಿತ ಅಧಿಕಾರಿಗಳುನೇರ ನೇಮಕಾತಿ ನಿಯಮಗಳಡಿ ಇಲಾಖೆಯ ಅನೇಕ ವೃಂದಗಳಿಗೆ ನಿಯೋಜಿಸಿರುವುದನ್ನು ರದ್ದುಪಡಿಸುವುದು. ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ, ಕಿರಿಯ ಅಧಿಕಾರಿಗಳಿಗೆ ಸ್ವತಂತ್ರ ಪ್ರಭಾರದಲ್ಲಿರಿಸುವುದು. ಪರಿಷತ್ ಕಾರ್ಯದರ್ಶಿ ಹುದ್ದೆಯನ್ನು ಉಪ ಕಾರ್ಯದರ್ಶಿ (ಹಿ.ಶ್ರೇ) ವೃಂದಕ್ಕೆ ಮೇಲ್ದರ್ಜೆಗೇರಿಸಿ ಪುನಃ ಆರಂಭಿಸುವುದು. ಇತರೆ ಬೇಡಿಕೆಗಳು.
ಗ್ರಾಪಂ ಸದಸ್ಯರ ಒಕ್ಕೂಟಗ್ರಾಪಂಗಳು ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಜವಾಬ್ದಾರಿ ನಕ್ಷೆ ರಚಿಸಬೇಕು. ಅದಕ್ಕೆ ಅನುಗುಣವಾಗಿ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ, ಜವಾಬ್ದಾರಿ ನಿರ್ವಹಿಸುವ ಪಂಚಾಯಿತಿಗಳಿಗೆ ವರ್ಗಾಯಿಸಸಬೇಕು. ನೇಮಕ ಹಾಗೂ ವರ್ಗಾವಣೆಯಾಗಿ ಬಂದಿರುವ ಅಧಿಕಾರಿಗಳು ಪಂಚಾಯಿತಿಗಳಿಗೆ ಉತ್ತರದಾಯಿತ್ವ ಹೊಂದಿರದ ಹಾಗೆ ಕ್ರಮ ವಹಿಸುವುದು.