ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ಗ್ರಾಮದೇವತೆಯರ ಹೊನ್ನಾಟ ಕಾರ್ಯಕ್ರಮವು ಮಂಗಳವಾರ ರಾತ್ರಿ 11 ಗಂಟೆಗೆ ಪ್ರಾರಂಭಗೊಂಡು ಬುಧವಾರ ಬೆಳಗ್ಗೆ 8 ಗಂಟೆಯವರೆಗೂ ಜರುಗಿತು. ಅಂಬಿಗೇರ ಗಲ್ಲಿಯಿಂದ ಪ್ರಾರಂಭಗೊಂಡು ಉಭಯ ದೇವಿಯರು ಹೊನ್ನಾಟ ಆಡುತ್ತ ಕಿಲ್ಲಾ, ಬನಶಂಕರಿ ಗುಡಿಯ ಸಮೀಪ ಇರುವ ನಿಪ್ಪಾಣಿ, ದೇಶಪಾಂಡೆ, ಚವ್ಹಾಣ, ಮಾಲದಿನ್ನಿ, ಈಗವೆ, ಬಾಣಕರಿ, ವಾಳವಿ ಅವರ ಮನೆಗಳಲ್ಲಿ ಉಡಿ ತುಂಬಿಸಿಕೊಂಡು ಸೋಮವಾರ ಪೇಠೆಯ ಹಿಡಕಲ್ ರಾವಸಾಬ್ ಮನೆಯ ಅಂಗಳದಲ್ಲಿ ಆಸೀನರಾದರು.10 ವರ್ಷಗಳ ನಂತರ ನಡೆಯುತ್ತಿರುವ ವಿಶೇಷ ಜಾತ್ರೆಯ ಸವಿಗಳಿಗೆಯಲ್ಲಿ ಅಬಾಲವೃದ್ಧರಾಗಿ ಎಲ್ಲರೂ ಮಿಂದೇಳುತ್ತಿದ್ದಾರೆ. ಅಲ್ಲದೇ ಗೋಕಾಕ ನಗರ ಸಂಪೂರ್ಣ ಸಿಂಗಾರಗೊಂಡಿದ್ದು, ಬೀಗರು, ಸಂಬಂಧಿಕರು, ಉದ್ಯೋಗ ಆರಿಸಿ ಹೋದವರು, ಮಿತ್ರರು ಪರಿಚಯಿಸ್ಥರು, ಎಲ್ಲರೂ ಮತ್ತೆ ಊರ ಕಡೆಗೆ ಮುಖ ಮಾಡಿದ್ದು ಪರಸ್ಪರ ಕುಶಲೋಪರಿ ಹಂಚಿಕೊಳ್ಳುತ್ತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ. ರಾತ್ರಿ 12 ಗಂಟೆಗೆ ಪ್ರಾರಂಭವಾದ ದೇವಿಯರ ಹೊನ್ನಾಟದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನತೆ ಭಾಗವಹಿಸಿತ್ತು. ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಗಮನ ಸೆಳೆದರು. ದೇವಿ ಹೊನ್ನಾಟವಾಡುತ್ತ ನಗರದ 50ಕ್ಕೂ ಹೆಚ್ಚು ಮನೆ ಮನೆಯಲ್ಲಿ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಅದ್ಧೂರಿಯಿಂದ ನಡೆಯುತ್ತಿರುವ ದೃಶ್ಯವನ್ನು ಜನ ಕಣ್ಣತುಂಬಿಕೊಂಡರು.ಜಾತ್ರೆ ಆರಂಭವಾಗಿ 3 ದಿನಗಳು ಕಳೆದರೂ ಸಡಗರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಕ್ತರ ದಂಡು ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ದೇವಿಗೆ ಉಡಿ ತುಂಬಿ ಹರಕೆ ಹರಿಸುವಂತೆ ಬೇಡುತ್ತಿದ್ದಾರೆ. ಬೆಳಗ್ಗೆಯಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಿಯರ ದರ್ಶನಕ್ಕೆ ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಹೊನ್ನಾಟ ಹಿನ್ನೆಲೆ:
ಗೋಕಾಕ ಜಾತ್ರೆಯ ಸಂದರ್ಭದಲ್ಲಿ ಗ್ರಾಮದೇವಿಯ ಹೊನ್ನಾಟ ವಿಶೇಷತೆಯನ್ನು ಪಡೆದುಕೊಂಡಿರುತ್ತದೆ. ಈ ಹೊನ್ನಾಟಕ್ಕೂ ಒಂದು ಹಿನ್ನೆಲೆಯಿದೆ. ತವರು ಮನೆ ಸೇರಿದ ದ್ಯಾಮವ್ವಳನ್ನು ಕರೆಯಲು ರಾಣಿಗ ಹೋದಾಗ ಆತ ಎಷ್ಟೇ ಕರೆದರೂ ದ್ಯಾಮವ್ವ ಆತನ ಜೊತೆಗೆ ಹೋಗಲು ಒಪ್ಪಿಕೊಳ್ಳುವುದಿಲ್ಲ. ಇದರಿಂದಾಗಿ ಕೋಪಗೊಳ್ಳುವ ಆತ ಆಕೆಯ ಮೇಲೆ ಕೆಲವು ಅವಗುಣಗಳನ್ನು ಹೊರಿಸಿ ನಿಂದಿಸಲಾರಂಭಿಸುತ್ತಾನೆ. ಆಗ ಆತನಾಡುವ ಮಾತುಗಳನ್ನು ಕೇಳಿ ಕುಪಿತಳಾಗುವ ಶಾಂತಸ್ವರೂಪಿ ದ್ಯಾಮವ್ವ ಚಂಡಿ, ಚಾಮುಂಡಿ ಹಾಗೂ ದುರ್ಗೆಯ ರೂಪತಾಳಿ ರಾಣಿಗನನ್ನು ಬೆನ್ನಟ್ಟುತ್ತಾಳೆ. ಆಗ ಆಕೆಯಿಂದ ತಪ್ಪಿಸಿಕೊಳ್ಳಲು ರಾಣಿಗ ಹರಸಾಹಸ ಪಡುತ್ತಾನೆ. ಈ ರೀತಿ ದ್ಯಾಮವ್ವ ರಾಣಿಗನನ್ನು ಬೆನ್ನಟ್ಟುವುದೇ ಹೊನ್ನಾಟ ಎಂಬ ಪ್ರತೀತಿ ಇದೆ.