ಮಣ್ಣಿನಲ್ಲಿ ಸಿಕ್ಕಿಕೊಂಡ ವ್ಯಕ್ತಿಯ ಜೀವ ಉಳಿಸಿದ ಗ್ರಾಮಸ್ಥರು

| Published : Oct 06 2024, 01:17 AM IST

ಮಣ್ಣಿನಲ್ಲಿ ಸಿಕ್ಕಿಕೊಂಡ ವ್ಯಕ್ತಿಯ ಜೀವ ಉಳಿಸಿದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆ ಪರಿಣಾಮವಾಗಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಮನೆ ಕುಸಿತದಿಂದಾಗಿ ಮಣ್ಣಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿ ಅಪಾಯದಿಂದ ಪಾರು ಮಾಡಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಧಾರಾಕಾರ ಮಳೆ: ಡಣಾಪುರ ಗ್ರಾಮದಲ್ಲಿ ಮನೆ ಕುಸಿತ

ಕನ್ನಡಪ್ರಭ ವಾರ್ತೆ ಗಂಗಾವತಿ

ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆ ಪರಿಣಾಮವಾಗಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಮನೆ ಕುಸಿತದಿಂದಾಗಿ ಮಣ್ಣಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿ ಅಪಾಯದಿಂದ ಪಾರು ಮಾಡಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಡಣಾಪುರ ಗ್ರಾಮದ ಪ್ರಕಾಶ ವೆಂಕೋಬಯ್ಯ ಶ್ರೇಷ್ಠಿ ಎನ್ನುವ ವ್ಯಕ್ತಿ ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದರು. ಇದರ ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಮಣ್ಣನ್ನು ತೆಗೆದು ರಕ್ಷಣೆ ಮಾಡಿದ್ದಾರೆ.

ಸುಮಾರು 1 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಜೀವ ಉಳಿಸಿದ್ದಾರೆ. ಪ್ರಕಾಶ ಬೆನ್ನಿಗೆ ಮತ್ತು ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆಯಲ್ಲಿ ಪ್ರಕಾಶ ಮತ್ತು ಪತ್ನಿ ಇಬ್ಬರು ವಾಸವಾಗಿದ್ದು, ಪತ್ನಿ ಹೊರಗಡೆ ಹೋಗಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ತಾಲೂಕಿನ ಹಣವಾಳ ಗ್ರಾಮದಲ್ಲಿ ಒಂದು ಮನೆ ಕುಸಿದಿದ್ದು, ಯಾವುದೇ ರೀತಿಯ ನಷ್ಟವಾಗಿಲ್ಲ.

ಸ್ಥಳಕ್ಕೆ ತಹಸೀಲ್ದಾರ ಭೇಟಿ:ಆಸ್ಪತ್ರೆಗೆ ತಹಸೀಲ್ದಾರ ನಾಗರಾಜ್ ಭೇಟಿ ನೀಡಿ ರಕ್ಷಣೆಯಾದ ವ್ಯಕ್ತಿಯ ಆರೋಗ್ಯ ವಿಚಾರಿಸಿದರು. ಅಲ್ಲದೇ ಡಣಾಪುರ ಗ್ರಾಮಕ್ಕು ತೆರಳಿ ಪರಿಶೀಲನೆ ನಡೆಸಿದರು. ಗಾಯಗೊಂಡ ವ್ಯಕ್ತಿಗೆ ತ್ವರಿತವಾಗಿ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವುದಾಗಿ ತಹಸೀಲ್ದಾರ ತಿಳಿಸಿದ್ದಾರೆ.

ಮಳೆ ಗಾಳಿಗೆ ಅಪಾರ ಬೆಳೆ ಹಾನಿ-ಲಕ್ಷಾಂತರ ನಷ್ಟ:

ಶುಕ್ರವಾರ ಸಂಜೆ ಸುರಿದ ಭಾರಿ ಮಳೆ ಗಾಳಿಗೆ ಮೆಣಸಿನಕಾಯಿ, ಹಾಗಲಕಾಯಿ ಹಾಗೂ ಟೋಮೆಟೋ ಬೆಳೆಗಳು ಹಾಗೂ ಬಿತ್ತನೆ ಮಾಡಲಾದ ಕಲ್ಲಂಗಡಿ ಬೀಜಗಳು ನೀರಿನಲ್ಲಿ ಹರಿದು ಹೋಗಿ ಅಪಾರ ನಷ್ಟವುಂಟಾಗಿದೆ.

ಕುಷ್ಟಗಿ ತಾಲೂಕಿನ ಬಚನಾಳ, ಮುಕರ್ತಿನಾಳ ಹಾಗೂ ಮೆಣೆದಾಳ ಭಾಗದಲ್ಲಿ ಸುರಿದ ಮಳೆಗೆ ಬೆಳೆಗಳು ನೆಲಕಚ್ಚಿದ ಪರಿಣಾಮ ಲಕ್ಷಾಂತರ ಮೌಲ್ಯದ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.ಸುಮಾರು ಐದು ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ರೈತರಾದ ಉಮೇಶ ಹಿರೇಮಠ, ಲೋಕಪ್ಪ ಸೋಮನಾಳ, ಹನುಮಪ್ಪ ಅವರಿಗೆ ಸೇರಿದ ಬೆಳೆಗಳಾಗಿದ್ದು, ಲಕ್ಷಾಂತರ ಮೌಲ್ಯದ ನಷ್ಟವುಂಟಾಗಿದ್ದು ಸರಕಾರ ಇವರ ನೆರವಿಗೆ ಧಾವಿಸಬೇಕು ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.ಸ್ಥಳಕ್ಕೆ ಅಧಿಕಾರಿಗಳ ಭೇಟಿ:ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾಳಾದ ಬೆಳೆಗಳನ್ನು ವೀಕ್ಷಣೆ ಮಾಡುವ ಮೂಲಕ ಪರಿಶೀಲಿಸಿದರು. ರೈತರಿಗೆ ಸಾಂತ್ವನ ಹೇ‍ಳಿದ ಅಧಿಕಾರಿಗಳು ಈ ಕುರಿತು ವರದಿಯನ್ನು ಸರಕಾರಕ್ಕೆ ಕಳುಹಿಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.