ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಕಾಡಾನೆಗಳ ಉಪಟಳಕ್ಕೆ ಬೇಸತ್ತಿರುವ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಕಚೇರಿಗೆ ತೆರಳಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ತಾಲೂಕಿನ ಗಡಿಗ್ರಾಮ ಚಿಕ್ಕ ಹುಣಸೆಪಾಳ್ಯ ಗ್ರಾಮದ ಶಿವಮಾದು ಎಂಬವರ ಮನೆ ಮುಂಭಾಗ ಬೆಳಗಿನ ಜಾವ 5ಗಂಟೆ ಸಮಯದಲ್ಲಿ ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ಮನೆಯ ಮುಂಭಾಗ ಇದ್ದ ತೆಂಗಿನ ಮರ ಮತ್ತು ಬಾಳೆ ಗಿಡಗಳನ್ನು ತಿಂದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟು ಮಾಡಿದೆ. ಅಲ್ಲದೇ ಕಳೆದ ಒಂದು ವಾರದಿಂದ ಚಿಕ್ಕ ಹುಣಸೆಪಾಳ್ಯ ಗ್ರಾಮದ ರೈತರ ಜಮೀನುಗಳಿಗೆ ಕಾಡಾನೆಗಳು ರಾತ್ರಿ ವೇಳೆ ನುಗ್ಗಿ ಆಲೂಗೆಡ್ಡೆ, ಬೆಳುಳ್ಳಿ, ಎಲೆಕೋಸು ಇನ್ನಿತರ ಫಸಲನ್ನು ತಿಂದು ನಾಶಗೊಳಿಸಿ ಜೊತೆಗೆ ಕೃಷಿ ಚಟುವಟಿಕೆ ಪರಿಕರಗಳನ್ನು ಸಹ ತುಳಿದು ಲಕ್ಷಾಂತರ ರುಪಾಯಿ ರೈತರಿಗೆ ಹಾನಿ ಮಾಡಿತ್ತು. ಈ ಹಿನ್ನಲೆ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದೀರಾ, ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಚಿಕ್ ಹುಣಸೆಪಾಳ್ಯ ಗ್ರಾಮದ ಶಿವಮಾದು ರೈತನ ಮನೆ ಮುಂಭಾಗ ಇದ್ದ ತೆಂಗಿನ ಮರಗಳು ಸೇರಿದಂತೆ ಬಾಳೆ ಗಿಡಗಳನ್ನು ತಿಂದು ಹಾಲು ಕರೆಯಲು ಬಂದ ಗ್ರಾಪಂ ಸದಸ್ಯ ಉಮಾಮಹೇಶ್ವರಿ ಕಾಡಾನೆಗಳನ್ನು ನೋಡಿ ಮನೆಯ ಮುಂಭಾಗ ಬೆಚ್ಚಿಬಿದ್ದಿದ್ದಾರೆ. ರೈತರ ಜಮೀನುಗಳ ಬೆಳೆ ಹಾಳು ಮಾಡುವುದರ ಜೊತೆಗೆ ಗ್ರಾಮಕ್ಕೆ ನುಗ್ಗಿ ಮನೆಗಳ ಮುಂಭಾಗ ಇರುವ ಗಿಡಮರಗಳನ್ನು ತಿಂದು ಗ್ರಾಮದಲ್ಲಿ ಆತಂಕ ಸೃಷ್ಟಿ ಮಾಡಿದೆ.ನಿರಂತರವಾಗಿ ಕಾಡಾನೆಗಳು ರಾತ್ರಿ ವೇಳೆ ಬಿಆರ್‌ಟಿ ವಲಯ ಅರಣ್ಯ ಪ್ರದೇಶದಿಂದ ಮಲೆ ಮಾದೇಶ್ವರ ವನ್ಯಧಾಮ ವ್ಯಾಪ್ತಿಗೆ ಬರುವ ರೈತರ ಜಮೀನುಗಳಿಗೆ ಬಂದು ಫಸಲು ತಿಂದು ಹಾಳು ಮಾಡುವುದರ ಜೊತೆಗೆ ಅರಣ್ಯದ ಗ್ರಾಮಗಳಾದ ಚಿಕ್ಕ ಹುಣಸೆಪಾಳ್ಯ, ಹಂಡೆ ಕುರುಬನ ದೊಡ್ಡಿ, ಮುನಿಗುಡಿ ದೊಡ್ಡಿ, ಕೆರೆದೊಡ್ಡಿ, ಸಂಬಪ್ಪನ ದೊಡ್ಡಿ, ಅಂಟು ಗೌಡನಪಾಳ್ಯ, ಬೈಲೂರು ಕರಿಯಪ್ಪನ ದೊಡ್ಡಿ, ಹೊಸಪಾಳ್ಯ ಒಡೆಯರ್ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಲ್ಲಿ ಕಾಡಾನೆಗಳು, ಹಂದಿಗಳು ಜಮೀನಿನಲ್ಲಿ ಬೆಳೆದಿರುವ ಮುಸುಕಿನ ಜೋಳ ಆಲೂಗೆಡ್ಡೆ, ಈರುಳ್ಳಿ, ಬೆಳುಳ್ಳಿ ಇತರೆ ಗಿಡಮರಗಳನ್ನು ತಿಂದು ನಾಶಗೊಳಿಸುತ್ತಿವೆ. ರೈತರು ಜಮೀನುಗಳಲ್ಲಿ ಜೀವ ಭಯದಲ್ಲೇ ಕಾವಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಬೈಲೂರು ವಲಯ ಬಿಆರ್‌ಟಿ ಅರಣ್ಯಾಧಿಕಾರಿ ಪ್ರಮೋದ್ ರೈತರು ಭೇಟಿ ನೀಡಿ ಮಾತನಾಡಿದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗುಂಡಿಮಾಳ ರಸ್ತೆಯಲ್ಲಿ ದಿನನಿತ್ಯ ಕಾಡಾನೆಗಳು ರಾತ್ರಿ ವೇಳೆ ರೈತರ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದೆ. ಹೀಗಾಗಿ ಗುಂಡಿ ಮಾಳೆ ರಸ್ತೆಯ ಗೇಟ್ ಅನ್ನು ರಾತ್ರಿ 6ರಿಂದ ಬೆಳಗ್ಗೆ 6ರವರಗೆ ಮುಚ್ಚಲಾಗುವುದು. ಬಿಆರ್‌ಟಿ ವಲಯ ಸಿಬ್ಬಂದಿ ಮತ್ತು ಮಲೆ ಮಹದೇಶ್ವರ ವನ್ಯಧಾಮ ಸಿಬ್ಬಂದಿ ಜಂಟಿಯಾಗಿ ಗಸ್ತು ನಡೆಸಿ ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.ಅರಣ್ಯಾಧಿಕಾರಿಗಳು ಕಾಡಾನೆಗಳ ಉಪಟಳ ತಪ್ಪಿಸುವಂತೆ ಡೀಸಿಗೆ ಬುಧವಾರ ಕಚೇರಿಯಲ್ಲಿ ರೈತ ಸಂಘಟನೆ ಜೊತೆ ತೆರಳಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಂತೆ ಮನವಿ ಸಲ್ಲಿಸಲಾಗಿದೆ. ದಂಡಾಧಿಕಾರಿಗಳಿಗೆ ಸೂಚನೆ ನೀಡಿರುವ ಅವರು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ರೈತರ ಜಮೀನಿಗೆ ಕಾಡುಪ್ರಾಣಿಗಳು ಬರದಂತೆ ಕ್ರಮವಹಿಸಲು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ. ಕೂಡಲೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘ-ಸಂಸ್ಥೆಗಳ ಜೊತೆಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಮುಖಂಡ ಸದಾನಂದ ಪತ್ರಿಕೆಗೆ ತಿಳಿಸಿದ್ದಾರೆ. ಇದೇ ವೇಳೆಯಲ್ಲಿ ರೈತರಾದ ಶಿವಮಾದಪ್ಪ, ರಘು ಪ್ರಸಾದ್, ಪ್ರಭು ರಾಚಪ್ಪ, ಸದಾನಂದ, ಶಂಕರ್, ಮಹೇಶ್, ಪ್ರಕಾಶ್, ಯೋಗೀಶ್, ರಮೇಶ್, ಮಲ್ಲಣ್ಣ, ರಾಜು,ರಾಜೇಂದ್ರ, ರವಿ ಇನ್ನಿತರ ರೈತ ಮುಖಂಡರು ಇದ್ದರು.