ದೂರದೃಷ್ಟಿ ಆಡಳಿತಗಾರ ನಾಡಪ್ರಭು ಕೆಂಪೇಗೌಡ

| Published : Jun 28 2024, 12:46 AM IST

ಸಾರಾಂಶ

ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ನಿರ್ಮಾಣಕ್ಕೆ ನಾಡಪ್ರಭು ಕೆಂಪೇಗೌಡ ಪಾತ್ರ ಬಹುಮುಖ್ಯವಾಗಿದೆ. ಅವರು ಮುಂದಿನ ನೂರು ವರ್ಷಗಳ ದೂರದೃಷ್ಟಿ ಹೊಂದಿದ್ದ ಆಡಳಿತಗಾರರಾಗಿದ್ದು ಅವರ ಆಡಳಿತ ವೈಖರಿ ಇಂದಿಗೂ ಮಾದರಿಯಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರನಾಡಪ್ರಭು ಕೆಂಪೇಗೌಡರು ಒಂದು ಜಾತಿ ಜನಾಂಗಕ್ಕೆ ಸೀಮಿತವಲ್ಲ, ಇಡೀ ದೇಶದ ಆಸ್ತಿಯಾಗಿದ್ದು ಅವರ ದೂರದೃಷ್ಟಿಯ ಪರಿಣಾಮವಾಗಿಯೇ ಬೆಂಗಳೂರು ಇವತ್ತು ಬೃಹತಾಕಾರದಲ್ಲಿ ಬೆಳೆದು ವಿಶ್ವ ಮಟ್ಟದಲ್ಲಿ ಸ್ಥಾನ ಪಡೆದು ಕಂಗೊಳಿಸುತ್ತಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.ನಗರದ ಸಾರಿಗೆ ಡಿಪೋನಲ್ಲಿ ಕೆ.ಎಸ್.ಆರ್.ಟಿ.ಸಿಯ ಕೆಂಪೇಗೌಡ ನೌಕರರ ಸಂಘದಿಂದ ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತ್ಸುವದಲ್ಲಿ ಅವರು ಮಾತನಾಡಿದರು.

ದೂರದೃಷ್ಟಿಯ ಆಡಳಿತಗಾರ

ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರದ ನಿರ್ಮಾಣಕ್ಕೆ ನಾಡಪ್ರಭು ಕೆಂಪೇಗೌಡ ಪಾತ್ರ ಬಹುಮುಖ್ಯವಾಗಿದೆ. ಅವರು ಮುಂದಿನ ನೂರು ವರ್ಷಗಳ ದೂರದೃಷ್ಟಿ ಹೊಂದಿದ್ದ ಆಡಳಿತಗಾರರಾಗಿದ್ದು ಅವರ ಆಡಳಿತ ವೈಖರಿ ಇಂದಿಗೂ ಮಾದರಿಯಾಗಿದೆ ಜೊತೆಗೆ ಇವತ್ತಿನ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಅವರ ಆದರ್ಶವಾಗಬೇಕಾಗಿದೆ ಎಂದರು.ಕೆಂಪೇಗೌಡರು ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಕೈಗಾರಿಕೆಗಳೆ ಜಾಗವನ್ನು ಗುರುತಿಸಿದ್ದರು, ಪ್ರತಿಯೊಂದು ಹಂತದಲ್ಲೂ ಜನಕ್ಕೆ ಬದುಕುವ ದಾರಿ ತೋರಿಸಿದ್ದಾರೆ ಅವರ ಕೆಲಸಗಳು ಇಂದಿಗೂ ಮಾದರಿಯಾಗಿದೆ. ಅತ್ಯುತ್ತಮ ಆಡಳಿತಗಾರರಾಗಿದ್ದ ಕೆಂಪೇಗೌಡರು ಅಂದಿನ ಕಾಲದಲ್ಲಿ ಆಡಳಿತದ ಸೂತ್ರಗಳನ್ನು ರೂಪಿಸಿ ಅದರ ಮೂಲಕ ಪ್ರಾಮಾಣಿಕವಾಗಿ ಮುನ್ನಡೆಯುವಂತೆ ಮಾಡಿದ್ದರು ಎಂದರು.

ಕೆರೆ ಕಟ್ಟೆ, ಸ್ವಚ್ಛತೆಗೆ ಪ್ರಾಧಾನ್ಯತೆ

ಕೆಂಪೇಗೌಡರು ಅಂದಿನ ಕಾಲದಲ್ಲಿಯೇ ಕೆರೆ ಕಟ್ಟೆ, ನೈರ್ಮಲ್ಯಕ್ಕೆ ಪ್ರಾಧ್ಯಾನತೆ, ಕಟ್ಟಡಗಳ ನಿರ್ಮಾಣ, ಗೋಪುರಗಳ ಮೂಲಕ ಗಡಿಗಳನ್ನು ಗುರುತಿಸುವುದು ಸೇರಿದಂತೆ ಇನ್ನಿತರ ಮಹತ್ವ ಕಾರ್ಯಗಳನ್ನು ಮಾಡಿದ್ದು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿಸಿದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಇವತ್ತು ಸಂವಿಧಾನದಿಂದ ಸಾಮಾಜಿಕ ನ್ಯಾಯ ಸಿಗುತ್ತಿದೆ, ಆದರೆ ಕೆಂಪೇಗೌಡರು ಅವತ್ತೇ ಎಲ್ಲಾ ಸಮುದಾಯಗಳ ಏಳಿಗೆಗಾಗಿ ಸಾಮಾಜಿಕ ನ್ಯಾಯವನ್ನು ಕೊಡಿಸಿದ್ದಾರೆ, ಒಕ್ಕಲಿಗ ಸಮುದಾಯವು ಎಲ್ಲ ಜಾತಿ ಜನಾಂಗವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಸಮುದಾಯವಾಗಿದೆ, ಸರ್ಕಾರ ಕೆಂಪೇಗೌಡರ ನೆನಪಿಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಅವರ ಹೆಸರನ್ನು ಇಡಲಾಗಿದೆ. ಜೊತೆಗೆ ೧೦೮ ಎತ್ತರದ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಅವರ ಮಾರ್ಗದರ್ಶನದಲ್ಲಿ ಗೌರವಯುತವಾಗಿ ನಾವು ಎಲ್ಲರೂ ನಡೆಯಬೇಕಾಗಿದೆ ಎಂದರು.ಎಲ್ಲ ಸಮುದಾಯಗಳ ನಾಯಕ

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೆಂಪೇಗೌಡರಿಂದ ಅನುಕೂಲ ಪಡೆಯದೇ ಇರುವ ಸಮುದಾಯವಿಲ್ಲ ಎಲ್ಲಾ ಸಮುದಾಗಳಿಗೆ ವ್ಯಾಪಾರ ವ್ಯಹಿವಾಟಿಗೆ ಅನುಕೂಲವಾಗಲು ಜಾಗವನ್ನು ಗುರುತಿಸಿದ್ದಾರೆ. ಕೃಷಿ, ವ್ಯಾಪಾರ, ಕಾರ್ಮಿಕರ ಮಧ್ಯೆ ಸ್ನೇಹದ ಮನೋಭಾವ ಬೆಳೆಸುವಂತೆ ಕೆಂಪೇಗೌಡರ ಹಾದಿಯಲ್ಲಿ ಸಾರಿಗೆ ನೌಕರರು ನಡೆಯುತ್ತಿರುವುದು ಅಭಿನಂದನಿಯವಾಗಿದೆ ಎಂದು ಹೇಳಿದರು.ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ, ಗೌರವ ಅಧ್ಯಕ್ಷ ಬಿಸಪ್ಪಗೌಡ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಛತ್ರಕೋಡಿಹಳ್ಳಿ ಮಂಜುನಾಥ್, ಮುಖಂಡರಾದ ಜನಪನಹಳ್ಳಿ ನವೀನ್ ಕುಮಾರ್, ವೈ.ಶಿವಕುಮಾರ್, ಕೆ.ಎಸ್.ಆರ್.ಟಿ.ಸಿ ಕೆಂಪೇಗೌಡ ನೌಕರರ ಸಂಘದ ಅಧ್ಯಕ್ಷ ಉಪ್ಪುಕಂಟೆ ಮುರಳಿ, ಉಪಾಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ವೆಂಕಟಾಚಲಪತಿ, ಅಬ್ಬಣಿ ಸೊಣ್ಣಪ್ಪ ಇದ್ದರು.