ಪದವಿ ಪಡೆದ ಬಳಿಕವೂ ಉದ್ಯೋಗ ಸಿಗದಿದ್ದರೆ ಶಿಕ್ಷಣದ ಪ್ರಯೋಜನವೇನು? ಗ್ರಾಮೀಣ ಪ್ರದೇಶದ ಕಾಲೇಜುಗಳಿಗೆ ಮೂಲಸೌಕರ್ಯ ಯಾವಾಗ?, ವಿದ್ಯಾರ್ಥಿ ವೇತನ ವಿಳಂಬಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳು ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಯುವಸಂಸತ್ ನಲ್ಲಿ ಕೇಳಿಬಂದ ಧ್ವನಿಗಳು.
ಮೌನೇಶ್ ವಿಶ್ವಕರ್ಮ
ಪದವಿ ಪಡೆದ ಬಳಿಕವೂ ಉದ್ಯೋಗ ಸಿಗದಿದ್ದರೆ ಶಿಕ್ಷಣದ ಪ್ರಯೋಜನವೇನು? ಗ್ರಾಮೀಣ ಪ್ರದೇಶದ ಕಾಲೇಜುಗಳಿಗೆ ಮೂಲಸೌಕರ್ಯ ಯಾವಾಗ?, ವಿದ್ಯಾರ್ಥಿ ವೇತನ ವಿಳಂಬಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳು ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಯುವಸಂಸತ್ ನಲ್ಲಿ ಕೇಳಿಬಂದ ಧ್ವನಿಗಳು. ಬಂಟ್ವಾಳ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಕಲಾಪದಲ್ಲಿ ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಸ್ಥಾನ ಪಡೆದು, ಸಚಿವರಾಗಿ ವಿಧಾನಸಭೆಯ ಕಲಾಪದ ರೀತಿಯಲ್ಲಿ ಚರ್ಚಿಸಿದರು.ನಿರುದ್ಯೋಗ ನಿವಾರಣೆಗೆ ಸರ್ಕಾರದ ಕ್ರಮವೇನು? ಎಂಬ ಪ್ರಶ್ನೆ ವಿದ್ಯಾರ್ಥಿಗಳ ಆತಂಕವನ್ನು ಪ್ರತಿಬಿಂಬಿಸಿತು. ಶಾಲಾ-ಕಾಲೇಜು ಹಂತದಲ್ಲೇ ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಮುಖಿಯಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಪುನೀತ್ ಕುಮಾರ್ ಉತ್ತರಿಸಿದರು.ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದ ವಿದ್ಯಾರ್ಥಿಗಳೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಯಿತು. ಡೆಂಘೀ ಪ್ರಕರಣಗಳ ಹೆಚ್ಚಳದ ಬಗ್ಗೆ ಪ್ರಶ್ನೆ ಎದ್ದಿತು. ವಾಮದಪದವು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದನ್ನು ವಿದ್ಯಾರ್ಥಿಗಳು ಪ್ರಸ್ತಾಪಿಸಿ, ಗ್ರಾಮೀಣ ಪ್ರದೇಶದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಆರೋಗ್ಯ ಸಚಿವೆ ರಮ್ಲತ್ ಉತ್ತರಿಸಿದರು.
ಬಸ್‌ಗಾಗಿ ಹೋರಾಟ: ಬಿ.ಸಿ.ರೋಡ್‌ನಲ್ಲೂ ಬಸ್ ತಂಗುದಾಣದ ಸಮಸ್ಯೆ ಪರಿಹರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸುವುದಾಗಿ ಸಾರಿಗೆ ಸಚಿವೆ ಸ್ತುತಿ ಭರವಸೆ ನೀಡಿದರು.ಸಮಸ್ಯೆಗಳ ಸರಮಾಲೆ: ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ವಿಚಾರದಲ್ಲೂ ಚರ್ಚೆ ನಡೆಯಿತು. ಅವರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಸರ್ಕಾರದ ಪರವಾಗಿ ಉತ್ತರಿಸಲಾಯಿತು. ನೇತ್ರಾವತಿ ನದಿ ತಿರುವು ಯೋಜನೆ ನಿಲ್ಲಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಡ್ರಗ್ಸ್ ವಿರುದ್ಧ ವಿದ್ಯಾರ್ಥಿಗಳ ಧ್ವನಿ: ಡ್ರಗ್ಸ್ ನಿರ್ಮೂಲನೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವೆ ಹುಲುಗಮ್ಮ ಭರವಸೆ ನೀಡಿದರು.ಪ್ರತಿಪಕ್ಷದ ವ್ಯಂಗ್ಯ: ಹಲವು ಸಮಸ್ಯೆಗಳಿಗೆ ಹಿಂದಿನ ಸರ್ಕಾರವನ್ನೇ ದೂರುವುದು ಎಷ್ಟು ಸರಿ? ಎಂಬ ಧಾಟಿಯಲ್ಲಿ ಪ್ರತಿಪಕ್ಷದ ವಿದ್ಯಾರ್ಥಿಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ವಿರೋಧ ಪಕ್ಷದ ನಾಯಕಿ ನವ್ಯ, ಸದಸ್ಯರಾದ ಆಶಾಲತಾ, ಮೇಘಾ, ಸಾಜಿರಾ, ಶ್ರೀ ಹರ್ಷಿತ, ಮಹೇಶ್ ಪಾಲ್ಗೊಂಡರು. ವಾಮದಪದವು, ಕಾಮಾಜೆ, ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಮತ್ತು ಬಿ ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಸಭಾಧ್ಯಕ್ಷರಾಗಿ ಆಯ್ಕೆಯಾದ ಭುವನೇಶ್ ಅವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ವಕೀಲರ ಸಂಘದ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯ ಕುಮಾರಿ, ತಾಪಂ ಕಚೇರಿ ಅಧೀಕ್ಷಕ ಪ್ರಕಾಶ್, ವಕೀಲ ಅಬ್ದುಲ್, ಶಿಕ್ಷಣ ಸಂಯೋಜಕಿ ಪ್ರತಿಮಾ ಉಪಸ್ಥಿತರಿದ್ದರು.ಉಪನ್ಯಾಸಕರಾದ ಡಾ. ಹರಿಣಾಕ್ಷಿ, ರೋಹಿಣಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಆಗಮಿಸಿ ವಿದ್ಯಾರ್ಥಿಗಳ ಕಲಾಪ ವೀಕ್ಷಿಸಿದರು. ಮುಖ್ಯಮಂತ್ರಿ ಪುನೀತ್ ಕುಮಾರ್, ಉಪ ಮುಖ್ಯಮಂತ್ರಿ ಪ್ರಿಯದರ್ಶಿನಿ, ಗೃಹ ಸಚಿವೆ ವಿದ್ಯಾಶ್ರೀ, ಸಾರಿಗೆ ಸಚಿವೆ ಸ್ತುತಿ, ಸಮಾಜ ಕಲ್ಯಾಣ ಸಚಿವ ಅಕ್ಷಯ್, ಆಡಳಿತ ಪಕ್ಷದ ಸಚೇತಕಿ ಅಕ್ಷತಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ರಶ್ಮಿತ, ಕಾನೂನು ಸಚಿವೆ ಹುಲುಗಮ್ಮ, ಆರೋಗ್ಯ ಸಚಿವೆ ರಮ್ಲತ್, ಶಿಕ್ಷಣ ಸಚಿವ ಗೋರೆಸಾಬ್, ನೀರಾವರಿ ಸಚಿವ ಹರಿರಾಜ್, ಉಪಸಭಾಧ್ಯಕ್ಷ ಸಂದೀಪ್, ಕೃಷಿ ಸಚಿವ ಮನೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶಸ್ವಿನಿ ಇದ್ದರು.