ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡರಾಜ್ಯದಲ್ಲಿ ಸಾವಿನ ಹೆದ್ದಾರಿ (ಕಿಲ್ಲರ್ ಬೈಪಾಸ್) ಎಂದೇ ಗುರುತಿಸಿಕೊಂಡಿದ್ದ ಇಲ್ಲಿಯ ಧಾರವಾಡದ ನರೇಂದ್ರ ಕ್ರಾಸ್‌ನಿಂದ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ವರೆಗಿನ 30 ಕಿ.ಮೀ. ವ್ಯಾಪ್ತಿಯ ದ್ವಿಪಥ ಬೈಪಾಸ್ ರಸ್ತೆಗೆ ಸದ್ಯದಲ್ಲಿಯೇ ಮುಕ್ತಿ ದೊರೆಯಲಿದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ಮೂಲಕ ರಸ್ತೆ ಅಗಲೀಕರಣ ಕಾರ್ಯ ಶುರು ಮಾಡಿದೆ.ಕಳೆದ ಮಾರ್ಚ್ ತಿಂಗಳಿಂದ ಎನ್‌ಎಚ್‌ಎಐ ರಸ್ತೆ ಅಗಲೀಕರಣ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿ ಭರದಿಂದ ಸಾಗಿದೆ. 2025ರ ಸೆಪ್ಟೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಾಧಿಕಾರ ಗುರಿ ಹೊಂದಿದೆ.
ಎಷ್ಟೊಂದು ಸಾವು?2000ನೇ ಇಸ್ವಿಯಲ್ಲಿ ನಿರ್ಮಾಣವಾದ ಈ ಬೈಪಾಸ್ ರಸ್ತೆ ಬರೀ ದ್ವಿಪಥ ಇರುವ ಕಾರಣ ಸಾವಿರಾರು ಜನರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ ರಸ್ತೆಯ ಸುತ್ತಲೂ ಗ್ರಾಮಗಳಿರುವ ಕಾರಣ ಎತ್ತು-ಚಕ್ಕಡಿ ಹಾಗೂ ಬೈಕ್ ಸವಾರರು ಹೆಚ್ಚು ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ.
ಅದರಲ್ಲೂ ಕಳೆದ ಒಂದು ದಶಕದಲ್ಲಿ ಈ ದ್ವಿಪಥ ಬೈಪಾಸ್ ರಸ್ತೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಈ ರಸ್ತೆಯ ಇಟಿಗಟ್ಟಿ ಬಳಿ ದಾವಣಗೆರೆಯ 13 ಜನ ಸ್ನೇಹಿತೆಯರು ಗೋವಾಕ್ಕೆ ತೆರಳುವಾಗ ಅಪಘಾತದಲ್ಲಿ ಮೃತಪಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸಹ ವಿಷಾದ ವ್ಯಕ್ತಪಡಿಸಿದ್ದರು.ರಸ್ತೆ ಅಗಲೀಕರಣಕ್ಕಾಗಿ ಅಪಘಾತದ ಸ್ಥಳದ ವರೆಗೆ ಮೂರು ಬಾರಿ ಪಾದಯಾತ್ರೆ, ಧರಣಿ ಮಾಡಿದ್ದಲ್ಲದೇ ಮೃತಪಟ್ಟವರ ಪ್ರಥಮ ಪುಣ್ಯಸ್ಮರಣೆ ಸಹ ಅಪಘಾತದ ಸ್ಥಳದಲ್ಲಿ ಮಾಡಲಾಗಿತ್ತು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ಸಹ ಈ ರಸ್ತೆ ಸುರಕ್ಷತೆ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು.
ಹತ್ತು ಪಥಗಳ ರಸ್ತೆ:ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವತ್ತು ತೀವ್ರ ಒತ್ತಡ ತಂದ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ರಸ್ತೆ ಅಗಲೀಕರಣಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತು.
ಶೀಘ್ರ ಬೈಪಾಸ್ ರಸ್ತೆ ಅಗಲೀಕರಣ ಮಾಡಿ ಅಪಘಾತ ರಹಿತ ವಲಯವನ್ನಾಗಿ ರೂಪಿಸಲು ಪ್ರಾಧಿಕಾರ ಪಣ ತೊಟ್ಟಿದೆ ಎಂದು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಯೋಜನಾ ನಿರ್ದೇಶಕ ಭುವನೇಶ್ವರ ಕುಮಾರ, ಪ್ರಾಧಿಕಾರವು 30.6 ಕಿ.ಮೀ. ದ್ವಿಪಥ ರಸ್ತೆಯನ್ನು ₹580 ಕೋಟಿ ವೆಚ್ಚದಲ್ಲಿ ಸರ್ವೀಸ್ ರಸ್ತೆ ಸೇರಿ ಹತ್ತು ಪಥಗಳ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಎಬಿಎಸ್ ಹೈಡ್ರೋ ಹಾಗೂ ಆರ್‌ಎನ್‌ಸಿ ಕಂಪನಿ ಗುತ್ತಿಗೆ ಪಡೆದಿವೆ. ಇದರೊಂದಿಗೆ ರಸ್ತೆಯ ಎರಡು ಬದಿ ಅನೇಕ ಗ್ರಾಮಗಳಿರುವ ಕಾರಣ ಅವುಗಳಿಗೆ ಸಂಪರ್ಕ ಮಾಡಲು ಎರಡೆರಡು ಪಥಗಳ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ ಅಗಲೀಕರಣ ಕಾರ್ಯಕ್ಕೆ 40 ಎಕರೆ ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಮಾಡಲಾಗುತ್ತಿದ್ದು, 19 ಎಕರೆ ಜಮೀನನ್ನು ಈಗಾಗಲೇ ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಚಾಲ್ತಿಯಲ್ಲಿದೆ ಎಂದರು.2025ಕ್ಕೆ ಕಾಮಗಾರಿ ಪೂರ್ಣ:
ಈ 30.6 ಕಿ.ಮೀ. ರಸ್ತೆಯಲ್ಲಿ ಸುಮಾರು 21 ಕೆಳಸೇತುವೆಗಳು, ಒಂದು ಮೇಲ್ಸೇತುವೆ ಹಾಗೂ ಒಂದು ರೇಲ್ವೆ ಮೇಲ್ಸೇತುವೆ ಬರಲಿದೆ. ಪ್ರಥಮ ಹಂತದಲ್ಲಿ ರಸ್ತೆಯ ಬಲ ಭಾಗದಲ್ಲಿ ಮೂರು ಪಥಗಳನ್ನು ಅಗಲೀಕರಣಗೊಳಿಸಿ, ನಂತರ ಉಳಿದ ಮೂರು ಪಥಗಳನ್ನು ಅಗಲೀಕರಣ ಕಾಮಗಾರಿ ತೆಗೆದುಕೊಳ್ಳಲಾಗುವುದು. ಇದರೊಂದಿಗೆ ಎರಡೂ ಬದಿಯಲ್ಲಿ ದ್ವಿಪಥ ಸರ್ವೀಸ್ ಕಾಮಗಾರಿಯೂ ನಡೆಯುತ್ತಿದೆ. ದ್ವಿಪಥ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶವಿದೆ ಎಂದ ಅವರು, ರಸ್ತೆ ಕಾಮಗಾರಿಯನ್ನು ಈ ಹಿಂದೆ ನೈಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, 2024ರ ಮೇ ತಿಂಗಳಲ್ಲಿ ಅವರ ಗುತ್ತಿಗೆ ಅವಧಿ ಮುಗಿಯಲಿದೆ. ಇದಾದ ನಂತರ ನೈಸ್ ಸಂಸ್ಥೆಯು ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಿದೆ. ಪ್ರಸ್ತುತ 30.6 ಕಿ.ಮೀ ವ್ಯಾಪ್ತಿಯಲ್ಲಿ ಹಲವು ಟೋಲ್‌ಗಳಿದ್ದು ರಸ್ತೆ ಅಗಲೀಕರಣ ಮುಗಿದ ನಂತರ ಈ ಬೈಪಾಸ್ ರಸ್ತೆಯಲ್ಲಿ ಒಂದೇ ಟೋಲ್ ಪ್ಲಾಜಾ ಇರಲಿದೆ ಎಂದು ಮಾಹಿತಿ ನೀಡಿದರು. ರಸ್ತೆ ಕಾಮಗಾರಿಯ ವೇಗವನ್ನು ಗಮನಿಸಿದರೆ, ಈ ಯೋಜನೆ 2025ರ ಸಪ್ಟೆಂಬರ್ ತಿಂಗಳಿಗೆ ಪೂರ್ಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಹು-ಧಾ ಮಧ್ಯದ ಬೈಪಾಸ್ ರಸ್ತೆಯಲ್ಲಿ ನಿತ್ಯ ಒಂದಿಲ್ಲೊಂದು ಅಪಘಾತದಲ್ಲಿ ಜನ-ಜಾನುವಾರುಗಳು ಮೃತಪಟ್ಟಿವೆ. ಬೈಪಾಸ್ ರಸ್ತೆ ಅಗಲೀಕರಣಕ್ಕೆ ಹಲವು ಬಾರಿ ಆಗ್ರಹಿಸಿದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿರಿಲ್ಲ. ದಾವಣಗೆರೆ 13 ಜನರ ಅಪಘಾತದ ನಂತರವಂತೂ ಅಪಘಾತದ ಸ್ಥಳದ ವರೆಗೆ ಮೂರು ಬಾರಿ ಪಾದಯಾತ್ರೆ ಮಾಡಲಾಯಿತು. ಮೃತರ ಕುಟುಂಬದವರನ್ನು ಕರೆಯಿಸಿ ಪ್ರಥಮ ಪುಣ್ಯ ಸ್ಮರಣೆ ಸಹ ಮಾಡಲಾಯಿತು. ನೂರಾರು ಜೀವಗಳು ಬಲಿಯಾದ ನಂತರ ಈಗ ಅಗಲೀಕರಣ ಕಾರ್ಯ ಶುರುವಾಗಿದೆ. ಇನ್ನಾದರೂ ಶೀಘ್ರ, ಗುಣಮಟ್ಟದ ಕಾಮಗಾರಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಕೆಪಿಸಿಸಿ ವಕ್ತಾರ ಪಿ.ಎಚ್. ನೀರಲಕೇರಿ ಆಗ್ರಹಿಸಿದ್ದಾರೆ.