ಸಾರಾಂಶ
ಮುದಗಲ್: ಫೋಕ್ಸೋ ಕೇಸ್ ದಾಖಲಿಸಿದ ಅಪ್ರಾಪ್ತೆ ವಯಸ್ಸಿನ ಪ್ರೇಯಸಿಯ ತಾಯಿಯನ್ನು ಪ್ರಿಯಕರ ಮತ್ತು ಮೂರು ಜನ ಸೇರಿ ಕೊಲೆ ಮಾಡಿರುವ ಘಟನೆ ಸಮೀಪದ ಕಿಲಾರ್ ಹಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ನಿವಾಸಿ ಅಂಬಮ್ಮ (37) ಕೊಲೆಯಾದ ಮಹಿಳೆ, ಆರೋಪಿ ಅರುಣ ಕುಮಾರ, ಪ್ರಕಾಶ ಪ್ರವೀಣ ಕುಮಾರ ಹಾಗೂ ಅಶೋಕ ಅವರು ಕೃತ್ಯವೆಸಗಿದ್ದಾರೆ. ಆರೋಪಿ ಅರುಣ ಕುಮಾರ ಅಪ್ರಾಪ್ತೆ ವಯಸ್ಸಿನ ಮಗಳನ್ನು ಪ್ರೀತಿಸಿ ಮನೆಯಿಂದ ಕರೆದುಕೊಂಡು ಒಂಬತ್ತು ತಿಂಗಳ ಕಾಲ ದೂರವಿದ್ದು ನಂತರ ಮರಳಿ ಮನೆಗೆ ಬಂದಿದ್ದ. ಇದರ ವಿರುದ್ಧ ತಾಯಿ ಅಂಬಮ್ಮ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಳು. ಇದರಿಂದಾಗಿ ಆರೋಪಿ ಅರುಣ ಕುಮಾರು ಆರು ತಿಂಗಳ ಸೆರೆವಾಸ ಅನುಭವಿಸಿ ಬೇಲ್ ಮೇಲೆ ಹೊರಬಂದು, ಕೇಸ್ ಹಿಂಪಡೆಯುವಂತೆ ನಿತ್ಯ ಪೀಡಿಸುತ್ತಿದ್ದನು. ಇದೇ ದ್ವೇಷದಡಿ ಕಳೆದ ಅ.12 ರಂದು ಅಂಬಮ್ಮ ಅವರನ್ನು ಅಪಹರಿಸಿದ ಆರೋಪಿತರು ಚಿತ್ರ ಹಿಂಸೆ ನೀಡಿ ಕೊಲೆ ಮಾಡಿ ತೊಗರಿ ಹೊಲದಲ್ಲಿ ಶವ ಬಿಸಾಕಿ ಪರಾರಿಯಾಗಿದ್ದ. ಜಮೀನಿನಲ್ಲಿ ಶವವನ್ನು ಗಮನಿಸಿದ ಗ್ರಾಮಸ್ಥರು ತನಿಖೆ ಆರಂಭಿಸಿ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಹತ್ಯೆ ಮಾಡಿರುವುದು ಬಹಿರಂಗಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.