ಪ್ರವಾಸಿಗರಿಗೆ ವಂಚಿತವಾದ ಜೋಗ ಜಲಪಾತದ ಸುತ್ತಮುತ್ತಲಿನ ವೈಜ್ಞಾನಿಕ ಕೌತುಕದ ಹಲವು ವೈಶಿಷ್ಟ್ಯ

| N/A | Published : Jan 25 2025, 01:04 AM IST / Updated: Jan 25 2025, 01:02 PM IST

ಪ್ರವಾಸಿಗರಿಗೆ ವಂಚಿತವಾದ ಜೋಗ ಜಲಪಾತದ ಸುತ್ತಮುತ್ತಲಿನ ವೈಜ್ಞಾನಿಕ ಕೌತುಕದ ಹಲವು ವೈಶಿಷ್ಟ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜೋಗ ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಯೋಜನಾ ಜಾಲವು ಆಣೆ ಕಟ್ಟೆ, ಕಾಲುವೆ, ಸುರಂಗ, ಸಂತುಲನ ಜಲಾಶಯ ವಿದ್ಯುದಾಗಾರ ಮೊದಲಾದವು ವೈಜ್ಞಾನಿಕ ಕೌತುಕದ ಹಲವು ವೈಶಿಷ್ಠವನ್ನು ಹೊಂದಿದೆ. ಆದರೆ ಈಗ ಜೋಗ ಪ್ರವಾಸಿಗರಿಗೆ ಅದನ್ನು ಕಾಣುವ ಭಾಗ್ಯವಿಲ್ಲ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

 ತಾಳಗುಪ್ಪ : ರಾಷ್ಟ್ರದ ಪ್ರಮುಖ ಜಲವಿದ್ಯುದ್‌ ಯೋಜನೆಯಲ್ಲಿ ಶರಾವತಿ ಕಣಿವೆಯ ಯೋಜನೆಗಳು ಮಹತ್ವದ್ದಾಗಿದೆ. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಯೋಜನಾ ಜಾಲವು ಆಣೆ ಕಟ್ಟೆ, ಕಾಲುವೆ, ಸುರಂಗ, ಸಂತುಲನ ಜಲಾಶಯ ವಿದ್ಯುದಾಗಾರ ಮೊದಲಾದವು ವೈಜ್ಞಾನಿಕ ಕೌತುಕದ ಹಲವು ವೈಶಿಷ್ಟ್ಯವನ್ನು ಹೊಂದಿದೆ. ಆದರೆ ಈಗ ಜೋಗ ಪ್ರವಾಸಿಗರಿಗೆ ಅದನ್ನು ಕಾಣುವ ಭಾಗ್ಯವಿಲ್ಲ.

ಹಿಂದೆ ಯೋಜನಾ ಪ್ರದೇಶವನ್ನು ನೋಡಲು ಯೋಜನಾ ಕಚೇರಿಯಲ್ಲಿ ಪ್ರವಾಸಿಗರಿಗೆ ಪಾಸ್ ನೀಡುತ್ತಿದ್ದರು. ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿ ಒಳ ಬಿಡುತ್ತಿದ್ದರು. ಜನ ಸಾಮಾನ್ಯರು ಪಾಸ್ ಪಡೆದು ಹಿಂಜರಿಕೆ ಇಲ್ಲದೆ ಶರಾವತಿ ಕಣಿವೆಯ ಮೊದಲ ಪವರ್ ಸ್ಟೇಶನ್ ಮಹಾತ್ಮಾಗಾಂಧಿ ವಿದ್ಯುದಾಗರ, 1035 ಮೆ.ಗಾ. ಉತ್ಪಾದನಾ ಸಾಮರ್ಥ್ಯದ ಶರಾವತಿ ವಿದ್ಯುದಾಗರ, ಲಿಂಗನ ಮಕ್ಕಿಯ ಎಲ್.ಪಿ.ಎಚ್ ಹೀಗೆ ತಮ್ಮ ಮನೆ ಬೆಳಗುವ ಬೆಳ್ಳಿ ಬೆಳಕಿನ ಮೂಲ ಕಾಣಬಹುದಿತ್ತು. ಲಿಂಗನಮಕ್ಕಿ ಆಣೆಕಟ್ಟಿನ ಮೇಲೆ ನಿಂತು ಜಲಾಶಯದ ಹಿನ್ನೀರ ವಿಸ್ತಾರ ಕಾಣಬಹುದಿತ್ತು. 1985ರಲ್ಲಿ ಎಲ್‌ಟಿಟಿಇ ಉಗ್ರರ ಬೆದರಿಕೆ ಇದೆ ಎಂಬ ಕಾರಣದಿಂದ ಯೋಜನಾ ಪ್ರದೇಶದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಯಿತು. 

ಭದ್ರತೆಯ ನೆಪದಲ್ಲಿ ಲಿಂಗನಮಕ್ಕಿ ಡ್ಯಾಂ ಎಬಿ ಸೈಟ್, ಎಂಜಿಎಚ್ ಮುಂತಾದ ಎಲ್ಲಾ ಜಾಗಕ್ಕೂ ಪ್ರವೇಶ ಬಂದ್ ಮಾಡಲಾಯಿತು. ಆದರೆ ಎಂತ ವಿಪರ್ಯಾಸವೆಂದರೆ ಎಲ್‌ಟಿಟಿಇ ಹೋಗಿ ದಶಕಗಳೇ ಸಂದರೂ ಬೆದರಿಕೆಯ ನಿರ್ಬಂಧ ಇನ್ನೂ ಮುಂದುವರೆದಿದೆ.! ಇದರಿಂದಾಗಿ ಜೋಗ ಪ್ರವಾಸ ಜಲಪಾತ ಕಾಣುವುದಷ್ಟಕ್ಕೇ ಸೀಮಿತವಾಗಿದೆ.

ಮರೆತು ಹೋದ ರಾಮ ರಹೀಮ ಟ್ರ್ಯಾಲಿ:ವಿದ್ಯುದಾಗಾರದ ಕೆಲಸ ನಡೆಯುತ್ತಿದ್ದ ಸಮಯದಲ್ಲಿ (1939-1948 ) ಮೇಲಿನಿಂದ ಬಾಟಮ್‍ವರೆಗೆ ಸಾಮಗ್ರಿ ಸಾಗಾಣಿಕೆ ಹಾಗೂ ಕಾರ್ಮಿಕರ ಓಡಾಟಕ್ಕೆ ಅನುಕೂಲವಾಗಲು ಸುಮಾರು 3.5 ಲಕ್ಷ ರು. ವೆಚ್ಚದಲ್ಲಿ 40 ಪೌಂಡುಗಳ ಹಳಿ ಹಾಕಿ ರೈಲ್ವೆ ಸ್ಲೀಪರನ್ನು ಅಳವಡಿಸಿ ಟ್ರಾಲಿ ಟ್ರಾಕ್ ನಿರ್ಮಿಸಲಾಗಿತ್ತು. ವಿದ್ಯುದಾಗರಕ್ಕೆ 1626 ಅಡಿ ಉದ್ದದ ಹಳಿ ಹಾಕಿ, 100 ಎಚ್.ಪಿ.ಮೋಟಾರಿನಿಂದ ಸುಮಾರು ಎರಡು ಇಂಚು ವ್ಯಾಸದ ಉಕ್ಕಿನ ಹಗ್ಗದ ತುದಿಗೆ ಬಿಗಿದ ಟ್ರಾಲಿ ಜನರನ್ನು ಮೇಲೆ ಕೆಳಗೆ ಕರೆದೊಯ್ಯುತ್ತಿತ್ತು. ಈ ಟ್ರಾಲಿಗಳಿಗೆ ರಾಮ ರಹಿಮ ಎಂಬ ಹೆಸರಿತ್ತು. ಮಹಾತ್ಮಾಗಾಂಧಿ ವಿದ್ಯುದಾಗಾರ ಪ್ರಾರಂಭವಾದ ಮೇಲೆ ಪ್ರವಾಸಿಗಳನ್ನು ಬಿಡುವ ವ್ಯವಸ್ಥೆ ಮಾಡಲಾಗಿತ್ತು.

1626 ಅಡಿ ಆಳಕ್ಕೆ ಜಾರುವ ಅನುಭವ ಭಯ ಮಿಶ್ರಿತವಾಗಿದ್ದರೂ, ದೂರದಲ್ಲಿ ದಟ್ಟ ಹಸಿರಿನ ನಡುವೆ ಕಾಣುವ ಶರಾವತಿಯ ಹರಿವು, ಮಳೆಗಾಲದಲ್ಲಿ ಕವಿದ ಮಂಜಿನ ವಾತಾವರಣ ಮುದ ನೀಡುತ್ತಿತ್ತು. ಟ್ರಾಲಿಯಲ್ಲಿ ಇಳಿದು ವಿದ್ಯುದಾಗರವನ್ನು ನೋಡುವ ಅವಕಾಶ ಪ್ರವಾಸಿಗರಿಗೆ ಜ್ಞಾನ ಹಂಚುವ ಕಾರ್ಯಕ್ರಮ. ಇದು ಭದ್ರತೆಯ ದೃಷ್ಟಿಯಿಂದ ಎಲ್ಲಾ ಕ್ರಮ ಕೈಗೊಳ್ಳಲಿ, ಈಗಂತೂ ವಿಜ್ಞಾನ ಮುಂದುವರೆದಿದೆ ಅರೆ ಕ್ಷಣದಲ್ಲಿ ಸ್ಕ್ಯಾನ್ ಮಾಡಿ ಜನರನ್ನು ತಪಾಸಣೆಗೆ ಒಳಪಡಿಸಬಹುದು. 

ವೈಜ್ಞಾನಿಕ ಜ್ಞಾನ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಕಡೇ ಪಕ್ಷ ಶಾಲಾ ಮಕ್ಕಳಿಗಾದರೂ ಪ್ರವೇಶ ನೀಡಬೇಕು. ವಿಜ್ಞಾನದ ವಿಷಯ ಬರೆಯುವ ಮತ್ತು ಅವರ ಬರಹಕ್ಕೆ ಸರ್ಕಾರ ಮಟ್ಟದಲ್ಲಿ ಬೆಲೆ ಇರುವ ಹಾಗೂ ಆಡಳಿತಾರೂಢರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜೋಗ ಪ್ರವಾಸಿಗರ ಅಂಬೋಣ. ವಿದ್ಯುತ್ ಸ್ಥಾವರ, ಜಲಾಶಯಗಳ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ನಿಗಮದ ಉದ್ಯೋಗಿಗಳ ಅವಲಂಬಿತರು, ಮಾಧ್ಯಮದವರು ಮೊದಲಾದವರಿಗೆ ಪಾಸ್ ನೀಡಿ ಪ್ರವೇಶಾನುಕೂಲವನ್ನು ಕಲ್ಪಿಸಲಾಗಿದೆ. 

ವಿದ್ಯುತ್ ನಿಗಮದ ಕೇಂದ್ರ ಕಚೇರಿಯಲ್ಲಿ ಪರಾವಾನಿಗೆ ನೀಡುವ ವ್ಯವಸ್ಥೆ ಇದ್ದು, ಕಾಲೇಜು ವಿದ್ಯಾರ್ಥಿಗಳು ಅಲ್ಲಿಂದ ಪಾಸ್ ಪಡೆದುಕೊಂಡು ಬಂದರೆ ಅವಕಾಶ ನೀಡಲಾಗುತ್ತದೆ. ಎಮ್.ಜಿ.ಎಚ್.ಗೆ ಏಕಮುಖ ರಸ್ತೆ ಮಾರ್ಗ ಇರುವುದರಿಂದ ಕಾರ್ಮಿಕರನ್ನು ಹೊರತು ಪಡಿಸಿದರೆ ಬೇರೆ ಯಾರನ್ನೂ ಬಿಡುವುದಿಲ್ಲ. ಹಿಂದೆ ಎಮ್.ಜಿ.ಎಚ್.ಗೆ ಇದ್ದ ಟ್ರಾಲಿ ವ್ಯವಸ್ಥೆ ಈಗಿಲ್ಲ. ಟ್ರಾಲಿಯನ್ನು ನವೀಕರಿಸುವ ಪ್ರಸ್ತಾವನೆ ಇದೆ. -ಎಚ್.ಆರ್.ರಮೇಶ, ಮುಖ್ಯ ಎಂಜಿನಿಯರ್ ( ಎಲೆಕ್ಟ್ರಿಕಲ್) ಜೋಗ.