ಭಾರತೀಯತೆ ಎಂಬ ಪದಕ್ಕೆ ಒಗ್ಗೂಡಿಸುವ ಶಕ್ತಿ ಇದೆ: ಶಂಕರ ಬಿದರಿ

| Published : Feb 03 2024, 01:48 AM IST

ಭಾರತೀಯತೆ ಎಂಬ ಪದಕ್ಕೆ ಒಗ್ಗೂಡಿಸುವ ಶಕ್ತಿ ಇದೆ: ಶಂಕರ ಬಿದರಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರ ತ್ಯಾಗ-ಬಲಿದಾನವಾಗಿದೆ. ಹೈದರಾಬಾದ್-ಕರ್ನಾಟಕ ಪ್ರದೇಶ ಒಳಗೊಂಡಂತೆ ಸುಮಾರು 565 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತ ದೇಶ ಕಟ್ಟಲಾಯಿತು. ನಮ್ಮಲ್ಲಿರುವ ಭೇದ-ಭಾವಗಳನ್ನು ಮರೆತು ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಇಂದಿನ ಯುವ ಪೀಳಿಗೆ ಹೇಳುವುದು ಅಗತ್ಯವಿದೆ.

ಕುಷ್ಟಗಿ: ಭಾರತೀಯತೆ ಎಂಬ ಪದ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ. ಅದು ಮಾತ್ರ ನಮ್ಮೆಲ್ಲರನ್ನು ಉತ್ತುಂಗಕ್ಕೆ ಕರೆದೊಯ್ಯಬಲ್ಲದು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಹೇಳಿದರು.ಪಟ್ಟಣದ ವಿಜಯ ಚಂದ್ರಶೇಖರ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ಶಾಲಾ ಸಂಭ್ರಮೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರ ತ್ಯಾಗ-ಬಲಿದಾನವಾಗಿದೆ. ಹೈದರಾಬಾದ್-ಕರ್ನಾಟಕ ಪ್ರದೇಶ ಒಳಗೊಂಡಂತೆ ಸುಮಾರು 565 ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತ ದೇಶ ಕಟ್ಟಲಾಯಿತು. ನಮ್ಮಲ್ಲಿರುವ ಭೇದ-ಭಾವಗಳನ್ನು ಮರೆತು ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಇಂದಿನ ಯುವ ಪೀಳಿಗೆ ಹೇಳುವುದು ಅಗತ್ಯವಿದೆ ಎಂದರು.ನಮ್ಮದು ಹಿಂದುಳಿದ ಪ್ರದೇಶವಿರಬಹುದು. ಆದರೆ ಇಲ್ಲಿ ಬುದ್ಧಿಮತ್ತೆಗೆ ಬರವಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿರುವ ವಿದ್ಯಾರ್ಥಿಗಳಿಗಿಂತಲೂ ಈ ಭಾಗದ ವಿದ್ಯಾರ್ಥಿಗಳು ಹೆಚ್ಚು ಬುದ್ಧಿಶಾಲಿಗಳು. ಅವರಿಗೆ ಎಲ್ಲ ಸಾಧಿಸುವ ಶಕ್ತಿಯಿದೆ. ಅವರಿಗೆ ಆತ್ಮವಿಶ್ವಾಸದ ಕೊರತೆಯಿದೆ. ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ. ಆದರೆ ಅಹಂಕಾರ ಬೇಡ. ನೀವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಪರಿಶ್ರಮ ವಹಿಸಿ. ಯಶಸ್ಸು ತಾನಾಗಿಯೇ ಬರುತ್ತದೆ. ಯಶಸ್ಸಿಗಾಗಿ ಅಡ್ಡದಾರಿ ಹಿಡಿಯಬೇಡಿ ಎಂದು ಕಿವಿಮಾತು ಹೇಳಿದರು.ತಂದೆ-ತಾಯಿಯರ ಸೇವೆಯೇ ನಿಜವಾದ ದೇಶ ಸೇವೆ, ಈಶ ಸೇವೆ. ನೀವು ಉದ್ಯೋಗಿಯಾದ ಮೇಲೆ ನಿಮ್ಮ ಮಾಸಿಕ ಆದಾಯದಲ್ಲಿ ಶೇ.10 ನಿಮ್ಮ ತಂದೆ-ತಾಯಿಯರಿಗೆ ಪ್ರತಿ ತಿಂಗಳು ತಪ್ಪದೇ ನೀಡಿ. ನೀವು ಯಾವುದೇ ಮಠ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ಹೋಗುವು ಅಗತ್ಯವೇ ಇಲ್ಲ. ಅಲ್ಲಿ ಹಣ ದೇಣಿಗೆ ಮಾಡುವ ಅಗತ್ಯವೂ ಇಲ್ಲ. ನೀವು ವಯಸ್ಸಾದ ನಿಮ್ಮ ತಂದೆ-ತಾಯಿಯರಿಗೆ ನೀಡುವ ಹಣ ಅತ್ಯಂತ ಶ್ರೇಷ್ಠ ಕಾರ್ಯವಾಗುತ್ತದೆ ಎಂದರು.ಸಿ.ವಿ. ಚಂದ್ರಶೇಖರ ಮಾತನಾಡಿ, ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಬದ್ಧವಾಗಿದೆ. ಅನೇಕ ಸವಾಲುಗಳ ನಡುವೆಯೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಕೋವಿಡ್-19 ತಂದಿತ್ತ ಸವಾಲುಗಳ ನಡುವೆಯೂ ಶಾಲಾ ಸುಧಾರಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಾಟಿಯಿಲ್ಲದ ಗುಣಮಟ್ಟ ಶಿಕ್ಷಣಕ್ಕಾಗಿ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.ಸಂಸ್ಥೆಯ ಸದಸ್ಯರಾದ ನಿಂಗನಗೌಡ ಪಾಟೀಲ್, ಎಸ್‌ವಿಸಿ ಶಾಲಾ ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ, ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಪ್ರಶಾಂತ ಹಿರೇಮಠ ಹಾಗೂ ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಸಿ. ತಿಪ್ಪಾಶೆಟ್ಟಿ ಹಾಜರಿದ್ದರು.ಹಿಂದಿನ ವರ್ಷಗಳಲ್ಲಿ ಹತ್ತನೆಯ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.