ಸಾರಾಂಶ
ಸರ್ಕಾರಿ ಶಾಲೆ ಶಿಕ್ಷಕರಿಗೆ ಖಾಸಗಿ ಶಾಲೆ ಪ್ರತಿ ವರ್ಷ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್. ಗೌಡರ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಸರ್ಕಾರಿ ಶಾಲೆ ಶಿಕ್ಷಕರಿಗೆ ಖಾಸಗಿ ಶಾಲೆ ಪ್ರತಿ ವರ್ಷ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್. ಗೌಡರ ಹೇಳಿದರು.ಗುರುವಾರ ಇಲ್ಲಿನ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ೨೦೨೪-೨೫ನೇ ಸಾಲಿನ ದಕ್ಷ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು ಎನ್ನುವ ಸದುದ್ದೇಶ ಹೊಂದಿರುವ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಪ್ರೇರಣೆ ನೀಡುವ ಹಿನ್ನೆಲೆ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿರುವುದು ನಮ್ಮೆಲ್ಲರಿಗೂ ಹಮ್ಮೆಯ ವಿಷಯ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಅಥಣಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಎಸ್. ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಬಹಳಷ್ಟು ಪ್ರತಿಭಾವಂತ, ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರಿದ್ದಾರೆ. ಆದರೆ, ಸರ್ಕಾರದ ಶೈಕ್ಷಣಿಕ ಯೋಜನೆಗಳು ಸರಿಯಾಗಿ ಅನುಷ್ಠಾನ ಮಾಡಬೇಕು. ಶಿಕ್ಷಕರಿಗೆ ನೀಡುವ ಇತರೆ ಕೆಲಗಳ ಒತ್ತಡದಿಂದ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟದ ಕೊರತೆಗೆ ಕಾರಣವಾಗುತ್ತದೆ. ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಸರ್ಕಾರಿ ಶಾಲೆಯ ಶಿಕ್ಷಕರನ್ನು ಗೌರವಿಸುತ್ತಿರುವುದು ನಮ್ಮೆಲ್ಲರಿಗೆ ಸಂತಸ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ್ ಚಿಕ್ಕಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ರಾಮಣ್ಣ ಧರಿಗೌಡರ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.