ಸಾರಾಂಶ
ಕಳೆದ ವರ್ಷ ತಾನೇ ಸಿಸಿ ರಸ್ತೆಗಳ ನಿರ್ಮಾಣ । ಕುಡಿವ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಗಳ ಅಗೆತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನೂರಾರು ಕೋಟಿ ರುಪಾಯಿ ವ್ಯಯಿಸಿ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಲಾದ ಸಿಸಿ ರಸ್ತೆಗಳಿಗೆ ಕೇಡುಗಾಲ ಆರಂಭವಾಗಿದೆ. ಅಡುಗೆ ಅನಿಲದ ಸಂಪರ್ಕ ಹಾಗೂ ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆ ನೆಪದಲ್ಲಿ ನಗರದ ತುಂಬಾ ಎಗ್ಗಿಲ್ಲದೇ ರಸ್ತೆ ಅಗೆಯಲಾಗುತ್ತಿದೆ. ಪರಿಣಾಮ ಸಿಸಿ ರಸ್ತೆಗಳು ಕಂಪನಕ್ಕೆ ಒಳಗಾಗಿ ಗಟ್ಟಿತನ ಕಳೆದುಕೊಳ್ಳುತ್ತಿವೆ. ಮೊದಲೇ ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರ ಮೂದಲಿಕೆಗೆ ರಸ್ತೆಗಳು ಒಳಗಾಗಿದ್ದು ಇದೀಗ ಅಗೆತದಿಂದಾಗಿ ಗುಣಮಟ್ಟದ ಅಸಲಿತನ ಬಹಿರಂಗವಾಗಿದೆ.ಚಿತ್ರದುರ್ಗದ ಮದಕರಿನಾಯಕ ಪ್ರತಿಮೆ ವೃತ್ತದಲ್ಲಿ ಸಶಸ್ತ್ರ ಮೀಸಲು ಪಡೆ ಕಚೇರಿ ಗೋಡೆಗೆ ಅಂಟಿಕೊಂಡಂತೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಮೀಪ, ಡಿವೈಎಸ್ಪಿ ಆಫೀಸ್ ಬಾಗಿಲಲ್ಲಿ ನಗರಸಭೆ ಸಿಬ್ಬಂದಿ ಸಿಸಿ ರಸ್ತೆಗಳ ಅಗೆದಿದ್ದಾರೆ. ಕುಡಿವ ನೀರಿನ ಪೈಪ್‌ಲೈನ್ ಗೆ ಧಕ್ಕೆಯಾಗಿರುವುದರಿಂದ ಅಗೆಯುವುದು ಅನಿವಾರ್ಯವೆನ್ನುತ್ತಾರೆ ಸಿಬ್ಬಂದಿ. ಆದರೆ ಅಗೆತದಿಂದ ರಸ್ತೆಗೆ ಆಗುವ ಗಂಭೀರ ಸ್ವರೂಪದ ಹಾನಿಯ ಬಗ್ಗೆ ಅವರ್ಯಾರಿಗೂ ಮನವರಿಕೆ ಆದಂತೆ ಕಾಣಿಸುತ್ತಿಲ್ಲ.
ಅವೈಜ್ಞಾನಿಕ ಸಿಸಿ ರಸ್ತೆ ನಿರ್ಮಾಣ:ಕನಿಷ್ಠ 30ರಿಂದ 40 ವರ್ಷ ಬಾಳಿಕೆಯ ದೂರದೃಷ್ಟಿ ಇಟ್ಟುಕೊಂಡು ಸಿಸಿ ರಸ್ತೆ ನಿರ್ಮಿಸಲಾಗುತ್ತದೆ. ಈ ವೇಳೆ ಭೂಮಿಯ ಆಳದಲ್ಲಿರುವ ನೀರಿನ ಪೈಪ್‌ಲೈನ್ ಮಾರ್ಗ, ವಿದ್ಯುತ್ ಕೇಬಲ್,ದೂರ ಸಂಪರ್ಕ ಇಲಾಖೆ ಕೇಬಲ್, ಒಳಚರಂಡಿ ಮಾರ್ಗಗಳು ಎಲ್ಲಿ ಹೋಗಿವೆ ಎಂಬುದ ಪರಿಶೀಲಿಸಬೇಕು. ಇದಕ್ಕಾಗಿ ರಸ್ತೆ ಅಂಚಿನಲ್ಲಿ ಜಾಗ ಬಿಟ್ಟು ರಸ್ತೆ ಮಾಡಬೇಕು. ಇಂತಹ ಕಡೆ ಸ್ಲಾಬ್ ಗಳ ಅಳವಡಿಸಿ ಕಾಮಗಾರಿ ಪೂರ್ಣ ಗೊಳಿಸಲಾಗುತ್ತದೆ. ಭವಿಷ್ಯದಲ್ಲಿ ಏನಾದರೂ ಕುಡಿವ ನೀರು, ಇಲ್ಲವೇ ಕೇಬಲ್ ಮಾರ್ಗಗಳಿಗೆ ಧಕ್ಕೆಯಾದರೆ ದುರಸ್ತಿ ಮಾಡಲು ಸುಲಭ ಮಾರ್ಗಕ್ಕೆ ಅವಕಾಶ ಮಾಡಿಕೊಳ್ಳಬೇಕು.
ಆದರೆ ಚಿತ್ರದುರ್ಗದಲ್ಲಿ ಇಂತಹ ರಸ್ತೆ ನಿರ್ಮಾಣದ ದೂರದೃಷ್ಟಿ ವ್ಯಕ್ತವಾಗಿಲ್ಲ. ರಸ್ತೆ ಉದ್ದ ಅಗಲ, ಅಳತೆ ಮಾಡಿ ಕಾಂಕ್ರಿಟ್ ಸುರಿಯ ಲಾಗಿದೆ. ಅಷ್ಟರ ಮಟ್ಟಿಗೆ ಇಂಜಿನಿಯರ್ ಗಳು ತಮ್ಮ ಕುಸುರಿಯ ಧಾರೆ ಎರೆದಿದ್ದಾರೆ. ಭೂಮಿಯ ಆಳದಲ್ಲಿರುವ ಕೇಬಲ್, ಕೊಳವೆ ಮಾರ್ಗಗಳು ಕಾಂಕ್ರಿಟ್ ನಲ್ಲಿ ಹೂತು ಹೋಗಿವೆ. ಪೈಪ್ ಮಾರ್ಗ ಎಲ್ಲಿವೆ ಎಂದು ಹುಡುಕಾಡಿಕೊಂಡು ರಸ್ತೆ ಅಗೆಯಲಾಗುತ್ತದೆ.ಸಾಮಾನ್ಯವಾಗಿ ಸಿಸಿ ರಸ್ತೆಯನ್ನು ಬ್ಲೇಡ್ ಮೂಲಕ ಕತ್ತರಿಸಲಾಗುತ್ತದೆ. ಅಗೆಯುವ ಉಸಾಬರಿಗೆ ಹೋಗುವುದಿಲ್ಲ. ಚಿತ್ರದುರ್ಗದಲ್ಲಿ ಮಾತ್ರ ಟ್ರಾಕ್ಟರ್ ಹ್ಯಾಮರ್ ಬಳಸಿ ಮನಸೋ ಇಚ್ಚೆ ರಸ್ತೆ ಕುಟ್ಟಿ ಪುಡಿ ಮಾಡಿ ತೆಗೆಯಲಾಗುತ್ತದೆ. ಈ ರೀತಿ ಅಗೆದ ರಸ್ತೆಗೆ ಮರಳಿ ಕಾಂಕ್ರಿಟ್ ತುಂಬಿ ಮೊದಲಿನಂತೆ ಇರುವ ಹಾಗೆ ನೋಡಿಕೊಳ್ಳಬೇಕು. ಇಲ್ಲಿ ಮಾತ್ರ ರಸ್ತೆ ಪುನರ್ ನಿರ್ಮಿಸುವ ಕೆಲಸ ನಡೆದಿಲ್ಲ. ಯಾರು ಬೇಕಾದರೂ ಮನಸೋ ಇಚ್ಚೆ ರಸ್ತೆ ಅಗೆಯಬಹುದಾಗಿದೆ. ಕನಿಷ್ಠ ವಿಚಾರಿಸುವ, ಪರಿಶೀಲಿಸುವ, ಯಾಕೆ ಅಗೆಯುತ್ತೀರ ಎಂದು ಕೇಳುವ ಆಡಳಿತ ವ್ಯವಸ್ಥೆ ಇದ್ದಂತಿಲ್ಲ.ಚಿತ್ರದುರ್ಗದ ಮದಕರಿ ನಾಯಕ ಪ್ರತಿಮೆ ವೃತ್ತದಲ್ಲಿಯಂತೂ ಸಿಸಿ ರಸ್ತೆ ಕುಟ್ಟಿ ಪುಡಿ ಮಾಡಿದ ಕಾಂಕ್ರಿಟ್ ರಾಶಿಯೇ ಬಿದ್ದಿದೆ. ಇಡೀ ನಗರದ ತುಂಬಾ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ಕೆಲ ಕಂಪನಿಗಳು ಸಿಸಿ ರಸ್ತೆ ಅಗೆಯುತ್ತಿದ್ದಾರೆ. ಇಂತಹುಗಳ ಮೇಲೆ ನಿಗಾವಹಿಸಲು ನಗರಸಭೆ ಅಧಿಕಾರಿಗಳಿಗೆ ಪುರಸೊತ್ತು ಇಲ್ಲದಂತಾಗಿದೆ.