ಸಾರಾಂಶ
ನಾಗಮಂಗಲ: ಮದ್ಯಪಾನ ವ್ಯಸನಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜೊತೆಗೆ ಕುಟುಂಬಗಳನ್ನು ಸಹ ಸರಿಪಡಿಸುವ ಕಾಯಕದಲ್ಲಿ ನಿರತವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಅವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ಪಾನಮುಕ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಅತ್ಯಂತ ಬಡವರು ಹೆಚ್ಚು ಕುಡುಕರಾಗುವ ಮೂಲಕ ಅವರ ಆರೋಗ್ಯ ಮತ್ತು ಕುಟುಂಬದ ಜೀವನಗಳು ಹಾಳಾಗುತ್ತಿವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೂರಾರು ಶಿಬಿರಗಳನ್ನು ಮಾಡಿ ಮದ್ಯವ್ಯಸನಿಗಳನ್ನು ಕರೆತಂದು ಚಟ ಬಿಡಿಸುವ ಕಾರ್ಯ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.
ವೇದಿಕೆ ಜಿಲ್ಲಾಧ್ಯಕ್ಷ ಕೊಣನೂರು ಹನುಮಂತಯ್ಯ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜನಜಾಗೃತಿ, ಸದಸ್ಯರು ಮತ್ತು ಪಾನದಿಂದ ಮುಕ್ತರಾದ ಶಿಭಿರಾರ್ಥಿಗಳು ಪಾನ ವಿರೋಧಿ ಹಾಗೂ ಮದ್ಯಪಾನಕ್ಕೆ ಧಿಕ್ಕಾರ ಎಂಬಿತ್ಯಾದಿ ನಾಮ ಫಲಕಗಳನ್ನು ಹಿಡಿದು ಜಾಥಾ ನಡೆಸುವ ಮೂಲಕ ಜನಜಾಗೃತಿ ಅರಿವು ಮೂಡಿಸಿದರು.ವೇದಿಕೆಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗಣ್ಯರು ಪೂಜೆ ಸಲ್ಲಿಸಿದರು. ನಂತರ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಹಾಗೂ ಡಾ.ವೀರೇಂದ್ರಹೆಗ್ಡೆ ಅವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸಲಾಯಿತು. ಪಾನ ಮುಕ್ತರು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಬೆಂಗಳೂರು ಗಾಂಧಿಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಶ್ರೀಕಂಠಸ್ವಾಮಿ, ಕೋಶಾಧಿಕಾರಿ ಚಂದ್ರು, ಸದಸ್ಯರಾದ ನಂದೀಶ್, ಅಣೇಚನ್ನಾಪುರ ಮಂಜೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಪುರಸಭೆ ಸದಸ್ಯ ಅಲೀ ಅನ್ಸರ್ ಪಾಷ, ತಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ದಿವಾಕರ್, ಮುಖಂಡರಾದ ನರಸಿಂಹಮೂರ್ತಿ, ರಮೇಶ್ ಸೇರಿದಂತೆ ಇತರರಿದ್ದರು.