ಸಾರಾಂಶ
ಕನ್ನಡ ಪ್ರಭ ವಾರ್ತೆ ತಿಪಟೂರು
ಮಹಾತ್ಮ ಗಾಂಧಿ ತತ್ವಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಸರ್ವೋದಯ ಮಂಡಲವು ವಿದ್ಯಾರ್ಥಿ, ಯುವಜನರಲ್ಲಿ ಗಾಂಧಿ ಚಿಂತನೆಗಳನ್ನು ಪುನಶ್ಚೇತಗೊಳಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ತಾಲೂಕಿನ ಕೋಟನಾಯಕಹಳ್ಳಿಯ ಶ್ರೀ ರುದ್ರಮುನಿ ಸ್ವಾಮೀಜಿ ರೂರಲ್ ಎಜುಕೇಷನ್ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಸರ್ವೋದಯ ಮಂಡಲದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸರ್ವೋದಯ ಮಂಡಲ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರು ದೇಶವನ್ನು ಸ್ವಾತಂತ್ರ್ಯವನ್ನಾಗಿಸಲು ಅಹಿಂಸೆಯ ಹಾದಿ ಹಿಡಿದು, ಉಪವಾಸ ಸತ್ಯಾಗ್ರಹದಂತ ಕಾರ್ಯಕ್ರಮಗಳ ಮೂಲಕ ಬ್ರಿಟೀಷರನ್ನೆ ಎಚ್ಚರಿಸಿದರು. ಸಮಾಜದಲ್ಲಿದ್ದ ವರ್ಣಬೇದ ನೀತಿ, ಅಸ್ಪೃಶ್ಯತೆ, ಜಾತೀಯತೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ನೊಂದವರಿಗೆ ನ್ಯಾಯ ದೊರಕಿಸಿಕೊಡುತ್ತಿದ್ದರು ಎಂದರು. ಸಮಾಜ ಸೇವಕ ಲೋಕೇಶ್ವರ ಮಾತನಾಡಿ, ವಿಶ್ವದ ಪ್ರಚಲಿತ ಸಮಸ್ಯೆಗಳಿಗೆ ಗಾಂಧಿವಾದವೇ ಪರಿಹಾರವಾಗಿದ್ದು ಕಾನೂನು, ಶಸ್ತ್ರಗಳಿಂದ ಗೆಲ್ಲುತ್ತೇವೆಂಬುದು ಭ್ರಮೆ ಎಂದರು.ಮಂಡಲದ ನಿಕಟಪೂರ್ವ ರಾಜ್ಯಾಧ್ಯಕ್ಷ ತೊಂಡೋಟಿ ನರಸಿಂಹಯ್ಯ ಮಾತನಾಡಿ, ಗಾಂಧಿ ಚಿಂತನೆಗಳು ನಾಡಿನ ಉತ್ತಮ ಭವಿಷ್ಯಕ್ಕೆ ಪೂರಕವಾಗಿವೆ ಎಂದರು. ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಗಾಂಧೀಜಿಯವರು ಗ್ರಾಮ ಸ್ವರಾಜ್ಯ ನೀತಿಯನ್ನು ಪ್ರತಿಪಾದಿಸಿದ್ದು ಹಳ್ಳಿಗರ ನಾಡು ಭಾರತ ಕೃಷಿ, ಗ್ರಾಮ ಕೈಗಾರಿಕೆಗಳ ಮೂಲಕ ಸ್ವಾವಲಂಬನೆ ಸಾಧಿಸಬೇಕೆಂದು ಕನಸು ಕಂಡಿದ್ದರು ಎಂದರು. ತಾಲೂಕು ಅಧ್ಯಕ್ಷೆ ಶೋಭಾ ಜಯದೇವ್ ಮಾತನಾಡಿ, ಗಾಂಧಿಜೀಯವರ ಚಿಂತನೆಗಳು ಮಕ್ಕಳಲ್ಲಿ ಪ್ರಚುರಪಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಗಾಂಧಿವಾದಿ ಮಾರನಗೆರೆಯ ಶಿವಮ್ಮ, ಸಾವಯವ ಕೃಷಿಕರಾದ ಯಶೋಧ, ನೈಸರ್ಗಿಕ ಕೃಷಿಕ ಬೀರಸಂದ್ರ ಮೋಹನ್‌ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಶೋಭಾ ಜಯದೇವ್ ಬರೆದಿರುವ ’ಮಡಿದರೂ ಮರೆಯಲಾಗದವರು’ ಪುಸ್ತಕವನ್ನು ಶಾಸಕ ಕೆ. ಷಡಕ್ಷರಿ ಬಿಡುಗಡೆಗೊಳಿಸಿದರು. ನೂರಾರು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಾಂಧಿ ಬಗೆಗಿನ ಪುಸ್ತಕ ನೀಡಲಾಯಿತು. ಮಕ್ಕಳು, ಹಿರಿಯರಿಂದ ಕನ್ನಡ ಗೀತ ಗಾಯನ ಸ್ಪರ್ಧೆ ನಡೆಯಿತು.
ಸರ್ವೋದಯ ಮಂಡಲ ರಾಜ್ಯಾಧ್ಯಕ್ಷ ಎಚ್.ಎಸ್. ಸುರೇಶ್, ಯ.ಚಿ. ದೊಡ್ಯಯ್ಯ, ತುರುವೇಕೆರೆ ಅಧ್ಯಕ್ಷ ವೇಣು, ಗೌರವಾಧ್ಯಕ್ಷ ಡಿ.ಎಸ್. ಮರುಳಪ್ಪ, ಉಪಾಧ್ಯಕ್ಷ ಕೆ.ಎಂ. ರಾಜಣ್ಣ, ಪ್ರಧಾನ ಕಾರ್ಯದರ್ಶಿ ಓಂಕಾರಮೂರ್ತಿ, ಖಜಾಂಚಿ ನಂ. ಶಿವಗಂಗಪ್ಪ, ಸಹ ಕಾರ್ಯದರ್ಶಿ ಪ್ರಸನ್ನಕುಮಾರ್, ಸಂಘಟನಾ ಕಾರ್ಯದರ್ಶಿ ಎಚ್.ಎಸ್. ಮಂಜಪ್ಪ, ನಿರ್ದೇಶಕ ಸೋಮಶೇಖರ್, ಎಸ್‌ವಿಪಿ ಸಂಸ್ಥೆಯ ಎಸ್.ಕೆ. ರಾಜಶೇಖರ್, ಕೊಬ್ಬರಿ ವರ್ತಕ ಪರಮಶಿವಯ್ಯ, ಕಸಾಪ ಅಧ್ಯಕ್ಷ ಬಸವರಾಜಪ್ಪ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಶಸಾಪ ಅಧ್ಯಕ್ಷ ಪಿ.ಆರ್. ಗುರುಸ್ವಾಮಿ, ವಿ.ಎನ್. ಮಹದೇವಯ್ಯ, ತನ್ವೀರ್ ಷೇಕ್, ನಿರಂಜನ್ ಮತ್ತಿತರರಿದ್ದರು.