ಸಾರಾಂಶ
ಗದಗ: 101 ದೇವಾಲಯ, 101 ಕಲ್ಯಾಣಿಗಳನ್ನು ಹೊಂದಿರುವ ಇತಿಹಾಸ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಜೈನ ಬಸದಿಗಳನ್ನು ಅಭಿವೃದ್ಧಿ ಮಾಡುವ ಜತೆಗೆ ಅವುಗಳ ಸಂರಕ್ಷಣೆಗೆ ಕಂಕಣ ಬದ್ಧರಾಗಿ ನಿಂತಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾಚಾರ್ಯ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಪ್ರಾಚೀನ ಸ್ಮಾರಕಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಈ ಭಾಗದಲ್ಲಿ ಹೆಚ್ಚು ಪ್ರಾಚೀನ ಸ್ಮಾರಕಗಳಿವೆ ಎಂಬುದು ಇತಿಹಾಸದ ಪುಸ್ತಕಗಳಿಂದ ತಿಳಿದಿದ್ದು, ಪ್ರವಾಸೋದ್ಯಮ ಇಲಾಖೆಯು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆಯು ಅವುಗಳ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.ಈ ಯುಗದಲ್ಲಿ 6 ಕಾಲಚಕ್ರಗಳು ಬರುತ್ತವೆ, ಅದರಂತೆ ಇದು ಪಂಚಮಕಾಲವಾಗಿದೆ. ಇಲ್ಲಿರುವ ಜೈನ ಬಸದಿಯಲ್ಲಿ ನೇಮಿನಾಥ ತೀರ್ಥಂಕರ ಮೂರ್ತಿಯಿದೆ. ಪ್ರಾಚೀನ ಕಾಲದಿಂದಲೂ 24 ತೀರ್ಥಂಕರರು ಆಳಿದ್ದು ಕೊನೆಯದಾಗಿ ಭಗವಾನ ಮಹಾವೀರರು ರಾಜರಾಗಿದ್ದರು. ಕೋಟ್ಯಂತರ ವರ್ಷದಿಂದ ಜೈನ ಸಂಸ್ಕೃತಿ ಪರಂಪರೆ ಇದೆ. ಭೂತ ಕಾಲದಿಂದಲೂ ಭವಿಷ್ಯತ್ ಕಾಲದವರೆಗೂ 24 ತೀರ್ಥಂಕರರು ಇದ್ದೇ ಇರುತ್ತಾರೆ ಎಂದು ಜೈನ್ ಸಿದ್ಧಾಂತಗಳು ಹೇಳುತ್ತವೆ. ಇದಕ್ಕೆ ಉದಾಹರಣೆಗೆ ಇಲ್ಲಿ ದೊರೆತ ಅವಶೇಷಗಳಲ್ಲಿ ಜೈನ ಶಾಸನಗಳು, ಮೂರ್ತಿಗಳು, ಶಿಲ್ಪ ಕಲೆಗಳೆ ಕಾರಣವಾಗಿದ್ದು ಇಡೀ ದೇಶಾದ್ಯಂತ ಜೈನ ಮಂದಿರಗಳು, ಸ್ಮಾರಕಗಳು, ಕಾಣಸಿಗುತ್ತವೆ. ಭಾರತವು ಹಿಂದಿನಿಂದಲೂ ಸಂಪದ್ಭರಿತ ನಾಡಾಗಿದ್ದು ಇಲ್ಲಿಯ ಶಿಲ್ಪ ಕಲೆ ಸಂಸ್ಕೃತಿಯು ಜೈನ ರಾಜರು ನೆಲೆಯಾಗಿತ್ತು. ವಿದೇಶಿಗರು ಈ ಜೈನ ಧರ್ಮದ ಮೇಲೆ ಅಕ್ರಮಣ ಮಾಡಿ ನಾಶ ಮಾಡಿದ್ದಾರೆ. ಇನ್ನೂ ಕನ್ನಡ ಸಾಹಿತ್ಯದಲ್ಲಿ ಪಂಪ, ರನ್ನ,ಪೊನ್ನ ಮತ್ತು ಚನ್ನ ಕವಿಗಳು ಕನ್ನಡಕ್ಕಾಗಿ ತಮ್ಮ ಅಮೋಘ ಕೊಡುಗೆಯನ್ನು ನೀಡಿದ್ದು ಜೈನರ ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಳೆದ ವಾರ ಶ್ರವಣ ಬೆಳಗೊಳಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವರು ನಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿಕ್ಕೆ ಕಾಳಜಿಯನ್ನು ಹೊಂದಿದ್ದು, ಪ್ರಾಚೀನ ಸ್ಮಾರಕಗಳಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು.ಬ್ರಹ್ಮಜಿನಾಲಯ, ನಾಗನಾಥ, ನನ್ನೇಶ್ವರ, ಕಾಶಿ ವಿಶ್ವನಾಥ ಹಾಗೂ ಮುಸ್ಕಿನಬಾವಿಯಲ್ಲಿರುವ ಶಿಲ್ಪಕಲೆ ಹಾಗೂ ಪ್ರಾಚ್ಯಾವಶೇಷಗಳ ವಸ್ತು ಸಂಗ್ರಾಲಯವನ್ನು ವೀಕ್ಷಿಸಿದ ಶ್ರೀಗಳು ಶಿಲ್ಪಕಲೆಯ ಇತಿಹಾಸವನ್ನು ಇತಿಹಾಸ ತಜ್ಞ ಅ.ದ. ಕಟ್ಟಿಮನಿ ಅವರಿಂದ ತಿಳಿದುಕೊಂಡು ಸಂತಸಪಟ್ಟರು.
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ಇಲ್ಲಿಯ ಅಭಿವೃದ್ಧಿಪಡಿಸುತ್ತಿರುವ ಸ್ಮಾರಕಗಳು, ಪ್ರಾಚ್ಯಾವಶೇಷಗಳು ಹಾಗೂ ಉತ್ಕನನದ ಕುರಿತು ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಚಾರುಕೀರ್ತಿ ಭಟ್ಟಾಚಾರ್ಯರು ಹಾಗೂ ವರೂರು ಕ್ಷೇತ್ರದ ಅಮಿನಬಾವಿಯ ಧರ್ಮಸೇನಾ ಪಟ್ಟಾಧ್ಯಕ್ಷರನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಸನ್ಮಾನಿಸಿ ಗೌರವಿಸಿದರು.ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೊಟ್ರೇಶ ವಿಭೂತಿ, ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಬಿ.ಎ. ಕುಲಕರ್ಣಿ, ಅಜ್ಜಪ್ಪಗೌಡ ಪಾಟೀಲ, ಗ್ರಾಪಂ ಮಾಜಿ ಸದಸ್ಯ ಅಣ್ಣಪ್ಪ ಬಸ್ತಿ ಇದ್ದರು.