ದೇಶ ಸೇವೆ ಹಾಗೂ ಸಮಾಜದ ಹಿತಚಿಂತನೆಯನ್ನೇ ಮೂಲ ಧ್ಯೇಯವನ್ನಾಗಿಸಿಕೊಂಡು ಮುನ್ನಡೆಯುತ್ತಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯವೈಖರಿ ಅತ್ಯಂತ ಶ್ಲಾಘನೀಯ.
ಕನ್ನಡಪ್ರಭ ವಾರ್ತೆ ಮುಂಡರಗಿ
ದೇಶ ಸೇವೆ ಹಾಗೂ ಸಮಾಜದ ಹಿತಚಿಂತನೆಯನ್ನೇ ಮೂಲ ಧ್ಯೇಯವನ್ನಾಗಿಸಿಕೊಂಡು ಮುನ್ನಡೆಯುತ್ತಿರುವ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯವೈಖರಿ ಅತ್ಯಂತ ಶ್ಲಾಘನೀಯ ಎಂದು ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ತಿಳಿಸಿದರು.ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ರಾಷ್ಟ್ರೋತ್ಥಾನ ಬಳಗ ಮುಂಡರಗಿ ಇವುಗಳ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರು ಹಾಗೂ ರಾಷ್ಟ್ರೋತ್ಥಾನ ಪರಿಷತ್‌ನ ರೂವಾರಿ ದಿ.ಮೈ. ಚ. ಜಯದೇವರ ಕುರಿತ ಬದುಕು ನೆನಪು ಹಾಗೂ ನಾಡೋಜ ಡಾ. ಎಸ್.ಆರ್. ರಾಮಸ್ವಾಮಿಯವರ ಇತಿಹಾಸದ ಸೆರಗು ಪರಾಮರ್ಶ ಪ್ರಬಂಧಗಳು ಮೂರು ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಷ್ಟ್ರೋತ್ಥಾನ ಪರಿಷತ್ ಯಾವುದೇ ಸ್ವಪ್ರತಿಷ್ಠೆ ಅಥವಾ ಸ್ವಾರ್ಥವಿಲ್ಲದೆ, ಸಂಪೂರ್ಣ ಸಮರ್ಪಣಾ ಭಾವದಿಂದ ನಾಡು-ನುಡಿ ಹಾಗೂ ದೇಶದ ಒಳಿತಿಗಾಗಿ ಸತತವಾಗಿ ಶ್ರಮಿಸುತ್ತಿದೆ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರು ನಿಸ್ವಾರ್ಥ ಸೇವೆಯನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಈ ಸಂಸ್ಥೆಯು ಇತಿಹಾಸದ ಸತ್ಯ ಘಟನೆಗಳನ್ನು ಹಾಗೂ ದೇಶದ ಪರಂಪರೆಯನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇತಿಹಾಸವನ್ನು ತೆರೆದಿಡುವ ಸಾಹಿತ್ಯವನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದ ಶ್ರೀಗಳು, ಇಲ್ಲಿ ಬಿಡುಗಡೆಯಾದ ಈ ಮೂರು ಗ್ರಂಥಗಳು ಕೇವಲ ಸಾಹಿತ್ಯ ಕೃತಿಗಳಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಸ್ಫೂರ್ತಿ, ಜ್ಞಾನ ಮತ್ತು ಸದಾಚಾರವನ್ನು ಕಲಿಸುವಂತ ಶ್ರೇಷ್ಠ ಹೊತ್ತಿಗೆಗಳಾಗಿವೆ. ರಾಷ್ಟ್ರೋತ್ಥಾನವು ಕೇವಲ ಗ್ರಂಥ ಪ್ರಕಟಣೆಯಷ್ಟೇ ಅಲ್ಲದೆ, ರಕ್ತದಾನ, ಆರೋಗ್ಯ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಸಮಾಜಮುಖಿ ಕಳಕಳಿಯಿಂದ ನಿರಂತರವಾಗಿ ತೊಡಗಿಸಿಕೊಂಡು ಆದರ್ಶಪ್ರಾಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿಜಯನಗರದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ದಿ.ಮೈ.ಚ.ಜಯದೇವ ಕುರಿತು ಮಾತನಾಡಿ, ಸಂಘವೇ ತನ್ನ ಮನೆ ಕುಟುಂಬ ಸಮಾಜ ಎಂದು ಭಾವಿಸಿ ತಮ್ಮ ಜೀವನ ಪರ್ಯಂತ ಸಂಘಕ್ಕಾಗಿ ಶ್ರಮಿಸಿ ಸಂಘದ ಏಳ್ಗೆಗೆ ಶ್ರಮಿಸಿಸದವರಲ್ಲಿ ಜಯದೇವ ಪ್ರಮುಖವಾಗಿ ನಿಲ್ಲುತ್ತಾರೆ. ಅವರ ನಿಸ್ವಾರ್ಥ ಸೇವೆ ದೇಶಪ್ರೇಮ ಇಂದು ಹೆಚ್ಚು ಪ್ರಸ್ತುತ ಮತ್ತು ಅನುಕರಣೀಯ ಎಂದರು.
ರಾಜ್ಯ ಸಂಕಲ್ಪ ಪ್ರಮುಖ ಯುವ ಬ್ರಿಗೇಡ್ ಕಿರಣ್ ರಾಮ್ ಡಾ. ಎಸ್.ಆರ್. ರಾಮಸ್ವಾಮಿ ಅವರ ಇತಿಹಾಸದ ಸೆರಗು ಪರಾಮರ್ಶಿತ ಪ್ರಬಂಧಗಳ ಕುರಿತು ಮಾತನಾಡಿ, ಇತಿಹಾಸ ಅರಿತರೆ ಮಾತ್ರ ನಮ್ಮ ಸಂಸ್ಕೃತಿ ನೆಲೆ, ಸಂಪ್ರದಾಯ ಕಲೆ ಮತ್ತು ರಾಷ್ಟ್ರಪ್ರೇಮದ ಪರಿಕಲ್ಪನೆ ಬರುತ್ತದೆ ಎಂದರು.ಗದಗ ಜಿಲ್ಲಾ ರಾಷ್ಟ್ರೋತ್ಥಾನ ಬಳಗದ ಸಂಚಾಲಕ ಹನುಮಂತ ಕಾಳೆ ಮಾತನಾಡಿದರು. ಆರ್‌ಎಸ್‌ಎಸ್ ತಾಲೂಕಾ ಸಂಚಾಲಕ ಸಂಜೀವ ರಿತ್ತಿ, ತಾಲೂಕಾ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಮಹೇಶ ಮೇಟಿ, ಸಹಸಂಚಾಲಕ ಶಿವು ನಾಡಗೌಡ್ರ ಇತರರಿದ್ದರು. ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ನಿರೂಪಿಸಿದರು.