ದೇಶದಲ್ಲಿ ಏಮ್ಸ್‌ಗಳ ಸಂಖ್ಯೆ 22ಕ್ಕೇರಿದರೆ, 751 ವೈದ್ಯಕೀಯ ಕಾಲೇಜುಗಳಿದ್ದು 1.37 ಲಕ್ಷ ಸೀಟುಗಳು ಲಭ್ಯವಿದೆ. ಈ ಮೂಲಕ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದ್ದು ಸಾಕಷ್ಟು ಪ್ರಗತಿಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ:
ಜಗತ್ತಿಗೆ ಭಾರತದ ವೈದ್ಯರ ಮೇಲೆ ಅಪಾರ ವಿಶ್ವಾಸವಿದ್ದು, ಪಾಶ್ಚಾತ್ಯ ದೇಶಗಳಲ್ಲಿ ಲೀಡಿಂಗ್ ವೈದ್ಯರು ಭಾರತೀಯರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ಗಬ್ಬೂರ ಕ್ರಾಸ್‌ನಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ (ಕಾಹೇರ್)ನಡಿ ನಿರ್ಮಿಸಿರುವ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ (ಜೆಜಿಎಂಎಂಎಂಸಿ) ನೂತನ ಶೈಕ್ಷಣಿಕ ಕಟ್ಟಡ, ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಕಾಲೇಜು ಮುಖಾಂತರ ಅವಳಿ ನಗರದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಮೂರಕ್ಕೇರಿದೆ ಎಂದರು.
ದೇಶದಲ್ಲಿ ಏಮ್ಸ್‌ಗಳ ಸಂಖ್ಯೆ 22ಕ್ಕೇರಿದರೆ, 751 ವೈದ್ಯಕೀಯ ಕಾಲೇಜುಗಳಿದ್ದು 1.37 ಲಕ್ಷ ಸೀಟುಗಳು ಲಭ್ಯವಿದೆ. ಈ ಮೂಲಕ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದ್ದು ಸಾಕಷ್ಟು ಪ್ರಗತಿಯಾಗುತ್ತಿದೆ ಎಂದು ತಿಳಿಸಿದರು.ಹಲವು ದೇಶಗಳು ವಯಸ್ಸಾದ ಸ್ಥಿತಿಯಲ್ಲಿ ಇದ್ದರೆ, ಭಾರತ ಯೌವ್ವನದಲ್ಲಿದೆ. ಹೀಗಾಗಿ ಜಗತ್ತಿನ ಫಾರ್ಮಾ ಹಬ್ ಆಗಿದೆ ಎಂದ ಜೋಶಿ, ಸೆಮಿ ಕಂಡಕ್ಟರ್ ಮೂಲಕ ಚಿಪ್ ತಯಾರಿಸುವ ವರೆಗೂ ಭಾರತ ಸ್ವಾವಲಂಬಿಯಾಗಿದ್ದು ಜಗತ್ತಿನ ಆರ್ಥಿಕತೆಯಲ್ಲಿ ಭಾರತ ಬಹುದೊಡ್ಡ ಸಾಧನೆ ಮಾಡಿದೆ ಎಂದರು.
ನಕ್ಸಲಿಸಂ ಮುಕ್ತ:ದೇಶದ 126 ಜಿಲ್ಲೆಗಳಲ್ಲಿ ಇದ್ದ ನಕ್ಸಲಿಸಂನ್ನು ಕೇಂದ್ರ ಸರ್ಕಾರ ಹತ್ತಿಕ್ಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2026ರ ಮಾರ್ಚ್‌ನೊಳಗೆ ದೇಶವನ್ನು ನಕ್ಸಲಿಸಂ ಮುಕ್ತ ಮಾಡುವುದಾಗಿ ಹೇಳಿದ್ದರು. ಅದರಂತೆ ಮಾಡಿ ತೋರಿಸಿದ್ದಾರೆ ಎಂದು ಶ್ಲಾಘಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಕರ್ನಾಟಕ ಹೆಲ್ತ್ ಹಬ್ ಆಗುತ್ತಿದೆ. ಇದಕ್ಕೆ ಕೆಎಲ್‌ಇ ಸೇರಿದಂತೆ ಖಾಸಗಿ ಸಂಸ್ಥೆಗಳ ಕೊಡುಗೆಯೂ ಸಾಕಷ್ಟಿದೆ. ದೇಶದಲ್ಲೇ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳಿರುವುದು ಕರ್ನಾಟಕದಲ್ಲೇ ಎಂದ ಅವರು, ಕರ್ನಾಟಕದ ಪ್ರತಿಭಾವಂತರನ್ನು ಜಗತ್ತು ನೋಡುತ್ತಿದೆ. ಜಗತ್ತಿಗೆ ಪ್ರತಿಭಾವಂತರನ್ನೇ ನೀಡುತ್ತಿರುವ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ ಎಂದರು. ಕರ್ನಾಟಕದ ಬೆಳವಣಿಗೆಯಲ್ಲಿ ಕೆಎಲ್‌ಇ ಪಾತ್ರ ದೊಡ್ಡದಿದ್ದು 34 ಸಂಸ್ಥೆಗಳು ಇದ್ದು 320 ಸ್ಥಾನಗಳಿಗೆ ಹೆಚ್ಚಿಸಿದ ಕೀರ್ತಿ ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ ಎಂದರು.ಮೂರುಸಾವಿರ ಮಠದ ಶ್ರೀಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಹೇರ್‌ನ ಕುಲಪತಿ ಡಾ. ಪ್ರಭಾಕರ ಕೋರೆ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಕೆಎಲ್‌ಇ ಅಧ್ಯಕ್ಷ ಮಹಾಂತೇಶ ಕೌಜಲಗಿ, ಕೆಎಲ್‌ಇ ಆಡಳಿತ ಮಂಡಳಿ ಚೇರಮನ್ ಅಮಿತ್ ಕೋರೆ, ಶಂಕರಣ್ಣ ಮುನವಳ್ಳಿ ಸೇರಿದಂತೆ ಹಲವರಿದ್ದರು.ಕರ್ನಾಟಕ ಹೆಲ್ತ್ ಹಬ್ ಆಗುತ್ತಿದೆ
ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ ಹಾಗೂ 1,200 ಹಾಸಿಗೆಗಳ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಂಡಿತು. ಕರ್ನಾಟಕದ ಏಳ್ಗೆಯಲ್ಲಿ ಕೆಎಲ್‌ಇ ಸಂಸ್ಥೆಯ ಕೊಡುಗೆಯನ್ನು ಹಾಡಿಹೊಗಳಿದ ಗಣ್ಯರು, ಕರ್ನಾಟಕ ಹೆಲ್ತ್ ಹಬ್ ಆಗುತ್ತಿದೆ ಎಂದು ಬಣ್ಣಿಸಿದರು.ಮೂರುಸಾವಿರ ಮಠದಿಂದ ದಾನವಾಗಿ ನೀಡಲಾದ ಭೂಮಿಯಲ್ಲಿ 50 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಸಮಗ್ರ ವೈದ್ಯಕೀಯ ಕ್ಯಾಂಪಸ್‌ಗೆ ಸುಮಾರು ₹ 700 ಕೋಟಿ ಹೂಡಿಕೆ ಮಾಡಲಾಗಿದೆ. 30 ಲಕ್ಷ ಚದರ ಅಡಿಗೂ ಅಧಿಕ ನಿರ್ಮಿತ ಪ್ರದೇಶ ಹೊಂದಿರುವ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಶಿಕ್ಷಣ, ಅತ್ಯಾಧುನಿಕ ಚಿಕಿತ್ಸೆ ಹಾಗೂ ಸಂಶೋಧನೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರ, ಹಚ್ಚ ಹಸಿರು ಕ್ಯಾಂಪಸ್ ಹೊಂದಿರುವ ಕೆಎಲ್‌ಇ ಮೆಡಿಕಲ್ ಕಾಲೇಜು ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳ ಜನರಿಗೆ ಆಶಾಕಿರಣದಂತಾಗಿದೆ.