ಗೋಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗುತೇಕರ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಎರಡು ರಾಜ್ಯೋತ್ಸವ ಪ್ರಶಸ್ತಿಗಳ ಖುಷಿ ಒಂದೆಡೆಯಾದರೆ. ಹಿಂಸಾರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ, ಶಾಸಕರ ಎಚ್.ವೈ. ಮೇಟಿ, ಅನ್ನದಾನೇಶ್ವರ ಸೇರಿ ಗಣ್ಯರ ಅಗಲಿಕೆಗೆ 2025ರಲ್ಲಿ ಜಿಲ್ಲೆ ಸಾಕ್ಷಿಯಾಯಿತು.
ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆಗೋಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗುತೇಕರ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಎರಡು ರಾಜ್ಯೋತ್ಸವ ಪ್ರಶಸ್ತಿಗಳ ಖುಷಿ ಒಂದೆಡೆಯಾದರೆ. ಹಿಂಸಾರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ, ಶಾಸಕರ ಎಚ್.ವೈ. ಮೇಟಿ, ಅನ್ನದಾನೇಶ್ವರ ಸೇರಿ ಗಣ್ಯರ ಅಗಲಿಕೆಗೆ 2025ರಲ್ಲಿ ಜಿಲ್ಲೆ ಸಾಕ್ಷಿಯಾಯಿತು. ಯುಕೆಪಿಗೆ ಮುಳುಗಡೆಗೊಳ್ಳುವ ಜಮೀನುಗಳಿಗೆ ಸರ್ಕಾರ ಬೆಲೆ ಘೋಷಿಸಿದ್ದು, ವಿಶೇಷವಾಗಿತ್ತು.
ಹೊಸ ವರ್ಷ ಆರಂಭದಲ್ಲೇ ವೆಂಕಪ್ಪ ಅಂಬಾಜಿ ಸುಗುತೇಕರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಗೊಂಡಿತು. ಕುರಿಗಳ್ಳತನಕ್ಕೆ ಬಂದಿದ್ದ ಕಳ್ಳರು ಕುರಿಗಾಹಿಯನ್ನು ಹತ್ಯೆ ಮಾಡಿದಾಗ ದೇಶದಲ್ಲೇ ಮೊದಲ ಬಾರಿಗೆ ಕುರಿಗಾಹಿಗಳಿಗೆ ಜಿಲ್ಲಾ ಪೊಲೀಸರು ವಿಶೇಷ ಬಂದೂಕು ತರಬೇತಿ ನೀಡುವುದರ ಮೂಲಕ ಗಮನ ಸೆಳೆದರು.ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಅವರು ಸೇಬು ಹಣ್ಣು ಬೆಳೆಯುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ನಲ್ಲಿ ಮೆಚ್ಚುಗೆಗೆ ಪಾತ್ರರಾದಾಗ ದೇಶವೇ ಜಿಲ್ಲೆ ಕಡೆಗೆ ತಿರುಗಿ ನೋಡುವಂತೆ ಮಾಡಿತು.
ಯುಕೆಪಿಗೆ ಬಂಪರ್: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಬಾಧಿತವಾಗುವ ಜಮೀನುಗಳಿಗೆ ಸರ್ಕಾರ ಒಣಬೇಸಾಯಕ್ಕೆ₹ 30 ಲಕ್ಷ ಹಾಗೂ ನೀರಾವರಿಗೆ ಜಮೀನು ಪ್ರತಿ ಎಕರೆಗೆ ₹40 ಲಕ್ಷ ಘೋಷಿಸುವುದರ ಮೂಲಕ ಬಹುದಿನಗಳ ರೈತರ ಬೇಡಿಕೆಗೆ ಸ್ಪಂದಿಸಿತು. ಅಲ್ಲದೆ, ಬರುವ ಬಜೆಟ್‌ನಿಂದ ಮುಂದಿನ ಐದು ವರ್ಷದ ಬಜೆಟ್‌ನಲ್ಲಿ ಯೋಜನೆ ಪೂರ್ಣಗೊಳಿಸುವ ಬದ್ಧತೆ ಘೋಷಿಸಿತು. ಇದನ್ನು ಹೋರಾಟ ಸಮಿತಿ, ರೈತ ಪ್ರತಿನಿಧಿಗಳು ಸ್ವಾಗತಿಸಿದ್ದು ವಿಶೇಷ. ಆದರೆ ಪುನರ್ವಸತಿಗಾಗಿ ಜಮೀನು ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರದ ಹಿಂದೇಟು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗೊಂದಲಕಾರಿ ಹೇಳಿಕೆಗಳು ಜಮೀನು ಕಳೆದುಕೊಂಡ ರೈತರ ಭವಿಷ್ಯ ಅಡಕತ್ತರಿಯಲ್ಲಿ ಇರಿಸಿತು.ಅಗಲಿದ ಗಣ್ಯರು: ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಅವರು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ಬಂಡಿಗಣಿಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಸಹ ತಮ್ಮ ಮಠದಲ್ಲಿ ಭಾವೈಕ್ಯತಾ ಸಮಾವೇಶ ಆಯೋಜಿಸಿ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಸಿಎಂ ಸಿದ್ದರಾಮಯ್ಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮುಂದೆ ಶ್ರೀಗಳು ಅಗಲಿದ್ದು, ಲಕ್ಷಾಂತರ ಭಕ್ತರು ಕಣ್ಣೀರಿಡುವಂತೆ ಮಾಡಿತು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಸಾಗರ ತೆಕ್ಕಣ್ಣವರ ಅವರು ಕೆರೂರ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟರು.
ಅಪಘಾತಕ್ಕೆ ಪ್ರಾಣಬಿಟ್ಟ ಹಲವರು: ಜಮಖಂಡಿ ತಾಲೂಕಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಬಳಿ ಸಂಭವಿಸಿದ ಅಪಘಾತದಲ್ಲಿ ನಾಲ್ವರ ಸಾವು, ಕೆರೂರ ಬಳಿ ಮೂವರ ಸಾವು, ಕಲಬುರಗಿ ಜಿಲ್ಲೆ ಸೊನ್ನ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ನಗರದ ಮೂವರು ಮೃತಪಟ್ಟಿದ್ದರು. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ 50ಕ್ಕೂ ಅಧಿಕ ಜನರು ಈ ಸಾಲಿನಲ್ಲಿ ಜೀವಬಿಟ್ಟಿದ್ದಾರೆ. ಇಳಕಲ್ಲ ನಗರದಲ್ಲಿ ಹುಚ್ಚುನಾಯಿ ಕಡಿತದಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದದ ಅಗ್ನಿಶಾಮಕ ದಳ ಸಿಬ್ಬಂದಿಯೊಬ್ಬರು ಜೀವ ಬಿಟ್ಟಿದ್ದರು. ವರ್ಷವಿಡೀ ಅಲ್ಲಲ್ಲಿ ನಾಯಿಕಡಿತದ ಪ್ರಕರಣಗಳು ದಾಖಲಾದವು.ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅಸ್ತು : ದಶಕಗಳ ಕನಸಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿತು. ಕಾಲೇಜು ಸ್ಥಾಪನೆಗೆ ಬೇಕಾಗಿರುವ ಅಂದಾಜು ₹450 ಕೋಟಿ ರಾಜೀವ ಗಾಂಧಿ ಆರೋಗ್ಯ ವಿವಿಯಲ್ಲಿ ಲಭ್ಯವಿರುವ ಅನುದಾನ ಬಳಸಿ ನಿರ್ಮಿಸುವ ತೀರ್ಮಾನ ಪ್ರಕಟಿಸಿತು. ಅದಕ್ಕಾಗಿ ಜಾಗ ಗುರುತಿಸಲಾಗಿದ್ದು, ಡಿಸೆಂಬರ್-ಜನವರಿಯಲ್ಲಿ ಶಂಕು ಸ್ಥಾಪನೆ ನಿರೀಕ್ಷೆಯಿತ್ತು. ಆದರೆ, ಶಾಸಕ ಮೇಟಿ ಅವರ ನಿಧನದಿಂದಾಗಿ ಕಾರ್ಯಕ್ರಮ ನಿಗದಿಯಾಗಬೇಕಿದೆ.
ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳ ಕಿರೀಟ: ಗೋಂದಳಿ ಕಲಾವಿದ ಅಂಬಾಜಿ ವೆಂಕಪ್ಪ ಸುಗುತೇಕರ ಅವರು ಪದ್ಮಶ್ರೀ ಪ್ರಶಸ್ತಿ ಮೂಲಕ ದೇಶದ ಗಮನ ಸೆಳೆದರು. ರಜತಶಿಲ್ಪಿ ನಾಗಲಿಂಗಪ್ಪ ಗಂಗಪ್ಪ ಗಂಗೂರ, ಕಾನೂನು ಕ್ಷೇತ್ರದಲ್ಲಿ ಬಿಹಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಮುರನಾಳದ ಗ್ರಾಮದ ಪವನಕುಮಾರ ಭಜಂತ್ರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸರ್ಕಾರ ಸತ್ಕರಿಸಿತು.ಎರಡು ಪ್ರತಿಷ್ಠಾನಗಳು ಅಸ್ತಿತ್ವಕ್ಕೆ: ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಹಾಗೂ ಕಂದಗಲ್ ಹಣಮಂತರಾಯರ ಹೆಸರಿನ ಪ್ರತಿಷ್ಠಾನಗಳನ್ನು ಸರ್ಕಾರ ಘೋಷಿಸುವುದರ ಮೂಲಕ ಇಬ್ಬರು ಮಹನೀಯರ ಕೊಡುಗೆಗಳನ್ನು ಸಾರಲು ಮುಂದಾಗಿರುವುದು ವಿಶೇಷ.
ಗಮನ ಸೆಳೆದ ರನ್ನ ಉತ್ಸವ: ಹತ್ತು ವರ್ಷಗಳಿಂದ ನಿಂತು ಹೋಗಿದ್ದ ಮುಧೋಳದ ರನ್ನ ಉತ್ಸವವನ್ನು ಫಬ್ರವರಿ ತಿಂಗಳಿನಲ್ಲಿ ಅದ್ಧೂರಿಯಾಗಿ ಸಂಘಟಿಸಲಾಯಿತು. ಸಚಿವ ಆರ್.ಬಿ. ತಿಮ್ಮಾಪೂರ ಅವರ ವಿಶೇಷ ಪ್ರಯತ್ನದ ಫಲವಾಗಿ ಮೂರು ದಿನಗಳ ಅದ್ಧೂರಿ ಉತ್ಸವ ಜಿಲ್ಲೆಯ ಕಲಾವಿದರಿಗೆ ವೇದಿಕೆ ನೀಡುವುದರೊಂದಿಗೆ ಜನರನ್ನು ರಂಜಿಸಿತು. ವರ್ಷದ ಕೊನೆಯಲ್ಲಿ ಚಾಲುಕ್ಯ ಉತ್ಸವಕ್ಕೂ ದಿನಾಂಕ ನಿಗದಿಯಾಗಿತ್ತಾದರೂ ಕಾರಣಾಂತರಗಳಿಂದ ಜನವರಿ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಕೂಡಲಸಂಗಮದಲ್ಲಿ ನಡೆದ ಬಸವಾದಿ ಶರಣರ ವೈಭವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು.ಮೈಲಾರಿ ಮೇಲೆ ಪೊಕ್ಸೋ ಕೇಸ್, ವಿಶೇಷ ಚೇತನಮಕ್ಕಳ ಮೇಲೆ ಹಲ್ಲೆ: ಖ್ಯಾತ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಕಾಯ್ದೆ ಅಡಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಪ್ರಕರಣ ದಾಖಲಾಯಿತು. ಆದರೆ ಸಂತ್ರಸ್ತ ಬಾಲಕಿ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದಿದೆ ಎಂದು ದೂರಿದ್ದರಿಂದ ಬಾಗಲಕೋಟೆಗೆ ಪ್ರಕರಣ ವರ್ಗಾವಣೆಗೊಂಡು ಇಲ್ಲಿನ ಪೊಲೀಸರು ಆತನನ್ನು ವಿಜಯಪುರ ಜಿಲ್ಲೆಯಲ್ಲಿ ಬಂಧಿಸಿ ಕರೆತಂದರು. ಬಾಗಲಕೋಟೆಯ ನವನಗರದಲ್ಲಿರುವ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಿಶೇಷ ವಸತಿಯುತ ಶಾಲೆಯ ಶಿಕ್ಷಕರು ಬುದ್ಧಿಮಾಂದ್ಯ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ರಾಜ್ಯಾದ್ಯಂತ ಸುದ್ದಿಯಾಯಿತು. ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಪಡಿತರ ಅಕ್ಕಿ ದಂಧೆ ಪತ್ರಕರ್ತ ಬಸವರಾಜ ಕಾನಗೊಂಡ ಎಂಬಾತನನ್ನು ಬಲಿಪಡೆಯಿತು.
ಪೀಠದಿಂದ ಸ್ವಾಮೀಜಿ ಉಚ್ಛಾಟನೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠಕ್ಕೆ ಸಂಬಂಧಿಸಿರುವ ಟ್ರಸ್ಟ್ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಉಚ್ಛಾಟಿಸುವ ನಿರ್ಣಯ ಪ್ರಕಟಿಸಿದ್ದು, ಪೀಠದ ವಿಚಾರವಾಗಿ ಶ್ರೀಗಳ ಭಕ್ತರು, ಕಾಶಪ್ಪನವರ ಬೆಂಬಲಿಗರ ಮೇಲೆ ಪರಸ್ಪರ ದೂರು ದಾಖಲು, ಸಮುದಾಯದ ನಾಯಕರ ಹೇಳಿಕೆ, ಪ್ರತಿ ಹೇಳಿಕೆಗಳು ಸಮಾಜದಲ್ಲಿ ಗೊಂದಲಮಯ ವಾತಾವರಣಕ್ಕೆ ಕಾರಣವಾಯಿತು.