ಸಾರಾಂಶ
ಶಿರಹಟ್ಟಿ: ಯುವ ಪೀಳಿಗೆ ದಾರಿ ತಪ್ಪುತ್ತಿದೆ. ತಂದೆ- ತಾಯಂದಿರು, ಪೋಷಕರು ಜಾಗೃತಿ ವಹಿಸಿ ಮಕ್ಕಳಿಗೆ ಮೌಲ್ಯಗಳನ್ನು ಬೋಧಿಸಿ, ಸಮಾಜದ ಮಾನವೀಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಪಿಎಸ್‌ಐ ಚನ್ನಯ್ಯ ದೇವೂರ ಕರೆ ನೀಡಿದರು. ಪಟ್ಟಣದ ಶ್ರೀ ಜಗದ್ಗುರು ಫಕೀರೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿರಹಟ್ಟಿ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ನಂತರ ಪಟ್ಟಣದ ನೆಹರು ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಮಾತನಾಡಿದರು. ಮಾದಕ ವಸ್ತುಗಳಿಗೆ ತುತ್ತಾಗುತ್ತಿರುವವರು ನಮ್ಮ ಭವ್ಯ ಭಾರತದ ಯುವಜನರು. ಅದರಲ್ಲೂ ಅತಿ ಹೆಚ್ಚು ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಪೀಳಿಗೆಯಾಗಿದ್ದು, ಇದರಿಂದ ಸಮಾಜದಲ್ಲಿ ಕ್ರೌರ್ಯ ಹೆಚ್ಚಾಗುತ್ತಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶದ ಭದ್ರ ಬುನಾದಿಗೆ ನಾವೆಲ್ಲರೂ ಕಾರಣಿಭೂತರಾಗೋಣ ಎಂದು ಹೇಳಿದರು. ಮಾದಕ ಸೇವನೆಗೆ ದಾಸರಾಗಿರುವ ಯುವಕರು ತಮ್ಮ ಸಾವಿಗೆ ತಾವೇ ಆಹ್ವಾನ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಅವರ ಕುಟುಂಬದ ನೆಮ್ಮದಿ ಕಿತ್ತುಕೊಳ್ಳುತ್ತಿದ್ದಾರೆ. ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಸಹವಾಸ ದೋಷ ಹಾಗೂ ಇನ್ನಿತರೆ ಕಾರಣಗಳಿಂದ ಮಾದಕ ಸೇವನೆ ಚಟಕ್ಕೆ ಬಿದ್ದು, ತಮ್ಮ ಬದುಕನ್ನು ನಾಷಮಾಡಿಕೊಳ್ಳುತ್ತಿದ್ದಾರೆ ಎಂದರು. ಇಂತಹ ಸಾಮಾಜಿಕ ಪಿಡುಗಿನ ವಿರುದ್ದ ಎಲ್ಲರೂ ಹೋರಾಟ ಮಾಡಬೇಕಿದೆ. ಅದಕ್ಕಿಂತ ಮುಖ್ಯವಾಗಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇವತ್ತು ಎಲ್ಲೆಡೆಯೂ ಯಾರ ಮಾತಿಗೂ ಬೆಲೆ ಕೊಡದ ಯುವ ಮನಸ್ಸುಗಳು ಮಾದಕ ಸೇವನೆಯ ಚಟ ಹಚ್ಚಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಅದಕ್ಕಾಗಿ ಇಂತಹ ಪಿಡುಗುಗಳನ್ನು ಬುಡ ಸಮೇತ ಕಿತ್ತು ಹಾಕಲು ಎಲ್ಲರೂ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಬೆಕು ಎಂದು ಕರೆ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೀವಕ್ಕೂ ಹಾನಿಯಾಗುವ ಅಪಾಯವಿರುತ್ತದೆ. ಮಾದಕ ವಸ್ತುಗಳ ಸಹವಾಸ ಮಾಡುವುದರಿಂದ ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಹಲವಾರು ಕಾಯಿಲೆಗಳು ಬರುತ್ತವೆ. ಇವುಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಮಾದಕ ವಸ್ತುಗಳ ವಿರೋಧಿ ದಿನ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಜೀವನವನ್ನು ಆಯ್ದುಕೊಳ್ಳಿ, ಮಾದಕ ಪದಾರ್ಥಗಳನ್ನು ಅಲ್ಲ ಎಂಬುದನ್ನು ಅರಿಯಬೇಕು. ದೇಶದ ಜವಾಬ್ದಾರಿಯುತ ಪ್ರಜೆಗಳಾದ ನೀವೆಲ್ಲರೂ ಜಾಗೃತರಾಗಬೇಕು ಎಂದು ಸಲಹೆ ನೀಡಿದರು. ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.