ಸಮಾಜದೊಂದಿಗೆ ನಿರಂತರ ಸಂಧಿಸುತ್ತಿರುವ ರಂಗಭೂಮಿ ಕಲೆ: ನಿರಂತರ ರಂಗ ನಿರ್ದೇಶಕಿ ಸುಗುಣಾ

| Published : Oct 01 2024, 01:22 AM IST

ಸಮಾಜದೊಂದಿಗೆ ನಿರಂತರ ಸಂಧಿಸುತ್ತಿರುವ ರಂಗಭೂಮಿ ಕಲೆ: ನಿರಂತರ ರಂಗ ನಿರ್ದೇಶಕಿ ಸುಗುಣಾ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮೊಳಗೆ ಒಂದು ಪ್ರಕೃತಿಯಿದೆ. ಅಂತೆಯೇ ನಮ್ಮ ಹೊರಗೂ ಒಂದು ಪ್ರಕೃತಿಯಿದೆ. ಎರಡರಲ್ಲೂ ಅಗಾಧ ವೈವಿಧ್ಯತೆಯಿದೆ. ಆದರೂ ಪರಸ್ಪರ ಸಮಗ್ರತೆಯನ್ನು ಕಾಯ್ದುಕೊಂಡಿವೆ. ಹೀಗಾಗಿಯೇ ಏಕತೆಯ ಬೇರು ಅನನ್ಯತೆಯಲ್ಲಡಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಿರಂತರ ಫೌಂಡೇಷನ್ ಆಯೋಜಿಸಿದ್ದ ಸಹಜ ರಂಗ- 2024 ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಂಪನ್ನಗೊಂಡಿತು.

ನಿರಂತರ ರಂಗ ನಿರ್ದೇಶಕರಾದ ಎಂ.ಎಂ. ಸುಗುಣ ಮಾತನಾಡಿ, ರಂಗಭೂಮಿ ಸದಾ ಪ್ರಯೋಗಶೀಲತೆಯನ್ನು ಒಳಗೊಂಡಿರುತ್ತದೆ. ಕಳೆದ 3 ದಶಕದಿಂದ ನಿರಂತರ ರಂಗಭೂಮಿಯನ್ನು ಒಂದು ಭಾಷೆಯಂತೆ ಬಳಸುತ್ತಾ ಸಮಾಜದೊಟ್ಟಿಗೆ ಸಂಧಿಸುತ್ತಿದೆ. ರಂಗಭೂಮಿಯ ವಿಸ್ತರಣೆಯಾಗಿ ನೂರಾರು ಸೃಜನಶೀಲ ಕಾರ್ಯಕ್ರಮಗಳನ್ನು ಈವರೆಗೂ ಹಮ್ಮಿಕೊಂಡು, ರಾಜ್ಯಾದ್ಯಂತ ಸಂಚರಿಸಿದೆ. ಇದರ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಹಜರಂಗ ಎಂಬ ರಂಗ ತರಬೇತಿ ಶಿಬಿರವನ್ನು ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿದೆ ಎಂದರು.

ಪ್ರತಿ ವರ್ಷವೂ ಒಂದೊಂದು ಪ್ರಚಲಿತ ವಿದ್ಯಮಾನವನ್ನು ಆಶಯವನ್ನಾಗಿಸಿಕೊಂಡು ಶಿಬಿರವನ್ನು ರೂಪಿಸುತ್ತಾ, ಶಿಬಿರಾರ್ಥಿಯನ್ನು ಸಂವೇದನೀಯನನ್ನಾಗಿಸುವುದೇ ಮುಖ್ಯ ಗುರಿ. ಸಹಜ ಬದುಕಿನಿಂದ ವಿಮುಖರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಆಶಯ, ಆದರ್ಶ, ಮೌಲ್ಯಗಳೆಲ್ಲವೂ ಒಂದು ಉಟೋಪಿಯಾದಂತೆ ಕಾಣುತ್ತಿದೆ. ಹೀಗಾಗಿ ಇವು ನಮ್ಮನ್ನು ಸಂಧಿಸುವ ಬಿಂದುವನ್ನು ಹುಡುಕುತ್ತಾ, ಅನನ್ಯತೆಯೆಡೆಗೆ ಮುಖಾಮುಖಿಯಾಗುವುದು ಈ ಸಹಜರಂಗದ ಉದ್ದೇಶ ಎಂದು ಅವರು ಹೇಳಿದರು.

ನಮ್ಮೊಳಗೆ ಒಂದು ಪ್ರಕೃತಿಯಿದೆ. ಅಂತೆಯೇ ನಮ್ಮ ಹೊರಗೂ ಒಂದು ಪ್ರಕೃತಿಯಿದೆ. ಎರಡರಲ್ಲೂ ಅಗಾಧ ವೈವಿಧ್ಯತೆಯಿದೆ. ಆದರೂ ಪರಸ್ಪರ ಸಮಗ್ರತೆಯನ್ನು ಕಾಯ್ದುಕೊಂಡಿವೆ. ಹೀಗಾಗಿಯೇ ಏಕತೆಯ ಬೇರು ಅನನ್ಯತೆಯಲ್ಲಡಗಿದೆ. ಜಗತ್ತಿನಲ್ಲಿ ಪ್ರತಿಯೊಂದು ಕಣಕ್ಕೂ ತನ್ನದೇ ಆದ ಅಸ್ತಿತ್ವವಿರುವಂತೆ ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಒಂದು ಚಿತ್ರ ಅಥವಾ ದೃಶ್ಯದಲ್ಲಿರುವ ಪ್ರತಿಯೊಂದು ಬಣ್ಣಕ್ಕೂ ತನ್ನದೇ ಮಹತ್ವವಿರುವಂತೆ. ಹಲವು ಬಣ್ಣಗಳು ಸೇರಿ ಒಂದು ಉತ್ತಮ ಚಿತ್ರವಾಗುತ್ತದೆ ಎಂದರು.

ಚಿಂತಕ ಪ್ರೊ. ಕಾಳಚನ್ನೇಗೌಡ ಮಾತಾನಾಡಿ, ರಂಗ ತರಬೇತಿ ಶಿಬಿರಗಳು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಯುವಕರಿಗೆ ಸುಲಭ ಮಾರ್ಗದಲ್ಲಿ ತಮ್ಮ ಆಸಕ್ತಿಯನ್ನು ವಿಸ್ತೃತಗೊಳಿಸಿಕೊಳ್ಳಲು ಇರುವ ಆಯಾಮವೇ ಇಂತಹ ರಂಗ ಶಿಬಿರಗಳು ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ರಾಮು ರಂಗಾಯಣ ಮಾತನಾಡಿದರು.

ಹಸಿರು ಫೌಂಡೇಷನ್ ನ ಹೊನ್ಗಳ್ಳಿ ಗಂಗಾಧರ್, ಸಹಜ ರಂಗದ ವಿದ್ಯಾರ್ಥಿಯಾದ ವೇಣುಗೋಪಾಲ್ ಇದ್ದರು.