ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಾಡಿನೆಲ್ಲೆಡೆ ರಂಗ ಸಂಸ್ಕೃತಿ ಪುನರುತ್ಥಾನಗೊಳ್ಳಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜು, ಅನನ್ಯ ಕಲಾರಂಗ (ರಿ), ಚಿಕ್ಕಬಳ್ಳಾಪುರ, ಗೌತಮಬುದ್ಧ ಫೌಂಡೇಶನ್ (ರಿ), ಮಂಚನಬಲೆ ರವರ ಸಹಯೋಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ರವರು 2024-25ನೇ ಸಾಲಿನ ನಾಲ್ಕು ದಿನಗಳ ರಂಗೋತ್ಸವದಲ್ಲಿ “ಮಹಾರಾತ್ರಿ”, “ಸರಸತಿಯಾಗಲೊಲ್ಲೆ”, “ಶ್ರೀಕೃಷ್ಣ ಸಂಧಾನ” ಮತ್ತು “ಮೋಳಿಗೆ ಮಾರಯ್ಯ”, ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿನಿಮಾ ಸಂಸ್ಕೃತಿ ನಮ್ಮದಲ್ಲರಂಗ ಸಂಸ್ಕೃತಿ ಪುನರುತ್ಥಾನ ಗೊಳ್ಳಬೇಕು. ಮಾಯಾಲೋಕವಾದ ಸಿನಿಮಾ ಟಿವಿ ಸಂಸ್ಕೃತಿ ನಮ್ಮದಲ್ಲ. ಜಾನಪದ ಕಥೆಗಳು, ಕೇಳಿಕೆ, ನಾಟಕ, ರಂಗಭೂಮಿ, ಯಕ್ಷಗಾನ,ಬೂತ ನರ್ತನ ದಂತಹ ಪರಂಪರೆ ನಮ್ಮದಾಗಬೇಕು. ಸತ್ಯದ ಕತ್ತು ಹಿಸುಕಿ ಕೊಲ್ಲುವ ಸಂದರ್ಭದಲ್ಲಿ ರಂಗಪ್ರಯೋಗ ಆಗುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳೇ ನಾಳೆಗಳು ನಿಮ್ಮ ಮೇಲಿದೆ. ವರ್ಷಕ್ಕೊಮ್ಮೆಯಾದರೂ ಮನಸ್ಸುಗಳನ್ನು ತೊಳೆದುಕೊಳ್ಳಿ. ಇಂದು ಪ್ರದರ್ಶನವಾಗುತ್ತಿರುವ ಮಹಾರಾತ್ರಿ ನಾಟಕವು ಸಿದ್ದಾರ್ಥ ವೈರಾಗ್ಯಕ್ಕೆ ಹೋಗುವ ಸಂದರ್ಭವನ್ನು ಕುವೆಂಪು ಮಹಾರಾತ್ರಿ ಎಂದು ಕರೆದಿದ್ದಾರೆ. ಈ ನಾಟಕವನ್ನು ವೀಕ್ಷಣೆ ಮಾಡಿ ಅರ್ಥ ಮಾಡಿಕೊಳ್ಳಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಮಾತನಾಡಿ, ನಾಟಕ ಬಹುಜನ ಸಮಾರಾಧನೆ ಎಂದಿದ್ದಾರೆ. ಸತ್ಯ ಹರೀಶ್ಚಂದ್ರನ ನಾಟಕ ನೋಡಿ ಗಾಂಧೀಜಿ ಬದಲಾದರು. ಶತಮಾನಗಳ ಕಾಲ ಬುದ್ಧನನ್ನು ಪುಸ್ತಕಗಳಲ್ಲಿ ಬಚ್ಚಿಟ್ಟಿದ್ದರು. ಅಂಬೇಡ್ಕರ್ ಬಂದ ಮೇಲೆ ಜಗತ್ತಿಗೆ ಹೆಚ್ಚು ಪರಿಚಿತ ಆದರು. ಮಹಿಳಾ ಕಾಲೇಜು ವಿದ್ಯಾರ್ಥಿಗಳು ಸಹನಾ ಶೀಲ ರಾಗಬೇಕು.ಆಗ ಮಾತ್ರ ಸಾಧಕರಾಗಬಹುದು. ಮನುಷ್ಯನಿಗೆ ಮಗು ಮನಸ್ಸು ಇದ್ದಾಗ ಮಾನವೀಯತೆ ಮುಖ್ಯವಾಗುತ್ತದೆ ಎಂದರು.ಜಾತಿ ತಾರತಮ್ಯ ತೊಲಗಲಿ
ಸಾಮಾಜಿಕ ಪರಿಸರ ಕಲುಷಿತವಾಗುತ್ತಿರುವ ಈ ಹೊತ್ತಿನಲ್ಲಿ ಜಾತ್ಯತೀತವಾಗಿ ಬದುಕುವ ಮಕ್ಕಳ ಮುಗ್ಧತೆಯನ್ನು ಕಾಯ್ದುಕೊಳ್ಳಬೇಕಿದೆ. ಆಸ್ತಿ ಅಂತಸ್ತು, ಜಾತಿ ತಾರತಮ್ಯವಿಲ್ಲದಂತೆ ಬದುಕುವ ಮಕ್ಕಳನ್ನು ನಮ್ಮ ಪ್ರತಿಷ್ಠೆಯ ದಾಳಗಳನ್ನಾಗಿ, ಸಾಧನಗಳನ್ನಾಗಿ ನಾವೇ ಮಾಡಿಕೊಳ್ಳುತ್ತಿದ್ದೇವೆ. ಮಕ್ಕಳ ಮುಗ್ಧತೆಯನ್ನು ತಿಳಿವಳಿಕೆ ಇಲ್ಲದ ವರ್ತನೆಗಳೆಂದು ನಾವೇ ನಿರ್ಧರಿಸಿ, ‘ಇವರ ಜತೆ ಸೇರಬೇಡ, ಅವನ ಜೊತೆ ಆಟ ಆಡಬೇಡ. ಇವಳ ಜತೆ ತಿಂಡಿ ಶೇರ್ ಮಾಡಿಕೋಬೇಡ’ ಎಂದು ನಿರ್ಬಂಧ ಹೇರುತ್ತ ನಾವೇ ವಿಷವನ್ನು ಬಿತ್ತುತ್ತಿದ್ದೇವೆ ಎಂದು ವಿಷಾದಿಸಿದರು.ನಾವೇ ನಿರ್ಮಿಸಿರುವ ವಿಷ ವರ್ತುಲದಿಂದ ನಾವಿಂದು ಹೊರ ಬರಬೇಕು.ಹೆಣ್ಣು ಮಕ್ಕಳ ಸಬಲೀಕರಣ ಆದರೆ ಮಾತ್ರ ದೇಶದ ಅಭಿವೃದ್ಧಿ ಆಗಲಿದೆ. ಬುದ್ಧನನ್ನು ಗ್ರಾಮೀಣ ಪ್ರದೇಶಕ್ಕೆ ನಾಟಕದ ಮೂಲಕ ಪರಿಚಯಿಸುವ ಕೆಲಸವನ್ನು ನಿರ್ದೆಶಕ ಗ.ನ.ಮಾಡಿದ್ದಾರೆ. ಬುದ್ಧ ಇಂದಿನ ದಿನಮಾನಗಳಲ್ಲಿ ಭಾರತಕ್ಕೆ ತುಂಬಾ ಅಗತ್ಯವಿದೆ. ಏಪ್ರಿಲ್ 8ರ ರಾತ್ರಿ ಕನ್ನಡ ಭವನದಲ್ಲಿ ಈ ನಾಟಕ ಪ್ರದರ್ಶನ ಆಗಲಿದೆ ಎಂದರು.
ಬೆಂಗಳೂರಿನ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟಿನ ಮೇನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಮಾತನಾಡಿ.ಶೇಕ್ಸ್ ಪಿಯರ್ ನಾಟಕ ರಂಗದ ಶ್ರೇಷ್ಠ ನಾಟಕಕಾರ. ಗ್ರಾಮೀಣ ಪ್ರದೇಶದಲ್ಲಿ ಸಣ್ಣಾಟ, ದೊಡ್ಡಾಟ ಇಂದಿಗೂ ಜೀವಂತವಾಗಿದೆ. ಮಹಿಳಾ ಕಾಲೇಜಿನಲ್ಲಿ ನಾಟಕದ ಪರಂಪರೆ ಪ್ರಾರಂಭವಾಗಿರುವುದು ಸಂತೋಷದ ಸಂಗತಿಯಾಗಿದೆ. ನಾಲ್ಕು ದಿನಗಳ ರಂಗೋತ್ಸವ ಯಶಸ್ವಿಯಾಗಲಿ.ಬಹುಮುಖ ಪ್ರತಿಭೆಯ ಗ.ನ.ಅಶ್ವತ್ಥ ಅವರ ನಿರ್ದೇಶನದ ಮಹಾರಾತ್ರಿ ಯಶಸ್ವಿಯಾಗಲಿ ಎಂದು ಹಾರೈಸಿ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನಾಟಕ ಪರಂಪರೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಗೌತಮ ಬುದ್ಧ ಪೌಂಡೇಶನ್ ನ ಅಧ್ಯಕ್ಷ ವಕೀಲ ಗಂಗರಾಜು,ಪ್ರಾಧ್ಯಾಪಕರಾದ ರಾಮಕೃಷ್ಣ,ಡಾ.ಶಂಕರ್, ಉಪನ್ಯಾಸಕರಾದ ಪದ್ಮಕುಮಾರಿ,ಚಾಂದ್ ಪಾಷ, ಮುನಿರಾಜು.ಎಂ.ಅರಿಕೆರೆ ,ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಧಾವೆಂಕಟೇಶ್, ಮತ್ತಿತರರು ಇದ್ದರು.