ಹೂವಿನಹಡಗಲಿ: ಈ ನಾಡಿನಲ್ಲಿ ಜೀವಂತ ಸಂಸ್ಕೃತಿ ಉಳಿಸುವಲ್ಲಿ ರಂಗಭೂಮಿ ಯಶಸ್ವಿಯಾಗಿದೆ. ಆದರೆ ಇಂದಿನ ಸಾಮಾಜಿಕ ಜಾಲತಾಣಗಳು ಮನೋರಂಜನೆ ಹೆಸರಿನಲ್ಲಿ ಕೀಳು ಅಭಿರುಚಿ ಪ್ರದರ್ಶನ ನೀಡಿ ಯುವ ಮನಸ್ಸುಗಳನ್ನು ಮಲಿನ ಮಾಡುತ್ತಿವೆ. ಇಂತಹ ಪರಿಸ್ಥಿತಿ ಮಧ್ಯೆ ರಂಗಭೂಮಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಹಿರಿಯ ರಂಗಕರ್ಮಿ ಡಾ.ಕೆ.ಮರುಳಸಿದ್ದಪ್ಪ ಹೇಳಿದರು.

ಇಲ್ಲಿನ ರಂಗಭಾರತಿ ಹಾಗೂ ಕರ್ನಾಟಕ ನಾಟಕ ಆಕಾಡೆಮಿ ಸಹಯೋಗದಲ್ಲಿ ರಂಗಭಾರತಿ ಕಲಾ ಮಂದಿರದಲ್ಲಿ ಜರುಗಿದ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ, ಪ್ರಶಸ್ತಿ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಂಗಭೂಮಿ ವಿಶಿಷ್ಟ ಸಂಸ್ಕೃತಿ, ಪರಂಪರೆ ಹೊಂದಿದೆ. ಆದರೂ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಈ ಸಿನಿಮಾ, ಟಿವಿ ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳ ಮಧ್ಯೆ ರಂಗಭೂಮಿ ಪರಂಪರೆ ಉಳಿಸಬೇಕಿದೆ. ಜನರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಜತೆಗೆ ಕನ್ನಡ ರಂಗಭೂಮಿ ಸಾಮಾಜಿಕ, ರಾಜಕೀಯ ಜವಾಬ್ದಾರಿ ನಿರ್ವಹಿಸಬೇಕಿದೆ. ಯುವ ಜನಾಂಗ ರೋಗಿಷ್ಠ ಮನೋರಂಜನೆ ಬಿಟ್ಟು ದೇಶಿ ಸಂಸ್ಕೃತಿಯ ನೆಲೆಯಾದ ರಂಗಭೂಮಿ ಕಡೆಗೆ ಹೆಚ್ಚು ವಾಲುವ ಅಗತ್ಯವಿದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ ಮೂರ್ತಿ ಮಾತನಾಡಿ, ರಂಗಭೂಮಿಯ ಜೀವಾಳವೇ ಗ್ರಾಮೀಣ ಭಾಗದ ನಾಟಕ ಕಲಾವಿದರು, ಪ್ರತಿ ವರ್ಷವೂ ರಾಜ್ಯದಲ್ಲಿ 6 ಸಾವಿರ ನಾಟಕಗಳ ಪ್ರದರ್ಶನವಾಗುತ್ತಿದೆ. ₹250 ಕೋಟಿ ವೆಚ್ಚವಾಗುತ್ತದೆ. ಆದರೆ ನಾಟಕ ಆಕಾಡೆಮಿಗೆ ಕೇವಲ ಸರ್ಕಾರ 200 ಕೋಟಿ ನೀಡುತ್ತಿದೆ. ಇದು ತೀರಾ ವಿಪರ್ಯಾಸ ಎಂದರು.

ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ.ಎಸ್‌. ಮಂಜುನಾಥ ಸ್ವಾಮಿ, ಶಾಸಕ ಕೃಷ್ಣನಾಯ್ಕ, ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ. ಸುಮಾ ವಿಜಯ್‌ ಮಾತನಾಡಿದರು. ಕರ್ನಾಟಕ ನಾಟಕ ಆಕಾಡೆಮಿ ರಿಜಿಸ್ಟ್ರರ್‌ ಬಿ. ನೀಲಮ್ಮ, ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ ಇದ್ದರು.


ಪ್ರಶಸ್ತಿಗೆ ಭಾಜನರಾದವರು:

2025-26ನೇ ಸಾಲಿನ ಪ್ರಶಸ್ತಿ ಪುರಸ್ಕೃತರು:

ರಂಗ ನಿರ್ದೇಶಕ ಮಂಗಳೂರಿನ ಬಿ. ಶಶಿಧರ ಅಡಪ ಅವರಿಗೆ ಜೀವಮಾನ ಸಾಧನೆ ಗೌರವ ಪ್ರಶಸ್ತಿ ನೀಡಲಾಯಿತು. ಜಿ.ಎನ್. ಮೋಹನ್ (ಬೆಂಗಳೂರು), ಟಿ. ರಘು (ಬೆಂಗಳೂರು), ಮುರ್ತುಜಸಾಬ ಘಟ್ಟಿಗನೂರು (ಬಾಗಲಕೋಟೆ), ಗೋಪಾಲ ಯಲ್ಲಪ್ಪ ಉಣಕಲ್ (ಧಾರವಾಡ), ವೈ.ಎಸ್. ಸಿದ್ದರಾಮೇಗೌಡ (ಬೆಂಗಳೂರು ದಕ್ಷಿಣ), ರೋಹಿಣಿ ರಘುನಂದನ್ (ಬೆಂಗಳೂರು), ವಿ.ಎನ್. ಅಶ್ವಥ್ (ಬೆಂಗಳೂರು), ಕೆ.ಆರ್. ಪೂರ್ಣೇಂದ್ರ ಶೇಖರ್ (ಬೆಂಗಳೂರು), ಕೆ. ಮುರಳಿ (ಕೋಲಾರ), ಮಲ್ಲೇಶ ಬಿ. ಕೋನಾಳ (ಯಾದಗಿರಿ), ಮಹೇಶ ವಿ. ಪಾಟೀಲ್ (ಬೀದರ್), ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ), ಚಿಕ್ಕಪ್ಪಯ್ಯ (ತುಮಕೂರು), ಮಾಲತೇಶ ಬಡಿಗೇರ (ಗದಗ), ವೆಂಕಟಾಚಲಪ್ಪ (ಬೆಂಗಳೂರು), ಎಂ. ಚನ್ನಕೇಶವಮೂರ್ತಿ (ಬೆಂಗಳೂರು), ದೇವರಾಜ ಹಲಗೇರಿ (ಕೊಪ್ಪಳ), ಆರ್.ಟಿ. ಅರುಣಕುಮಾರ್ (ದಾವಣಗೆರೆ), ರತ್ನಾ ಸಕಲೇಶಪುರ (ಹಾಸನ), ಶಿವಯ್ಯಸ್ವಾಮಿ ಬಿಬ್ಬಳ್ಳಿ (ಕಲಬುರಗಿ), ಭೀಮನಗೌಡ ಬಿ. ಖಟಾವಿ (ಬೆಳಗಾವಿ), ಎಂ.ಎಸ್. ಮುತ್ತುರಾಜ್ (ಬೆಂಗಳೂರು), ಸುಗಂದಿ ಉಮೇಶ ಕಲ್ಮಾಡಿ (ಉಡುಪಿ), ಶಿವಪುತ್ರಪ್ಪ ಶಿವಸಿಂಪಿ (ಕೊಪ್ಪಳ), ಎಸ್.ಆರ್. ಉದಯ್ ಸೋಸಲೆ (ಮೈಸೂರು) ಅವರಿಗೆ ವಾರ್ಷಿಕ ಪ್ರಶಸ್ತಿ ಹಾಗೂ ಶಂಕರ್ ಭಟ್ (ಉತ್ತರ ಕನ್ನಡ) ಅವರಿಗೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಲಾಯಿತು.

ದತ್ತಿನಿಧಿ ಪುರಸ್ಕಾರ:

ಪಿ.ಎ. ಮಂಜಪ್ಪ (ಕೊಡಗು), ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ), ಸಿ.ವಿ. ಲೋಕೇಶ (ಬೆಂಗಳೂರು ಗ್ರಾಮಾಂತರ) ಎಚ್.ಪಿ. ಈಶ್ವರಾಚಾರಿ (ಮಂಡ್ಯ), ಎ. ವೆಂಕಟೇಶ ದೊಡ್ಡಮನೆ (ಬೆಂಗಳೂರು), ಪಿ.ವಿ. ಕೃಷ್ಣಪ್ಪ (ಬೆಂಗಳೂರು) ನಾಗೇಂದ್ರ ಪ್ರಸಾದ್ (ಬೆಂಗಳೂರು) ಅವರಿಗೆ ವಿವಿಧ ದತ್ತಿ ಪುರಸ್ಕಾರ ನೀಡಲಾಯಿತು.