ಚಿತ್ರದುರ್ಗದ ಬುದ್ಧ ನಗರ ವೃತ್ತದಲ್ಲಿ ಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕಸಂಸ್ಥೆಯಿಂದ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಪೊಲೀಸ್ ಉಪಾಧೀಕ್ಷಕ ಶ್ರೀನಿವಾಸ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇಶದಲ್ಲಿ ಭೂಮಿ ಇರುವವರೆಗೂ ರಂಗಭೂಮಿ ಜೀವಂತವಾಗಿರುತ್ತದೆ ಎಂದು ಪೊಲೀಸ್ ಉಪಾಧೀಕ್ಷಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.ಸಿರಿಸಂಪಿಗೆ ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಒನಕೆ ಓಬವ್ವ ಕ್ರೀಡಾಂಗಣ ಮುಂಭಾಗದ ಬುದ್ಧ ಸರ್ಕಲ್‌ನಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜಾಲತಾಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮರೆ ಮಾಚುತಿದೆ. ಮೊಬೈಲ್‌ಗಳಲ್ಲಿ 3 ನಿಮಿಷದ ರೀಲ್ಸ್ ನೋಡುತ್ತ ಏಕಾಗ್ರತೆಯನ್ನು ಬರೀ 3 ನಿಮಿಷಕ್ಕೆ ಸೀಮಿತ ವಾಗಿಸಿಕೊಂಡಿದ್ದಾರೆ. ಅದ್ದರಿಂದ ಮಕ್ಕಳು ಮತ್ತು ಯುವಕರು ಮೋಬೈಲ್ ಮಾಹೆಗೆ ಬಲಿಯಾಗಿ ಸಮಾಜದ ಶಾಂತಿ ಕದಡುತ್ತಿದ್ದಾರೆ.ಮಕ್ಕಳಿಗೆ ನಾಟಕ, ಸಂಗೀತ ಕ್ರೀಡೆ ಮುಂತಾದ ಚಟುವಟಿಕೆಗಳಿಗೆ ಅಸಕ್ತಿ ಮೂಡಿಸುವುದು ಎಲ್ಲರ ಕರ್ತವ್ಯ ಎಂದರು.
ನೇರ್ಲಿಗೆ ಪೌಂಡೇಷನ್ ಅಧ್ಯಕ್ಷೆ ಮಮತ ನೇರ್ಲಿಗೆ ಮಾತನಾಡಿ, ಬದುಕಿಗೆ ಬೇಕಾದ ಮೌಲ್ಯಗಳು ಕಾಣೆಯಾಗುತ್ತಿವೆ. ಮಕ್ಕಳು ಶಿಕ್ಷಣದ ಜೊತೆಗೆ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ರಂಗಭೂಮಿಯ ವಿವಿಧ ಪ್ರಕಾರಗಳಾದ ಗಾಯನ, ವಾದನ, ನರ್ತನಗಳನ್ನು ಕಲಿಯುವ ಮೂಲಕ ಉತ್ತಮ ಸಂಸ್ಕಾರವನ್ನು ಪಡೆಯಬಹುದು ಎಂದರು.ಸಾಹಿತಿ ಹುರಳಿ ಬಸವರಾಜ್ ಮಾತನಾಡಿದರು. ಹುಣಿಸೇಕಟ್ಟೆ ದ್ಯಾಮಯ್ಯ ಮತ್ತು ತಂಡದಿಂದ ತತ್ವಪದ ಗಾಯನ, ಪವಿತ್ರ ಮತ್ತು ತಂಡದಿಂದ ಸುಗಮ ಸಂಗೀತ, ಶಿವಣ್ಣ ಮತ್ತು ತಂಡದಿಂದ ಜನಪದ ಸಂಗೀತ, ಹಿಮಂತ್‌ರಾಜ್ ಮತ್ತು ತಂಡದಿಂದ ರಂಗಗೀತೆ ಗಾಯನ ನಡೆಯಿತು.
ಶ್ರೀ ಸಿರಿಸಂಪಿಗೆ ಪುರಸ್ಕಾರವನ್ನು ಜನಪದ ಕಲಾವಿದ ಏಕಾಂತಪ್ಪ ರವರಿಗೆ ನೀಡಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಪರಶುರಾಮ್ ಗೊರಪ್ಪ, ಪರಮೇಶ್ವರಪ್ಪ ಕುದರಿ, ರಾಘವೇಂದ್ರ, ದೇವರತ್ನ ಮಂಜು, ಪವನ್ ಕುಮಾರ್, ಶ್ಯಾಮ್, ಉದಯಕುಮಾರ್, ಶ್ರೀನಿವಾಸ್, ಪವಿತ್ರ, ಶಿವಣ್ಣ, ಮುರುಘನ್ ಇದ್ದರು.