ಧಾರವಾಡ:
ನಾಟಕ, ಸಂಗೀತ ಹಾಗೂ ಸಾಹಿತ್ಯಗಳ ಜ್ಞಾನ ನೀಡುವ ರಂಗಭೂಮಿಯು ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಲಾವಿದರು ಹಾಗೂ ತಂತ್ರಜ್ಞರಾಗಿ ಬೆಳೆಯಲು ಬುನಾದಿಯಾಗಿದೆ ಎಂದು ರಂಗಭೂಮಿ ಹಾಗೂ ನಟಿ ಉಮಾಶ್ರೀ ಹೇಳಿದರು.ರಂಗಾಯಣವು ‘ಅಭಿನಯ-ಅಭಿವ್ಯಕ್ತಿ” ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ಒಬ್ಬ ಕಲಾವಿದ ಸಕ್ರಿಯನಾಗಿ ಕಾರ್ಯನಿರ್ವಹಿಸಿದರೆ ಟಿವಿ, ಸಿನಿಮಾಗಳ ಅವಕಾಶಗಳು ಸಿಗುತ್ತವೆ. ಅಂತ ಶಕ್ತಿ ರಂಗಭೂಮಿಗಿದೆ. ಆದರೆ, ಇಂದಿನ ಯುವಜನತೆ ಕೇವಲ ಸಿನಿಮಾ ಕೇಂದ್ರಿಕರಿಸಿದ್ದಾರೆ. ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳಲ್ಲಿರುವ ಕಲೆ ಗುರುತಿಸಿ ಅವರು ಅದರಲ್ಲಿ ಸಾಧನೆ ಮಾಡುವಂತೆ ಪೋಷಕರು ಸಹಕಾರ ನೀಡುತ್ತಿರುವುದು ಸಂತಸದ ವಿಷಯ. ತಾವು ಆಸಕ್ತಿ ಹೊಂದಿದ ಕ್ಷೇತ್ರದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಈ ರೀತಿ ಶಿಬಿರ, ಕಲೆ ಗುರುತಿಸುವ ವೇದಿಕೆಗಳು ಈ ಮೊದಲು ಇರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಸ್ವಾತಂತ್ರ್ಯವೇ ಇರಲಿಲ್ಲ. ಆದರೆ, ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡುತ್ತಿರುವುದರಿಂದ ಹೆಣ್ಣು ಮಕ್ಕಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ತಮ್ಮ ಮಕ್ಕಳು ನಟ, ನಟಿ, ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಬೇಕೆಂಬುದು ಪ್ರತಿಯೊಬ್ಬ ತಂದೆ-ತಾಯಿಯ ಆಶಯವಾಗಿರುತ್ತದೆ. ಆದರೆ, ಅವರ ಮೇಲೆ ಒತ್ತಡ ಹೇರಬಾರದು. ಅವರ ಆಯ್ಕೆಗೆ ಅವರನ್ನು ಬಿಡಬೇಕು ಎಂದು ಸಲಹೆ ನೀಡಿದರು.ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಝಾಕೀರ್ ನದಾಫಗೆ ಉಮಾಶ್ರೀ ಅಭಿನಂದಿಸಿದರು. ಆಡಳಿತಾಧಿಕಾರಿ ಶಶಿಕಲಾ ಹುಡೇದ ಶಿಬಿರದ ಕುರಿತು ತಿಳಿಸಿದರು. ಗಿರೀಶ ಕರಿಯಪ್ಪವರ, ಶಿಬಿರದ ಸಂಚಾಲಕ ಅರುಣಕುಮಾರ ಮೇದಾರ, ಸಂಗೀತಗಾರ ಸುನಂದಾ ನಿಂಬನಗೌಡರ, ರೆಪರ್ಟರಿ ಕಲಾವಿದರು ಇದ್ದರು.