ಇಂದಿನ ಯಾಂತ್ರಿಕ ಬದುಕಿನಲ್ಲಿ ಯುವಜನಾಂಗವನ್ನು ಹುಟ್ಟು ಹಾಕಲು ರಂಗಭೂಮಿಯಿಂದ ಸಾಧ್ಯ. ಸದಾಕಾಲ ಜನರಿಗೆ ಮುಟ್ಟಿಸುವ ಏಕೈಕ ಬಲಿಷ್ಠ ಮಾಧ್ಯಮ ರಂಗಭೂಮಿಯಾಗಿದೆ ಎಂದು ಎಸ್‌ವೈಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಹೇಳಿದರು.
ನರಗುಂದ: ಇಂದಿನ ಯಾಂತ್ರಿಕ ಬದುಕಿನಲ್ಲಿ ಯುವಜನಾಂಗವನ್ನು ಹುಟ್ಟು ಹಾಕಲು ರಂಗಭೂಮಿಯಿಂದ ಸಾಧ್ಯ. ಸದಾಕಾಲ ಜನರಿಗೆ ಮುಟ್ಟಿಸುವ ಏಕೈಕ ಬಲಿಷ್ಠ ಮಾಧ್ಯಮ ರಂಗಭೂಮಿಯಾಗಿದೆ ಎಂದು ಎಸ್‌ವೈಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರೀಯಡಿಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಅಂತಾರಾಷ್ಟ್ರೀಯ ರಂಗಭೂಮಿ ದಿನಾಚರಣೆ ಅಂಗವಾಗಿ ಲಲಿತ ಕಲೆ ಮತ್ತು ರಂಗಭೂಮಿ ಅಡಿಯಲ್ಲಿ ನಡೆದ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಂಗಭೂಮಿ ಸದಾಕಾಲ ಒಳ್ಳೆಯ ವಿಚಾರಗಳನ್ನು, ದೇಶಪ್ರೇಮ, ಜೀವನ ಪ್ರೀತಿ ಗಡಿ ಮೀರಿದ ಮೌಲ್ಯಗಳನ್ನು ಹೇಳುತ್ತದೆ. ಜೊತೆಗೆ ರಂಗಭೂಮಿಯು ಜೀವನ ಪಾಠ ಶಾಲೆಯಾಗಿದೆ ಎಂದರು.ಹಿರಿಯ ರಂಗ ಕಲಾವಿದ ಗುರುನಾಥಗೌಡ ಭರಮಗೌಡ್ರು ಮಾತನಾಡಿ, ಆಧುನಿಕ ವ್ಯವಸ್ಥೆ ಅದೇಷ್ಟೇ ಮುಂದುವರಿದರೂ ಗ್ರಾಮೀಣ ಭಾಗದಲ್ಲಿ ಇಂದಿಗೂ ಪೌರಾಣಿಕ ನಾಟಕಗಳ ಕಲಿಕೆ ಹಾಗೂ ಪ್ರದರ್ಶನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಅದರಲ್ಲೂ ಅಡುಗೆ ಮನೆಯಲ್ಲಿ ಸೌಟು ಹಿಡಿಯುತ್ತಿದ್ದ ಮಹಿಳೆಯರು ಗದೆ ಬಿಲ್ಲು ಹಾಗೂ ಕೊಳಲು ಹಿಡಿದು ಪುರುಷರಿಗಿಂತ ಕಡಿಮೆ ಇಲ್ಲ ಎಂಬಂತೆ ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ತಿಳಿಸಿದರು.
ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ ಮಾತನಾಡಿ, ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ. ಅದು ಮನುಷ್ಯನಿಗೆ ಸಭ್ಯತೆ, ನಾಗರಿಕತೆ ಮತ್ತು ಸಂಸ್ಕಾರವನ್ನು ಕಲಿಸುವ ಶಕ್ತಿಯುಳ್ಳ ಅದ್ಭುತ ಮಾಧ್ಯಮ. ಸಮಾಜದ ಸುಧಾರಣೆಗೆ ನಾಟಕ ಪ್ರಬಲ ಮಾಧ್ಯಮ. ಪ್ರಸ್ತುತ ಸಮಾಜದಲ್ಲಿ ಶಾಂತಿ, ಸಹನೆ, ಪ್ರೀತಿ ಮತ್ತು ಸೌಹಾರ್ದದಂತಹ ಮೌಲ್ಯಗಳು ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಹೊಸ ಚೈತನ್ಯ ತುಂಬಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಅತ್ಯಂತ ಪ್ರಬಲ ಮಾಧ್ಯಮವಾಗಿವೆ. ಸಂಗೀತದಲ್ಲಿ ತಾಳ ತಪ್ಪಿದರೆ ಹಾಡು ಕೆಡುತ್ತದೆ, ಆದರೆ ಜೀವನದಲ್ಲಿ ದಾರಿ (ಸಂಸ್ಕಾರ) ತಪ್ಪಿದರೆ ಬದುಕೇ ಕೆಡುತ್ತದೆ. ಈ ಕಲೆಗಳು ಮನುಷ್ಯನ ಕೋಪ, ಆಕ್ರೋಶಗಳನ್ನು ಶಮನ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತವೆ ಎಂದರು.ಈ ವೇಳೆ ಬಿ.ಎಡ್. ಕಾಲೇಜಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ವಿವಿಧ ಜಾನಪದ ಕಲಾ ನೃತ್ಯಗಳು, ಕೋಲಾಟ, ಸಾಮಾಜಿಕ ಸಂದೇಶ ಸಾರುವ ನಾಟಕಗಳು, ಫ್ಯಾಶನ್ ಶೋ, ಬೀಸುವ, ಕುಟ್ಟುವ ಪದಗಳು, ಹೆಳವರ ವೇಷ ಮುಂತಾದ ವಿವಿಧ ಬಗೆಯ ಕಲೆಗಳನ್ನು ಅದ್ಭುತವಾಗಿ ಪ್ರದರ್ಶನ ನೀಡಿದರು.
ಉಪನ್ಯಾಸಕರಾದ ಎಂ.ಈ. ವಿಶ್ವಕಮ೯, ಎಸ್.ವಿ. ಕೋಟಿ, ಮಂಜುಳ ಹರಳಕಟ್ಟಿ, ಪವಿತ್ರಾ ಬೇಡಗೌಡ್ರ, ಮಳೆಯಪ್ಪ ಮಮಟಗೇರ, ತೇಜಸ್ವಿನಿ ಅಂಕಲಿ, ಮಹೇಶ್ ಕರಮಡಿ, ಭೀಮವ್ವ ಸೂರ್ಯವಂಶಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಇದ್ದರು.