ಸಾರಾಂಶ
ಬಳ್ಳಾರಿ: ಇಂದಿನ ಹೊಸ ತಲೆಮಾರಿಗೆ ಸಂಗೀತ ಎಂದಾಗ ಸಿನಿಮಾ ಸಂಗೀತ ಮಾತ್ರ ನೆನಪಾಗುತ್ತದೆ. ಆದರೆ ಜಾನಪದ, ಸುಗಮ, ಶಾಸ್ತ್ರೀಯ, ರಂಗಸಂಗೀತ ಮುಂತಾದ ಪ್ರಕಾರಗಳು ಕೂಡ ನಮ್ಮ ನಡುವೆ ಜೀವಂತವಾಗಿ ಉಳಿದಿವೆ ಎಂದು ಹಿರಿಯ ರಂಗಭೂಮಿ ಕಲಾವಿದೆ ಎಂ. ವರಲಕ್ಷ್ಮಿ ನುಡಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ನಾಟಕ ವಿಭಾಗದ ವತಿಯಿಂದ ಆಯೋಜಿಸಿದ್ದ ‘ರಂಗ ಸಂಗೀತ: ವರ್ತಮಾನದ ಸಾಧ್ಯತೆಗಳು'''' ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಳ್ಳಾರಿ ಜಿಲ್ಲೆಯ ಸಂಗೀತ ದಿಗ್ಗಜರಾದ ಸಿರಿಗೇರಿ ನಾಗನಗೌಡ, ಮದಿರೆ ಮರಿಸ್ವಾಮಿ, ಕಂಪ್ಲಿ ವಾದಿರಾಜ, ಸುಭದ್ರಮ್ಮ ಮನ್ಸೂರ್, ಬೆಳಗಲು ವೀರಣ್ಣ, ವೀಣಾ ಆದೋನಿ ಮುಂತಾದವರು ರಂಗಗೀತೆಗಳನ್ನು ಭಾವಪೂರ್ಣವಾಗಿ ಹಾಡುತ್ತ ರಂಗ ಸಂಗೀತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ವಿಷಯ ಮಂಡನೆ ಮಾಡಿದ ಬಳ್ಳಾರಿ ವಿವಿಯ ನಾಟಕ ವಿಭಾಗದ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾ ರೆಡ್ಡಿ, ಯಾವುದೇ ನಾಟಕ ಸಂಗೀತವಿಲ್ಲದೆ ಪರಿಪೂರ್ಣ ಎನಿಸುವುದಿಲ್ಲ. ಸಂಗೀತ ನಾಟಕದ ಜೀವನಾಡಿ. ಸಂಗೀತಕ್ಕೆ ಸಮ್ಮೋಹನ ಶಕ್ತಿ ಇದೆ. ಎಲ್ಲ ವಸ್ತು ಮತ್ತು ಎಲ್ಲ ಜೀವರಾಶಿಗಳನ್ನು ಆಕರ್ಷಿಸುವ ಶಕ್ತಿ ಸಂಗೀತಕ್ಕಿದೆ. ಭಾವನೆಗಳ ಅಭಿವ್ಯಕ್ತಿಗೆ ಸಂಗೀತವು ಪ್ರಬಲ ಮಾಧ್ಯಮವೆನಿಸಿದೆ. ಸಂಗೀತದ ಸಪ್ತ ಸ್ವರಗಳು ಒಂದು ರಸಭಾವವನ್ನು ಅಭಿವ್ಯಕ್ತಿಸುತ್ತವೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನಾಟಕ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ, 60- 70ರ ದಶಕಗಳಲ್ಲಿ ನಾಟಕಗಳಿಗೆ ಹಿನ್ನೆಲೆಗಾಗಿ ಹಾರ್ಮೋನಿಯಂ, ತಬಲಾ, ಕ್ಲಾರಿಯೋನೆಟ್, ಗಿಟಾರ್ ಬಳಸುತ್ತಿದ್ದರು. ಇದೀಗ ಕ್ಯಾಷಿಯೋ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಅನೇಕ ಬಗೆಯ ಸಂಗೀತದ ದ್ವನಿ ತರಂಗಗಳನ್ನು ಹೊಮ್ಮಿಸಬಹುದಾಗಿದೆ. ಹಿಂದಿನ ಕಾಲದಲ್ಲಿ ನಟರೇ ಸ್ವತಃ ಹಾಡುಗಳನ್ನು ಹಾಡುತ್ತಿದ್ದರು. ಇಂದು ಆಡುವವರು ಬೇರೆ ಕುಣಿಯುವವರು ಬೇರೆ. ಇದೆಲ್ಲವೂ ವರ್ತಮಾನದ ಸಾಧ್ಯತೆ. ಇಂದು ಸಂಗೀತದ ಇಂಪಿಗಿಂತ ಅಬ್ಬರವೇ ಜಾಸ್ತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಮಾತನಾಡಿದರು. ನಾಟಕ ವಿಭಾಗದ ಅತಿಥಿ ಉಪನ್ಯಾಸಕರಾದ ವಿಷ್ಣು ಹಡಪದ, ನೇತಿ ರಘುರಾಂ ಮತ್ತು ನಾಟಕ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.