ರಾಮನಗರ: ಐವರು ಮಹಿಳೆಯರ ಗ್ಯಾಂಗೊಂದು 52 ವರ್ಷದ ಥಿಯೇಟರ್ ಮಾಲೀಕರನ್ನು ಬ್ಲಾಕ್‌ಮೇಲ್ ಮಾಡಿ 65 ಲಕ್ಷ ರುಪಾಯಿ ಸುಲಿಗೆ ಮಾಡಿರುವ ಘಟನೆ ನಡೆದಿದೆ
ರಾಮನಗರ: ಐವರು ಮಹಿಳೆಯರ ಗ್ಯಾಂಗೊಂದು 52 ವರ್ಷದ ಥಿಯೇಟರ್ ಮಾಲೀಕರನ್ನು ಬ್ಲಾಕ್‌ಮೇಲ್ ಮಾಡಿ 65 ಲಕ್ಷ ರುಪಾಯಿ ಸುಲಿಗೆ ಮಾಡಿರುವ ಘಟನೆ ನಡೆದಿದೆ.
ನಗರದ ಅಗ್ರಹಾರ ಬಡಾವಣೆ ನಿವಾಸಿ ಶಂಕರ್ ಚಿತ್ರ ಮಂದಿರದ ಮಾಲೀಕ ಎನ್.ಮಂಜುನಾಥ್ ವಂಚನೆಗೊಳಗಾದವರು.7 ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋದ ನಂತರ ಮಂಜುನಾಥ್ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ತಂದೆ-ತಾಯಿ, ಮಕ್ಕಳು ಯಾರೂ ಇಲ್ಲ. ಆರೇಳು ತಿಂಗಳ ಹಿಂದೆ ಲತಾ ಎಂಬ ಮಹಿಳೆ ಥಿಯೇಟರ್ ಗೆ ಸಿನಿಮಾ ನೋಡಲು ಬಂದಾಗ ಮಂಜುನಾಥ್ ಅವರನ್ನು ಪರಿಚಯ ಮಾಡಿಕೊಂಡು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಳು. ನಂತರ ಆಕೆ ಗಗನ ಮತ್ತು ಅಪೂರ್ವ ಎಂಬುವವರನ್ನು ಪರಿಚಯಿಸಿದ್ದಳು. ಈ ಎಲ್ಲಾ ಮಹಿಳೆಯರು ಅವರನ್ನು ಒಂದಲ್ಲ ಒಂದು ನೆಪದಲ್ಲಿ ಬೆದರಿಸಿ ಹಣ ಹಾಗೂ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದಾರೆ. ಈ ಮಧ್ಯೆ ಅಪೂರ್ವ ತಾನೇ ತಾಳಿ ಹಾಕಿಕೊಂಡು ನೀನೇ ನನ್ನ ಗಂಡ, ನನ್ನನ್ನು ಸಾಕಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಆರಂಭದಲ್ಲಿ ಮಹಿಳೆಯರು ಸಣ್ಣ ಮೊತ್ತದಲ್ಲಿ ಸುಲಿಗೆ ಮಾಡುತ್ತಿದ್ದರು. ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದಾಗಲೆಲ್ಲ ಆತನ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.ಐದು ತಿಂಗಳ ಹಿಂದೆ ಲತಾ, ಗಗನ ಹಾಗೂ ಗಗನ ತಾಯಿ ಲೀಲಾವತಿ ಚಿತ್ರಮಂದಿರದ ಬಳಿ ಮಂಜುನಾಥ್ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ 500 ಗ್ರಾಂ ಚಿನ್ನಾಭರಣ ಕಸಿದುಕೊಂಡಿದ್ದಾರೆ. ಅಲ್ಲದೆ, ಆನ್‌ಲೈನ್ ದಿನಸಿ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸಿ ವಿವಿಧ ಮೊಬೈಲ್ ಸಂಖ್ಯೆಗಳಿಂದ ವಾಟ್ಸ್ ಆಪ್ ಮೂಲಕ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.
ಈವರೆಗೆ 40 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಹಾಗೂ 25 ಲಕ್ಷ ನಗದನ್ನು ಐವರು ಮಹಿಳೆಯರು ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ದೂರುದಾರ ಮಂಜುನಾಥ್ ಬೆಂಗಳೂರಿನ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಐಜೂರು ಪೊಲೀಸರು ಐವರು ಮಹಿಳೆಯರ ವಿರುದ್ಧ ಬಿಎನ್‌ಎಸ್‌ನ ಇತರ ವಿಭಾಗಗಳೊಂದಿಗೆ ಸುಲಿಗೆ (ಬಿಎನ್‌ಎಸ್ 308) ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
