ದಿನಪತ್ರಿಕೆಗಳು ಹೇಗೆ ಹಳೆಯ ಓದುಗರನ್ನು ಉಳಿಸಿಕೊಂಡು ಹೊಸ ಓದುಗರನ್ನು ಆಕರ್ಷಿಸಲು ಪ್ರಯತ್ನಿಸುವವೋ ಅದೇ ರೀತಿಯಲ್ಲಿ ರಂಗಭೂಮಿ ಸಹ ತನ್ನ ಹಳೆಯ ಪ್ರೇಕ್ಷಕರನ್ನು, ನೋಡುಗರನ್ನು ಉಳಿಸಿಕೊಂಡು ಹೊಸಬರನ್ನು ಸೆಳೆಯಬೇಕು.
ಧಾರವಾಡ:
ರಂಗಭೂಮಿಯ ಹಳೆಯ ದಿನ ನೋಡಿದ್ದೇವೆ. ಈಗಿನ ಡಿಜಿಟಲ್ ಯುಗದಲ್ಲಿ ಯಾವ ರೀತಿಯಲ್ಲಿ ಹೊಸ ಆವಿಷ್ಕಾರ ಬಳಸಿಕೊಂಡು ರಂಗಭೂಮಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತಗೊಳಿಸುವ ಬಗೆಯನ್ನು ಅಭ್ಯಸಿಸಬೇಕಾಗಿದೆ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ರಿಜಿಸ್ಟರ್ ಡಾ. ಬಸವರಾಜ ಅನಾಮಿ ಅಭಿಪ್ರಾಯಿಸಿದರು.ಇಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಗೃಹದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಅಭಿನಯ ಭಾರತಿ ಏರ್ಪಡಿಸಿದ್ದ "ಅಭಿನಯ ಭಾರತಿ ಪ್ರಶಸ್ತಿ " ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಜನಾಂಗ ರಂಗಭೂಮಿಯತ್ತ ಬರಲು ಹೊಸ ಮಾಧ್ಯಮಗಳು ಪರಿಣಾಮಕಾರಿ ಯಶಸ್ಸು ನೀಡಬಹುದು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ರಂಗಕರ್ಮಿ, ಪತ್ರಕರ್ತ ಡಾ. ಬಂಡು ಕುಲಕರ್ಣಿ ಮಾತನಾಡಿ, ದಿನಪತ್ರಿಕೆಗಳು ಹೇಗೆ ಹಳೆಯ ಓದುಗರನ್ನು ಉಳಿಸಿಕೊಂಡು ಹೊಸ ಓದುಗರನ್ನು ಆಕರ್ಷಿಸಲು ಪ್ರಯತ್ನಿಸುವವೋ ಅದೇ ರೀತಿಯಲ್ಲಿ ರಂಗಭೂಮಿ ಸಹ ತನ್ನ ಹಳೆಯ ಪ್ರೇಕ್ಷಕರನ್ನು, ನೋಡುಗರನ್ನು ಉಳಿಸಿಕೊಂಡು, ಹೊಸ ಪ್ರೇಕ್ಷಕರನ್ನು, ನೋಡುಗರನ್ನು ರಂಗಭೂಮಿಯತ್ತ ಸೆಳೆಯುವ, ಆಕರ್ಷಿಸುವ ನಿರಂತರ ಪ್ರಯತ್ನ ಮಾಡಬೇಕಾಗಿದೆ ಎಂದರು.ಬಳಿಕ ತಮಗೆ ನೀಡಿದ ಪ್ರಶಸ್ತಿಯ ಹಣವನ್ನು ಅಭಿನಯ ಭಾರತಿಗೆ ಮರಳಿ ನೀಡಿದರು. ಅರವಿಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ವಿನಾಯಕ ನಾಯಕರು ಪ್ರಾಸ್ತಾವಿಕ ಮಾತನಾಡಿದರು. ವಿಶ್ವನಾಥ ಕೋಳಿವಾಡ ಉಪಸ್ಥಿತರಿದ್ದರು. ವೀರೇಶ ಹೊಸಮನಿ ಪ್ರಾರ್ಥಿಸಿದರು. ಸುನಿತಾ ಅರಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ಹರ್ಷ ಡಂಬಳ, ನಿವೃತ್ತ ಮುಖ್ಯ ಎಂಜಿನಿಯರ್ ನಾರಾಯಣ, ಡಾ. ವೀರಣ್ಣ, ಡಾ. ಮೃತ್ಯುಂಜಯ ಕಪಾಲಿ, ಡಾ. ವಾಸುದೇವ ಪರ್ವತಿ, ಡಾ. ಹ ವೆಂ. ಕಾಖಂಡಕಿ, ಉಮೇಶ ನಾಯಕ, ಡಾ. ಎಂ.ಆರ್. ಪಾಟೀಲ, ಸುನಿಲ ಬಾಗೇವಾಡಿ, ಸಮೀರ ಜೋಶಿ, ಆರಾಧ್ಯ, ಪ್ರಮೋದ ವೈದ್ಯ, ಮಾಲತೇಶ ಕತ್ತಿ ಉಪಸ್ಥಿತರಿದ್ದರು.