ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕರ್ನಾಟಕ ನಾಟಕ ಅಕಾಡೆಮಿ, ಶ್ರೀ ರಂಗರಂಗ ಹವ್ಯಾಸಿ ಕಲಾವೃಂದದ ಸಂಯುಕ್ತಾಶ್ರಯದಲ್ಲಿ “ಶಿಕ್ಷಣದಲ್ಲಿ ರಂಗಭೂಮಿ” ಕುರಿತು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಿಕ್ಕನಹಳ್ಳಿಯಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಒಂದು ತಿಂಗಳ ನಿರಂತರ ರಂಗ ತರಬೇತಿ ಶಿಬಿರ ಯಶಸ್ವಿಯಾಯಿತು.ರಂಗ ತರಬೇತಿ ಸಮಯದಲ್ಲಿ ಮಕ್ಕಳಿಗೆ ವಿಚಾರ ಕ್ರಾಂತಿ ನಾಟಕವನ್ನು ಕಲಿಸಿಕೊಡಲಾಯಿತು. ವಿಶ್ರಾಂತ ಪ್ರಾಂಶುಪಾಲರು, ಹಿರಿಯ ಜಾನಪದ ವಿದ್ವಾಂಸರು ಹಾಗೂ ಸಾಹಿತಿ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರ ವಿದ್ಯಾರ್ಥಿಗಳ ಸಮಾರೋಪದಲ್ಲಿ ಕುವೆಂಪು ಮಾಡಿದ ಭಾಷಣದ ಸಾರಾಂಶವನ್ನೇ ‘ವಿಚಾರ ಕ್ರಾಂತಿಗೆ ಕುವೆಂಪು ಕರೆ’ಯನ್ನು ದೇ.ಜ.ಗೌ. ರಚಿಸಿದ್ದರು ಎಂದರು.ಅದನ್ನು ಎಚ್.ಎಂ. ರಂಗಯ್ಯ ನಾಟಕ ರೂಪವನ್ನಾಗಿಸಿ ಮಕ್ಕಳಿಗೆ ತರಬೇತಿ ನೀಡಿ ಪ್ರಯೋಗಿಸಿರುವುದು ನಿಜಕ್ಕೂ ಸಾರ್ಥಕ ರಂಗಕಾಯಕವನ್ನು ಮಾಡಿದ್ದಾರೆ ಎನ್ನುವುದು ಸಂತೋಷದ ಸಂಗತಿ ಎಂದರು.ಪ್ರಾಂಶುಪಾಲ ಜಗದೀಶ ಕಣಕಾಲ ಮಾತನಾಡಿ, 250 ಮಕ್ಕಳಿರುವ ನಮ್ಮ ಶಾಲೆಯಲ್ಲಿ ಈ ಶಿಬಿರ ಮತ್ತು ನಾಟಕಕ್ಕೆ 20 ಮಕ್ಕಳನ್ನು ಆಯ್ಕೆ ಮಾಡಿಕೊಂಡೆವು. ಆದರೆ ಅಚ್ಚುಕಟ್ಟುತನ, ಭಾಷೆ ಬಳಕೆ ಹೀಗೆ ಎಲ್ಲವೂ ಸಮರ್ಥವಾಗಿ ರಂಗದ ಮೇಲೆ ಮೂಡಿ ಬಂದಿತು ಎಂದರು.
ಗಣಿತ ಉಪಾಧ್ಯಾಯರಾದ ಅಂಬುಜ ಎನ್.ಎಂ. ಪ್ರಾರ್ಥಿಸಿದರು. ಕನ್ನಡ ಉಪಾಧ್ಯಾಯ ರಾಜಣ್ಣ ಡಿ. ಸ್ವಾಗತಿಸಿದರು. ಇತಿಹಾಸ ಉಪಾಧ್ಯಾಯ ಪ್ರವೀಣ್‌ಕುಮಾರ್ ಎನ್. ವಂದಿಸಿದರು. ಹಿಂದಿ ಉಪಾಧ್ಯಾಯ ತಿಪ್ಪೇಸ್ವಾಮಿ ಬಿ. ನಿರೂಪಿಸಿದರು. ಮೇಘರಾಜ್ ವೇದಿಕೆ ಸಹಕಾರ ನೀಡಿದರು. ಮಕ್ಕಳು ವಿಚಾರಕ್ರಾಂತಿ ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಿದರು.